ರಸ್ತೆ ಗುಂಡಿ ಸಮಸ್ಯೆಗೆ ಡ್ರೈನೆಜ್‌ ಲೇಯರ್‌ ತಂತ್ರಜ್ಞಾನ ಬಳಕೆ

KannadaprabhaNewsNetwork |  
Published : Dec 03, 2025, 02:45 AM IST
 ಡ್ರೈನೆಜ್ ಲೆಯರ್ ನಿರ್ಮಾಣ | Kannada Prabha

ಸಾರಾಂಶ

ಭಾರಿ ಮಳೆ ಕಾರಣದಿಂದ ಕಾರ್ಕಳ ತಾಲೂಕಿನ ಹಲವೆಡೆ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದ್ದವು. ವಾಹನ ಸಂಚಾರಕ್ಕೆ ಅಡ್ಡಿಯಾದ ಈ ಸಮಸ್ಯೆಗೆ ಪರಿಹಾರವಾಗಿ ಲೋಕೋಪಯೋಗಿ ಇಲಾಖೆ ಡ್ರೈನೆಜ್ ಲೇಯರ್ ತಂತ್ರಜ್ಞಾನ ಬಳಸಿ ರಸ್ತೆಗಳಿಗೆ ಹೊಸ ಜೀವ ತುಂಬುವ ಕೆಲಸ ಕೈಗೊಂಡಿದೆ.

ರಾಂ‌ ಅಜೆಕಾರು ಕಾರ್ಕಳ

ಈ ವರ್ಷದ ಮೇ ತಿಂಗಳಿಂದ ನವೆಂಬರ್ ಅಂತ್ಯದವರೆಗೆ ಕರಾವಳಿ ಮತ್ತು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ದಾಖಲೆ ಮಟ್ಟದ ಮಳೆ ಸುರಿದ ಪರಿಣಾಮ ಕಾರ್ಕಳ ತಾಲೂಕಿನ ಹಲವೆಡೆ ರಸ್ತೆಗಳಲ್ಲಿ ಹೊಂಡ–ಗುಂಡಿಗಳು ಹೆಚ್ಚಾಗಿದ್ದವು. ವಾಹನ ಸಂಚಾರಕ್ಕೆ ಅಡ್ಡಿಯಾದ ಈ ಸಮಸ್ಯೆಗೆ ಪರಿಹಾರವಾಗಿ ಲೋಕೋಪಯೋಗಿ ಇಲಾಖೆ ಡ್ರೈನೆಜ್ ಲೇಯರ್ ತಂತ್ರಜ್ಞಾನ ಬಳಸಿ ರಸ್ತೆಗಳಿಗೆ ಹೊಸ ಜೀವ ತುಂಬುವ ಕೆಲಸ ಕೈಗೊಂಡಿದೆ.

ಕಳೆದ ವರ್ಷ ಕಾರ್ಕಳ ತಾಲೂಕಿನ ನಲ್ಲೂರು, ಪಾಜೆಗುಡ್ಡೆ, ಬಜಗೊಳ್ಳಿ ಗುರುಗಲ್‌ಗುಡ್ಡೆ, ನಲ್ಲೂರು ಕ್ರಾಸ್ ಮತ್ತು ನೆಲ್ಲಿಕಾರಿ ಪಾಜಿನಡ್ಕ ಪ್ರದೇಶಗಳಲ್ಲಿ ಭಾರೀ ಹೊಂಡ ಗುಂಡಿಗಳ ಸಮಸ್ಯೆ ಎದುರಾದಾಗ ಇದೇ ವಿಧಾನ ಅನುಸರಿಸಲಾಗಿತ್ತು. ನಂತರ ಆ ರಸ್ತೆಗಳಲ್ಲಿ ಗುಣಮಟ್ಟ ಹಾಗೂ ಬಾಳಿಕೆ ಲಕ್ಷಣೀಯವಾಗಿ ಹೆಚ್ಚಿರುವುದು ಇಲಾಖೆಗೆ ಉತ್ತೇಜನ ನೀಡಿದೆ.ಈ ಬಾರಿ ರಾಜ್ಯ ಹೆದ್ದಾರಿ-1 ವ್ಯಾಪ್ತಿಯ ಎಣ್ಣೆಹೊಳೆ, ಕೈಕಂಬ ಹಾಗೂ ಅಜೆಕಾರು ಚರ್ಚ್ ರಸ್ತೆಗಳಲ್ಲಿ ಟ್ರೆಂಚ್ ನಿರ್ಮಾಣ ನಡೆಯುತ್ತಿದೆ. ಈಗಾಗಲೇ ರಸ್ತೆ ಅಗೆಯುವ ಕಾರ್ಯ ಪೂರ್ಣಗೊಂಡಿದ್ದು, ಎರಡು ದಿನಗಳಲ್ಲಿ ಡಾಂಬರೀಕರಣ ಪ್ರಕ್ರಿಯೆಯೂ ಮುಕ್ತಾಯಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಡ್ರೈನೆಜ್ ಲೆಯರ್ ಪರಿಣಾಮ: ಭೂಮಿಯ ತೇವಾಂಶ ಮತ್ತು ರಸ್ತೆ ವಾಟರ್ ಟೇಬಲ್ ಹೆಚ್ಚಿರುವ ಪ್ರದೇಶಗಳಲ್ಲಿ ನೀರು ರಸ್ತೆಯ ಕೆಳಭಾಗದಲ್ಲೇ ನಿಲ್ಲುವುದು ಸಾಮಾನ್ಯ. ಇದರಿಂದ ಡಾಂಬರು ಪದರ ಬಿರುಕು ಕಾಣಿಸಿ ಕಿತ್ತು ಹೋಗುತ್ತಿದ್ದು, ಕೆಲವು ತಿಂಗಳಲ್ಲಿ ರಸ್ತೆಗಳು ಹಾಳಾಗುತ್ತಿದ್ದವು. ಈ ಸಮಸ್ಯೆಗೆ ಪರಿಹಾರವಾಗಿ ಸುಮಾರು ಒಂದೂವರೆ ಫೀಟ್ ಆಳಕ್ಕೆ ಟ್ರೆಂಚ್‌ ಅಗೆದು, ವೆಲ್ ಗ್ರೇಡೆಡ್ ಜಲ್ಲಿಕಲ್ಲು, ಮರಳು ಮತ್ತು ಇತರ ಅಗತ್ಯ ವಸ್ತುಗಳನ್ನು ಸರಿಯಾದ ಪ್ರಮಾಣದಲ್ಲಿ ತುಂಬಲಾಗುತ್ತದೆ. ಇದರಿಂದ ನೀರು ಮೇಲ್ಮೈಯಲ್ಲಿ ನಿಲ್ಲದೆ ಭೂಮಿಯೊಳಗೆ ಸುಲಭವಾಗಿ ಇಂಗುವಂತಾಗುತ್ತದೆ.

