ಹುಲಿಗಳನ್ನು ಕೊಲ್ಲಲು ಕೀಟನಾಶಕ ಕಾರ್ಬೋಫುರಾನ್ ಬಳಕೆ

KannadaprabhaNewsNetwork |  
Published : Jul 13, 2025, 01:18 AM IST
ಹುಲಿಗಳನ್ನು ಕೊಲ್ಲಲು ಕೀಟನಾಶಕ ಕಾರ್ಬೋಫುರಾನ್ ಬಳಕೆ | Kannada Prabha

ಸಾರಾಂಶ

ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳ ಅಸಹಜ ಸಾವಿನ ಪ್ರಕರಣವನ್ನು ತನಿಖೆ ಮಾಡುತ್ತಿರುವ ಉನ್ನತ ಮಟ್ಟದ ಸಮಿತಿಗೆ, ಹುಲಿಗಳನ್ನು ಕೊಲ್ಲಲು ಅತ್ಯಂತ ವಿಷಕಾರಿ ಕೀಟನಾಶಕ ಕಾರ್ಬೋಫುರಾನ್ ಬಳಸಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳ ಅಸಹಜ ಸಾವಿನ ಪ್ರಕರಣವನ್ನು ತನಿಖೆ ಮಾಡುತ್ತಿರುವ ಉನ್ನತ ಮಟ್ಟದ ಸಮಿತಿಗೆ, ಹುಲಿಗಳನ್ನು ಕೊಲ್ಲಲು ಅತ್ಯಂತ ವಿಷಕಾರಿ ಕೀಟನಾಶಕ ಕಾರ್ಬೋಫುರಾನ್ ಬಳಸಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.ತಜ್ಞರ ಸಮಿತಿ ಒಂದು ಅಥವಾ ಎರಡು ದಿನಗಳಲ್ಲಿ ಅರಣ್ಯ ಸಚಿವರಿಗೆ ತಮ್ಮ ವರದಿಯನ್ನು ಸಲ್ಲಿಸಲಿದೆ. ಆರೋಪಿಗಳು ತಮ್ಮ ದನಕರುಗಳನ್ನು ಹುಲಿ ಕೊಂದಿದ್ದಕ್ಕೆ ಪ್ರತೀಕಾರವಾಗಿ ಈ ಕೀಟನಾಶಕವನ್ನು ಬಳಸಿದ್ದಾರೆ ಎಂದು ತನಿಖಾ ತಂಡಕ್ಕೆ ತಿಳಿದು ಬಂದಿದೆ. ಹಸುವಿಗೆ ವಿಷ ಹಾಕಿ ಕೊಲ್ಲಲು ಗುರಿಯಾಗಿದ್ದು ಕೇವಲ ಒಂದು ಹುಲಿಯಾದರೂ, ದನವನ್ನು ಕೊಂದಿದ್ದ ಆ ಹೆಣ್ಣು ಹುಲಿಯು ತನ್ನ ನಾಲ್ಕು ಮರಿಗಳೊಂದಿಗೆ ಶವವನ್ನು ತಿನ್ನಲು ಮರಳಿತ್ತು. ಹೀಗಾಗಿ ಐದೂ ಹುಲಿಗಳು ವಿಷದಿಂದ ಸಾವನ್ನಪ್ಪಿವೆ.ಪ್ರಯೋಗಾಲಯ ವಿಶ್ಲೇಷಣೆ ವರದಿಗಳು ಮತ್ತು ಹುಲಿಗಳ ಮರಣೋತ್ತರ ಪರೀಕ್ಷೆಯಲ್ಲಿ ಆರೋಪಿಗಳು ದನದ ಶವದ ಮೇಲೆ ಕಾರ್ಬೋಫುರಾನ್ ಸಿಂಪಡಿಸಿದ್ದಾರೆ ಎಂದು ದೃಢಪಟ್ಟಿದೆ, ಎಂದು ತನಿಖಾ ಸಮಿತಿಯ ಓರ್ವ ಸದಸ್ಯರು ತಿಳಿಸಿದ್ದಾರೆ.

