ವಾಣಿಜ್ಯ ಬೆಳೆಯಾಗಿ ಕಳೆದೆರಡು ದಶಕಗಳಿಂದ ಮಲೆನಾಡಿನ ಸಮೃದ್ಧ ನೆಲವನ್ನು ಬರಡು ಭೂಮಿಯನ್ನಾಗಿಸುವ ‘ಪಾಯಿಸನ್ ಕೇಕ್’ ಎಂದೇ ಕುಖ್ಯಾತಿ ಶುಂಠಿ ಬೆಳೆ ಇದೀಗ ಇನ್ನೊಂದು ರೂಪದ ಮೂಲಕ ಮಲೆನಾಡಿನ ಪರಿಸರವನ್ನು ಕಲುಷಿತಗೊಳಿಸುತ್ತಿದೆ.
ಗೋಪಾಲ್ ಯಡಗೆರೆಕನ್ನಡಪ್ರಭ ವಾರ್ತೆ ಶಿವಮೊಗ್ಗವಾಣಿಜ್ಯ ಬೆಳೆಯಾಗಿ ಕಳೆದೆರಡು ದಶಕಗಳಿಂದ ಮಲೆನಾಡಿನ ಸಮೃದ್ಧ ನೆಲವನ್ನು ಬರಡು ಭೂಮಿಯನ್ನಾಗಿಸುವ ‘ಪಾಯಿಸನ್ ಕೇಕ್’ ಎಂದೇ ಕುಖ್ಯಾತಿ ಶುಂಠಿ ಬೆಳೆ ಇದೀಗ ಇನ್ನೊಂದು ರೂಪದ ಮೂಲಕ ಮಲೆನಾಡಿನ ಪರಿಸರವನ್ನು ಕಲುಷಿತಗೊಳಿಸುತ್ತಿದೆ.
ದ್ವಿತೀಯ ದರ್ಜೆಯ ಅಥವಾ ತಿರಸ್ಕೃತ ದರ್ಜೆಯ ಹಸಿ ಶುಂಠಿಗೆ ಉತ್ತಮ ಬಣ್ಣ ಬರಲು, ಅದರ ಹೊಳಪು ಹೆಚ್ಚಿಸಿ ಮೊದಲ ದರ್ಜೆಯ ಶುಂಠಿಯಂತೆ ಕಾಣಲು ಹಸಿ ಶುಂಠಿಯನ್ನು ಒಣಗಿಸುವಾಗ ವ್ಯಾಪಕವಾಗಿ ಗಂಧಕದ ಹೊಗೆ ಬಳಸಲಾಗುತ್ತಿದೆ. ಇದು ಪರಿಸರದ ಮೇಲೆ ಮಾತ್ರವಲ್ಲ, ಮನುಷ್ಯನ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ.ಹಸಿ ಶುಂಠಿಗೆ ಬೆಲೆ ಇಲ್ಲದ ವೇಳೆಯಲ್ಲಿ ವ್ಯಾಪಾರಸ್ಥರು ಶುಂಠಿ ಬೆಳೆಗಾರರಿಂದ ಹಸಿ ಶುಂಠಿ ಕೊಂಡು ಅದನ್ನು ಒಣಗಿಸುತ್ತಾರೆ. ಹೀಗೆ ಕೊಳ್ಳುವಾಗ ಹಸಿ ಶುಂಠಿಯನ್ನು ಗುಣಮಟ್ಟಕ್ಕೆ ತಕ್ಕಂತೆ ವರ್ಗೀಕರಿಸಿ ಬೆಲೆ ನಿಗದಿಪಡಿಸಲಾಗುತ್ತದೆ. ಅನೇಕ ಕಾರಣಕ್ಕೆ ಚಿಕ್ಕ ಗಾತ್ರದ ಮತ್ತು ಬಣ್ಣ ಮಾಸಿದಂತಿರುವ ಶುಂಠಿಗಳನ್ನು ದ್ವಿತೀಯ ದರ್ಜೆ ಅಥವಾ ತಿರಸ್ಕೃತ ದರ್ಜೆಯದೆಂದು ವರ್ಗೀಕರಿಸಲಾಗುತ್ತದೆ. ಇಂತಹ ಶುಂಠಿಗೆ ಕನಿಷ್ಟ ಬೆಲೆ ನೀಡಲಾಗುತ್ತದೆ.