ಕುಶಾಲನಗರಕ್ಕೆ ಹೊಸ ತಹಸೀಲ್ದಾರ್‌ ನೇಮಕಕ್ಕೆ ಆಗ್ರಹ

KannadaprabhaNewsNetwork |  
Published : Jul 19, 2026, 04:00 AM IST
ಕುಶಾಲನಗರ ತಾಲೂಕು ಕಚೇರಿ | Kannada Prabha

ಸಾರಾಂಶ

ಕುಶಾಲನಗರ ತಾಲೂಕು ಕಚೇರಿಯಲ್ಲಿ ಕಳೆದ ಒಂದೂವವರೆ ತಿಂಗಳಿನಿಂದ ತಹಸೀಲ್ದಾರ್ ಇಲ್ಲದೆ ತಾಲೂಕಿನ ಜನತೆ ಪರದಾಡುವಂತಾಗಿದೆ. ಕುಶಾಲನಗರ ತಾಲೂಕಿನ ತಹಸೀಲ್ದಾರ್ ಆಗಿದ್ದ ಕಿರಣ್ ಗೌರಯ್ಯ ಅವರು ಒಂದೂವರೆ ತಿಂಗಳ ಹಿಂದೆ ನಿವೃತ್ತರಾಗಿದ್ದು, ಅವರ ಸ್ಥಾನಕ್ಕೆ ನೂತನ ತಹಸೀಲ್ದಾರ್‌ ನೇಮಕಗೊಳ್ಳದ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯಲ್ಲಿ ನಡೆಯಬೇಕಾದ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕುಶಾಲನಗರ ತಾಲೂಕು ಕಚೇರಿಯಲ್ಲಿ ಕಳೆದ ಒಂದೂವವರೆ ತಿಂಗಳಿನಿಂದ ತಹಸೀಲ್ದಾರ್ ಇಲ್ಲದೆ ತಾಲೂಕಿನ ಜನತೆ ಪರದಾಡುವಂತಾಗಿದೆ. ಕುಶಾಲನಗರ ತಾಲೂಕಿನ ತಹಸೀಲ್ದಾರ್ ಆಗಿದ್ದ ಕಿರಣ್ ಗೌರಯ್ಯ ಅವರು ಒಂದೂವರೆ ತಿಂಗಳ ಹಿಂದೆ ನಿವೃತ್ತರಾಗಿದ್ದು, ಅವರ ಸ್ಥಾನಕ್ಕೆ ನೂತನ ತಹಸೀಲ್ದಾರ್‌ ನೇಮಕಗೊಳ್ಳದ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯಲ್ಲಿ ನಡೆಯಬೇಕಾದ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ.

ಸದ್ಯ ಸೋಮವಾರಪೇಟೆ ತಹಸೀಲ್ದಾರ್ ೨ ತಾಲೂಕುಗಳ ಅರ್ಜಿಯನ್ನು ಪರಿಶೀಲಿಸಿ ವಿಲೇವಾರಿಗೊಳಿಸಬೇಕಾಗಿರುವುದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು, ಇದರಿಂದ ಅರ್ಜಿಗಳು ವಿಲೇವಾರಿಗೊಳ್ಳಲು ವಿಳಂಬವಾಗುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ಮಳೆಯಾಗುತ್ತಿದ್ದು, ಮಳೆಯಿಂದಾಗುವ ಅನಾಹುತಗಳು ಸಂಭವಿಸಿದರೆ ಘಟನಾ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವ ಕರ್ತವ್ಯವು ಇವರದ್ದಾಗಿದ್ದು, ಇದರಿಂದ ತಹಸೀಲ್ದಾರ್ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಇದರಿಂದಾಗಿ ದಾಖಲೆ ಪತ್ರಗಳನ್ನು ನಿಗದಿತ ಸಮಯದಲ್ಲಿ ನೀಡಲು ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರು ದೂರಿಕೊಂಡಿದ್ದಾರೆ.

ಕೆಲವು ಸಂದರ್ಭಗಳಲ್ಲಿ ತಹಸೀಲ್ದಾರ್ ಅನ್ಯ ಕಾರ್ಯನಿಮಿತ್ತ ಅಥವಾ ಮೇಲಧಿಕಾರಗಳ ವಿಶೇಷ ಸಭೆ, ಸಚಿವರು ಹಾಗೂ ಶಾಸಕರು ಭೇಟಿಯ ಸಂದರ್ಭದಲ್ಲೂ ೨ ತಾಲೂಕುಗಳ ಮೇಲ್ವಿಚಾರಣೆಯನ್ನು ಅವರು ಮಾಡಬೇಕಾದ ಹಿನ್ನೆಲೆಯಲ್ಲಿ ಸೋಮವಾರಪೇಟೆ ಅಥವಾ ಕುಶಾಲನಗರದಲ್ಲಿ ಸಾರ್ವಜನಿಕರಿಗೆ ತಾಲೂಕು ದಂಡಾಧಿಕಾರಿ ಲಭ್ಯವಿಲ್ಲದೆ ಬಂದ ದಾರಿಗೆ ಸುಂಕವಿಲ್ಲ ಎಂಬಂತಾಗುತ್ತಿದೆ.

ಬೆಳೆಯುತ್ತಿರುವ ಹೋಬಳಿ ಕೇಂದ್ರಗಳಲ್ಲಿ ಕುಶಾಲನಗರ, ಸುಂಟಿಕೊಪ್ಪ, ಹೆಬ್ಬಾಲೆ ನೆಲುಹುದಿಕೇರಿ ಸೇರಿದಂತೆ ಇನ್ನಷ್ಟು ಗ್ರಾಮಗಳು ತಾಲೂಕು ಕೇಂದ್ರದ ಅಧೀನಕ್ಕೆ ಬರುತ್ತಿದ್ದು, ತಹಸೀಲ್ದಾರ್ ಅನ್ಯ ಕೆಲಸದ ನಿಮಿತ್ತ ತೆರಳಿದಾಗ ನೂರಾರು ರು. ವ್ಯಯಿಸಿ ಇಲ್ಲಿಗೆ ಆಗಮಿಸುವ ಬಡ ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳು ನೆರವೇರದೆ ಹಿಂತಿರುಗುವ ಪರಿಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.

ಕೂಡಲೇ ಸಂಬಂಧಿಸಿದ ಶಾಸಕರು, ಮೇಲಧಿಕಾರಿಗಳು, ಮುಖಂಡರು ಈ ಬಗ್ಗೆ ಗಮನಹರಿಸಿ ನೂತನ ತಹಸೀಲ್ದಾರ್ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಲಮಟ್ಟಿಯಿಂದ ನಾರಾಯಣಪುರ ಜಲಾಶಯಕ್ಕೆ ನೀರು ಬಿಡುಗಡೆ
ಚೆನ್ನಮ್ಮ ದೇವೇಗೌಡ ನಿಧನಕ್ಕೆ ಸಂಸದ ಗದ್ದಿಗೌಡರ ಸಂತಾಪ