ಈ ಕಾರ್ಬೊಫುರಾನ್ ಕೀಟನಾಶಕವು ಪ್ರಾಣಿಗಳು, ಪಕ್ಷಿಗಳು ಮತ್ತು ವನ್ಯಜೀವಿಗಳಿಗೆ ಗಂಭೀರ ದುಷ್ಪರಿಣಾಮವನ್ನುಂಟುಮಾಡುತ್ತದೆ. ಇದು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ ಎಂದು ಪರಿಸರ ತಜ್ಞರು ಹೇಳುತ್ತಾರೆ.ಜಿಮ್ ಕಾರ್ಬೆಟ್ ಹುಲಿ ರಕ್ಷಿತಾರಣ್ಯದಲ್ಲೂ ಇದೇ ವಿಷ ಬಳಕೆ: ಈ ಹಿಂದೆ, ಉತ್ತರ ಖಂಡದ ಜಿಮ್ ಕಾರ್ಬೆಟ್ ಹುಲಿ ರಕ್ಷಿತಾರಣ್ಯದ ತೆರಾಯ್ ಪ್ರದೇಶದಲ್ಲಿ ಎರಡು ಹುಲಿಗಳಿಗೆ ವಿಷ ಉಣಿಸಿದ ಪ್ರಕರಣದ ತನಿಖೆಯಲ್ಲಿ ಕಾರ್ಬೋಫುರಾನ್ ಬಳಕೆಯಾಗಿತ್ತು. ಇತರ ರಾಸಾಯನಿಕಗಳಂತೆ ತೀವ್ರವಾದ ವಾಸನೆಯಿಲ್ಲದೇ, ವಾಸನೆ ರಹಿತವಾಗಿರುವುದರಿಂದ ಕಾರ್ಬೊಫುರಾನ್ ವಿಷವನ್ನು ಗುರುತಿಸಲು ವನ್ಯಜೀವಿಗಳಿಗೆ ಕಷ್ಟವಾಗುತ್ತದೆ, ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.ದನದ ಶವದ ಹಿಂಭಾಗದಲ್ಲಿ, ಕೊಬ್ಬಿನಂಶ ಹೆಚ್ಚಿರುವ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಫುರಾನ್ ಸಿಂಪಡಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ತನಿಖಾ ಸಂಸ್ಥೆಯು ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಹುಲಿಗಳ ಸಾವಿನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲಿದೆ.ಜೂನ್ 26 ರಂದು ಮಲೆ ಮಹದೇಶ್ವರ ವನುಜೀವಿ ವಿಭಾಗದ ಹೂಗ್ಯಂ ಪ್ರದೇಶದಲ್ಲಿ ತಾಯಿ ಹುಲಿ ಸೇರಿ ಐದು ಹುಲಿಗಳು ವಿಷಪ್ರಾಶನದಿಂದ ಮೃತಪಟ್ಟಿರುವ ಘಟನೆ ನಡೆದಿತ್ತು. ಈ ಘಟನೆಯ ತನಿಖೆಗೆ ತಂಡವನ್ನು ನೇಮಿಸಲಾಗಿತ್ತು. ಈ ತಂಡದಲ್ಲಿ ಹಿರಿಯ ಅರಣ್ಯಾಧಿಕಾರಿಗಳು, ವನ್ಯಜೀವಿ ತಜ್ಞರು, ವನ್ಯಜೀವಿ ಪರಿಪಾಲಕರಿದ್ದಾರೆ.

ಕಾರ್ಬೊಫುರಾನ್‌ಗೆ ಅಮೆರಿಕಾ, ಯೂರೋಪ್ ನಿಷೇಧ ಭಾರತದಲ್ಲಿ ಅನುಮತಿ:

ಕಾರ್ಬೊಫುರಾನ್ ಕೀಟನಾಶಕವಾಗಿದ್ದು, ಇದನ್ನು ಆಲೂಗಡ್ಡೆ, ಜೋಳ, ಭತ್ತ, ಸೋಯಾಬೀನ್ ಮತ್ತು ಹಣ್ಣಿನ ಕೃಷಿಯಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಇದು ಸಸ್ತನಿಗಳಿಗೆ, ಪಕ್ಷಿಗಳಿಗೆ, ಜಲಚರಿಗಳಿಗೆ ಅತ್ಯಂತ ವಿಷಕಾರಿಯಾಗಿದೆ. ಈ ಕೀಟನಾಶಕ ಬಳಕೆಯನ್ನು ಅಮೆರಿಕಾ, ಯೂರೋಪಿಯನ್ ಒಕ್ಕೂಟ, ಕೆನಡಾದಲ್ಲಿ ನಿಷೇಧಿಸಲಾಗಿದೆ. ಭಾರತದಲ್ಲಿ ಕಾರ್ಬೊಫುರಾನ್‌ನ ಹರಳುಗಳ ಬಳಕೆಗೆ ಅನುಮತಿಯಿದೆ.

PREV

Latest Stories

ಅಂಗನವಾಡಿ ಮಕ್ಕಳ ಅನುಕೂಲಕ್ಕಾಗಿ 'ಅಪಾರ್‌ ಐಡಿ': ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ
ರಾಜ್ಯದ 14 ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ
ಲಾಕ್ಡೌನ್ನಿಂದ ಹುಟ್ಟಿ, ಕಪೆಕ್ನಿಂದ ಬೆಳೆದು ನಿಂತ ಉದ್ಯಮ