ರಸ್ತೆಯಲ್ಲಿ ನೀರು ನಿಂತುಹೋಗದ ಕಾರಣ ಡಾಂಬರು ದೀರ್ಘಕಾಲ ಬಾಳಿಕೆ ನೀಡುತ್ತದೆ. ವಿಶೇಷವಾಗಿ ಮಳೆ ಹೆಚ್ಚು ಸುರಿಯುವ ಪಶ್ಚಿಮಘಟ್ಟ ಮತ್ತು ಕರಾವಳಿ ಪ್ರದೇಶಗಳಲ್ಲಿ ಈ ವಿಧಾನ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಂಜಿನಿಯರ್‌ಗಳು ಹೇಳಿದ್ದಾರೆ.ಡ್ರೈನೆಜ್ ಲೆಯರ್ ನಿರ್ಮಾಣದಿಂದ ರಸ್ತೆ ಬಾಳಿಕೆ ಹೆಚ್ಚಾಗುವುದು, ಸಂಚಾರ ಸುಗಮಗೊಳ್ಳುವುದು ಹಾಗೂ ಮಳೆಗಾಲದಲ್ಲಿ ಹೊಂಡ, ಗುಂಡಿಗಳ ಪ್ರಮಾಣ ಕಡಿಮೆಯಾಗುವುದು ಇಲಾಖೆಯ ನಿರೀಕ್ಷೆ. ಕಾರ್ಕಳ ತಾಲೂಕಿನ ಪ್ರಮುಖ ರಸ್ತೆಗಳಲ್ಲಿ ನಡೆಯುತ್ತಿರುವ ಈ ಕೆಲಸ ಮುಂದಿನ ಮಳೆಗಾಲಕ್ಕೆ ಮುನ್ನ ರಸ್ತೆ ಸಮಸ್ಯೆಗಳನ್ನು ತಡೆಯುವಲ್ಲಿ ಸಹಾಯಕವಾಗಲಿದೆ.ಈ ಬಾರಿ ಕಾರ್ಕಳ ತಾಲೂಕಿನಲ್ಲಿ ಸುಮಾರು 4 ಕೋಟಿ ರು. ವೆಚ್ಚದಲ್ಲಿ ಎಲ್ಲಾ ರಸ್ತೆಗಳಲ್ಲಿನ ಹೊಂಡಗಳನ್ನು ಮುಚ್ಚಲಾಗುತ್ತಿದೆ. ಅದರಲ್ಲೂ ಈ ಅತಿಹೆಚ್ಚು ಮಳೆಯಿಂದ ಹಾನಿಗೀಡಾದ ಪ್ರದೇಶಗಳ ರಸ್ತೆಗಳಲ್ಲಿ ಡ್ರೈನೆಜ್ ಲೆಯರ್ ನಿರ್ಮಾಣ ಮಾಡಿ ಡಾಂಬರು ಮಾಡಲಾಗುತ್ತಿದೆ. ಇದರಿಂದಾಗಿ ರಸ್ತೆಯ ಗುಣಮಟ್ಟ ಹಾಗು ಸದೃಢತೆ ಹೆಚ್ಚುತ್ತದೆ. ಲೇಯರ್ ಕೆಳಗೆ ನೀರು ಸರಾಗವಾಗಿ ಹರಿಯುತ್ತದೆ.-ಸೋಮಶೇಖರ್, ಎಂಜಿನಿಯರ್ ಪಿಡಬ್ಲ್ಯುಡಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

50% ಮುಗಿದ ವಾರಾಹಿ ಏತ ನೀರಾವರಿಗೆ ತಡೆ : ಕಿಚ್ಚು
ಬಿಜೆಪಿ- ದಳ ಶಾಸಕರಿಗೆ ಇಂದು ಚೌಹಾಣ್‌ ಜಿ ರಾಮ್‌ ಜಿ ಪಾಠ!