ಬಳ್ಳಾರಿ: ಸವಿತಾ ಸಮಾಜದ ಕುಲವೃತ್ತಿಯ ಅಪಮಾನಿಸಿ ಪದ ಬಳಕೆ ಮಾಡಿರುವ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸವಿತಾ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಮಂಗಳವಾರ ಸವಿತಾ ಸಮಾಜ ಸಂಘದಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
2011ರಲ್ಲೇ ರಾಜ್ಯ ಸರ್ಕಾರ ಹಜಾಮ ಎಂಬ ಪದವನ್ನು ನಿಷೇಧಗೊಳಿಸಿದೆ. ಹಾಗಿದ್ದರೂ ಪ್ರತಿನಿತ್ಯ ರಾಜಕೀಯ ಪ್ರತಿನಿಧಿಗಳು ತಮ್ಮ ರಾಜಕೀಯ ತೆವಲಿಗೆ ನಿಷೇಧಿತ ಪದ ಬಳಕೆ ಮಾಡುತ್ತ ರಾಜ್ಯದ ಸವಿತಾ ಸಮಾಜ ಬಂಧುಗಳನ್ನು ಅವಮಾನಿಸುತ್ತಿದ್ದಾರೆ. ಇತ್ತೀಚೆಗೆ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ನಿಷೇಧಿತ ಪದವನ್ನು ಬಳಕೆ ಮಾಡಿದ್ದು, ಇದು ರಾಜ್ಯದ ಸವಿತಾ ಸಮಾಜದವರಿಗೆ ನೋವುಂಟು ಮಾಡಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಸವಿತಾ ಸಮಾಜದ ನಗರ ಅಧ್ಯಕ್ಷ ಅರುಣ್ ಹಾಗೂ ಉಪಾಧ್ಯಕ್ಷ ಟಿ.ನಾಗರಾಜ್ ಅವರು ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರ ಪದ ಬಳಕೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಶೋಷಿತ ಸಮುದಾಯದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುವುದು ಸರಿಯಲ್ಲ. ಸವಿತಾ ಸಮಾಜ ತನ್ನದೇ ಆದ ಮಹತ್ವದ ಕೊಡುಗೆ ನೀಡುತ್ತಿದೆ. ಸಮಾಜದ ಸೇವೆಯನ್ನು ಪರಿಗಣಿಸದೆ ಬಾಯಿಗೆ ಬಂದಂತೆ ಮಾತನಾಡುವುದನ್ನು ಸಮಾಜ ಸಹಿಸುವುದಿಲ್ಲ ಎಂದು ಎಚ್ಚರಿಸಿದರಲ್ಲದೆ, ಕೂಡಲೇ ಶಾಸಕ ಯತ್ನಾಳ್ ಅವರು ಮಾಧ್ಯಮಗಳ ಮೂಲಕ ಬಹಿರಂಗವಾಗಿ ಸಮಾಜದ ಕ್ಷಮೆಯಾಚಿಸಬೇಕು. ಮುಂದೆ ಈ ರೀತಿಯ ಮಾತುಗಳನ್ನಾಡುವುದಿಲ್ಲ ಎಂದು ತಿಳಿಸಬೇಕು ಎಂದು ಆಗ್ರಹಿಸಿದರು.ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಜಮಾಯಿಸಿದ ಸವಿತಾ ಸಮಾಜ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಮಹ್ಮದ್ ಝುಬೇರ್ ಮನವಿ ಸ್ವೀಕರಿಸಿದರು.
ಬಳ್ಳಾರಿ ನಗರ ಸವಿತಾ ಸಮಾಜ ಸಂಘದ ಗೌರವ ಅಧ್ಯಕ್ಷ ಪಿ. ಗೋವಿಂದರಾಜುಲು, ಪ್ರಧಾನ ಕಾರ್ಯದರ್ಶಿ ಸಿ. ನಾರಾಯಣ, ಖಜಾಂಚಿ ಆನಂದ್, ಯುವ ಘಟಕದ ಅಧ್ಯಕ್ಷ ರಾಕೇಶ್ ವಿ., ಹಿರಿಯ ಮುಖಂಡರಾದ ಡಿ.ಎಂ. ಚಂದ್ರಶೇಖರ್, ಎಂ. ನಾಗರಾಜ್, ಎಂ. ಕೃಷ್ಣ, ವೆಂಕಟರಾವ್, ಎಂ. ಗೋವಿಂದ, ಎಂ. ಸುಮನ್, ಎಂ.ಮೋಹನ್, ಗಂಗಾಧರ್, ಮಹೇಶ್, ಮುರಳಿ, ಮಾರುತಿ, ಚಿಟ್ಟಿ ಬಾಬು, ಪ್ರತಾಪ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.