ಕನ್ನಡಪ್ರಭ ವಾರ್ತೆ ಮಂಡ್ಯ
ವೈದ್ಯಕೀಯ ಕ್ಷೇತ್ರದ ತುರ್ತು ಸಂದರ್ಭಗಳಲ್ಲಿ ಡ್ರೋನ್‌ಗಳ ಬಳಕೆ ಹೊಸ ಮೈಲಿಗಲ್ಲು ಎಂದು ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅವರು ಹೇಳಿದರು.ಶನಿವಾರ ನಗರದ ಮಿಮ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ ಐಕಾಟ್ (ಐಸಿಎಟಿಟಿ) ಸಂಸ್ಥೆ ವತಿಯಿಂದ ಆಯೋಜಿಸಿದ್ದ ಮೆಡಿಕಲ್ ಡ್ರೋನ್ ಡ್ರಿಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡ್ರೋನ್ ಗಳನ್ನು ಔಷಧ ಸಿಂಪಡಿಸುವಿಕೆ, ಗೊಬ್ಬರ, ಫರ್ಟಿಲೈಸರ್ಸ್‌ಗಳನ್ನು ಹಾಕಲು ಕೃಷಿ ಕ್ಷೇತ್ರದಲ್ಲಿ ಹೆಚ್ಚಾಗಿ ಉಪಯೋಗಿಸಲಾಗುತ್ತಿದೆ ಎಂದರು.
ಐಕಾಟ್ (ಐಸಿಎಟಿಟಿ) ಸಂಸ್ಥೆಯವರು ತುರ್ತು ಆರೋಗ್ಯ ಸೇವೆಗಳನ್ನು ಡ್ರೋನ್ ಮೂಲಕ ಒದಗಿಸಬಹುದು ಎಂಬುದನ್ನು ವಿನೂತನ ಪ್ರಯೋಗದ ಮೂಲಕ ಜಗತ್ತಿಗೆ ಪರಿಚಯಿಸಲು ಹೊರಟಿದ್ದಾರೆ. ತುರ್ತಾಗಿ ನೀಡಬೇಕಾದ ವೈದ್ಯಕೀಯ ಡ್ರಗ್ಸ್‌ನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಎಲ್ಲಿಯೂ ತಡಮಾಡದೆ ಅಗತ್ಯವಿರುವ ರೋಗಿ ನೀಡಿ ಪ್ರಾಣ ಉಳಿಸಬಹುದಾದ ಈ ಕಾರ್ಯ ವೈದ್ಯಕೀಯ ಕ್ಷೇತ್ರದಲ್ಲಿ ಮಾರ್ಪಾಡು ತರುತ್ತದೆ ಎಂದು ಹೇಳಿದರು.ಎಷ್ಟೋ ತುರ್ತು ಸನ್ನಿವೇಶಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗದೆ ಅಥವಾ ಸರಿಯಾದ ಸಮಯಕ್ಕೆ ಔಷಧ ದೊರೆಯದೇ ರೋಗಿಗಳು ತಮ್ಮ ಉಸಿರು ಚೆಲ್ಲುವ ಅನಿವಾರ್ಯ ಉಂಟಾಗಿದೆ. ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ಡ್ರೋನ್ ಮೂಲಕ ಅಗತ್ಯ ಔಷಧಗಳನ್ನು ಕಳಿಸುವುದರಿಂದ ಇಂತಹ ಅನೇಕ ಸಾವು ನೋವುಗಳನ್ನು ತಡೆಗಟ್ಟಬಹುದಾಗಿದೆ, ತುರ್ತು ಸಂದರ್ಭಗಳಲ್ಲಿ ಡ್ರೋನ್ ಗಳ ಬಳಕೆ ವೈದ್ಯಕೀಯ ಕ್ಷೇತ್ರದಲ್ಲಿ ಮೈಲುಗಲ್ಲು ಆಗಬಹುದು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಡ್ರೋನ್ ಗಳ ಬಳಕೆ ಪೊಲೀಸ್ ಇಲಾಖೆಗೂ ಅತ್ಯವಶ್ಯಕ, ತುರ್ತಾಗಿ ಆರೋಗ್ಯ ಸೇವೆ ಅಗತ್ಯವಿದ್ದಾಗ ಅಂಬ್ಯುಲೆನ್ಸ್ ಗಳಿಗೆ ಜೀರೋ ಕ್ಲಿಯರೆನ್ಸ್ ನೀಡಬೇಕಾಗುತ್ತದೆ, ದೊಡ್ಡ ದೊಡ್ಡ ನಗರಗಳಲ್ಲಿ ಕಡಿಮೆ ಸಮಯದಲ್ಲಿ ರಸ್ತೆಗಳನ್ನು ಜೀರೋ ಕ್ಲಿಯರೆನ್ಸ್ ಮಾಡುವುದು ಕಷ್ಟಕರವಾಗುತ್ತದೆ ಹಾಗೂ ನಿರ್ದಿಷ್ಟ ಸಮಯದಲ್ಲಿ ಔಷಧಿ ದೊರೆಯದೇ ಹೋದರೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದರು.ಆದರೆ ಇಂತಹ ತುರ್ತು ಸಂದರ್ಭಗಳಲ್ಲಿ ಡ್ರೋನ್ ಗಳನ್ನು ಬಳಸಿಕೊಳ್ಳುವುದರಿಂದ ಯಾವುದೇ ರೀತಿಯ ಸಮಯ ವ್ಯರ್ಥವಾಗದೆ ಸೂಕ್ತ ಸಮಯದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ, ವೈದ್ಯಕೀಯ ಕ್ಷೇತ್ರದಲ್ಲಿ ಡ್ರೋನ್ ಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡರೆ ಇದೊಂದು ಮಹತ್ವದ ಸಾಧನೆಯಾಗಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ ಕೆ ಮೋಹನ್, ಜಿಲ್ಲಾ ವೈದ್ಯಕೀಯ ಅಧೀಕ್ಷಕರಾದ ಡಾ. ಶಿವಕುಮಾರ್, ಐಕಾಟ್ (ಐಸಿಎಟಿಟಿ) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಶಾಲಿನಿ ನಲ್ವಾಡ್, ಡಾ. ಚೇತನ್, ಅಂಬರ್ ವಿಂಗ್ಸ್ ಸಂಸ್ಥೆಯ ದಿವ್ಯ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.ಮೆಡಿಕಲ್ ಡ್ರೋನ್ ಡ್ರಿಲ್:
ಹೃದಯ ಸ್ಥಬ್ದವಾದ ರೋಗಿಗೆ ನಗರ ಮಿಮ್ಸ್ ಆಸ್ಪತ್ರೆಯಿಂದ ಡ್ರೋನ್ ಮೂಲಕ ಕಿರುಗಾವಲು ಹೋಬಳಿಯ ಚಿಕ್ಕಮಲಗೂಡಿಗೆ ಔಷಧ ತಲುಪಿಸಿ ಜೀವ ಉಳಿಸುವ ರೀತಿಯಲ್ಲಿ ಅಣುಕು ಪ್ರದರ್ಶನ ನೀಡಲಾಯಿತು.