ಗಂಧಕ ಹೊಗೆ:ಹೀಗೆ ಕೊಂಡ ಹಸಿ ಶುಂಠಿಯನ್ನು ವ್ಯಾಪಾರಿಗಳು ಇದಕ್ಕಾಗಿಯೇ ನಿರ್ಮಿಸಿದ ಶುಂಠಿ ಕಣದಲ್ಲಿ ತೊಳೆದು ಒಣಗಿಸುತ್ತಾರೆ. ಈ ವೇಳೆಯಲ್ಲಿ ದ್ವಿತೀಯ ದರ್ಜೆ ಶುಂಠಿಗೆ ಉತ್ತಮ ಬಣ್ಣ ಬರಲು ಗಂಧಕದ ಹೊಗೆ ಹಾಕಲಾಗುತ್ತದೆ. ದಿನದಿಂದ ದಿನಕ್ಕೆ ಇದರ ಬಳಕೆ ಯಾವುದೇ ನಿಯಂತ್ರಣವಿಲ್ಲದೆ, ವೈಜ್ಞಾನಿಕ ರೀತಿ ನೀತಿಯಿಲ್ಲದೆ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ಶುಂಠಿ ಒಣಗಿಸುವ ಕಣದ ಸುತ್ತಲಿನ ಪ್ರದೇಶಗಳಲ್ಲಿನ ವಾತಾವರಣ ಕೆಡುತ್ತಿದೆ. ಗಂಧಕದ ಹೊಗೆಯಿಂದಾಗಿ ಪರಿಸರದಲ್ಲಿ ಮನುಷ್ಯ ಮಾತ್ರವಲ್ಲ ಕೀಟಗಳು, ಪಕ್ಷಿಗಳು ನಾಪತ್ತೆಯಾಗುತ್ತಿವೆ. ಸ್ಥಳೀಯರಿಗೆ ಅಸ್ತಮಾ ಸೇರಿದಂತೆ ವಿವಿಧ ಕಾಯಿಲೆಗಳು ಹೆಚ್ಚಾಗುತ್ತಿದೆ.ಪ್ರತಿ ಕ್ವಿಂಟಾಲ್ ಹಸಿ ಶುಂಠಿಗೆ 300 ಗ್ರಾಂ. ಗಂಧಕ ಬಳಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲಿಯೇ ಸುಮಾರು500 ಮಂದಿ ಶುಂಠಿ ವ್ಯಾಪಾರಸ್ಥರಿದ್ದು, ಬಹುತೇಕರು ಶುಂಠಿ ಒಣಗಿಸುವ ಕಣ ಹೊಂದಿದ್ದಾರೆ. ನೂರಾರು ಹಳ್ಳಿಗಳಲ್ಲಿ ಇರುವ ಶುಂಠಿ ಒಣಗಿಸುವ ಕಣದಲ್ಲಿ ಸಾವಿರಾರು ಕೃಷಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಇದರ ದುರ್ವಾಸನೆಯಿಂದಾಗಿ ಹಲವಾರು ಕಡೆ ಸ್ಥಳೀಯರು ವ್ಯಾಪಾರಿಗಳ ವಿರುದ್ಧ ದೂರು ನೀಡಿದ್ದೂ ಉಂಟು. ಆದರೆ ಪ್ರಯೋಜನವಾಗಿಲ್ಲ. ಕೆಲವು ಕಡೆ ಜಗಳ, ಹೊಡೆದಾಟಗಳೂ ನಡೆದಿವೆ.ಕೆಲ ಸಮಯದ ಹಿಂದೆ ಇಂತಹ ದೂರನ್ನು ಆಧರಿಸಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಮೇಲಧಿಕಾರಿಗಳಿಗೆ ವರದಿ ನೀಡಿದ್ದಾರೆ. ಆದರೆ ಇದುವರೆಗೆ ಯಾವುದೇ ಕ್ರಮ ಜರುಗಿಸಲಾಗಿಲ್ಲ.ಶುಂಠಿ ನಿಷೇಧಕ್ಕೆ ಆಗ್ರಹ:ಶುಂಠಿ ಬೆಳೆದ ಜಾಗದಲ್ಲಿ ಮತ್ತೆ ಮೂರ್ನಾಲ್ಕು ವರ್ಷ ಏನೂ ಬೆಳೆಯಲು ಸಾಧ್ಯವಿಲ್ಲ. ಇದನ್ನು ಬೆಳೆಯುವಾಗ ಬಳಸುವ ಭಾರೀ ಪ್ರಮಾಣದ ವಿಷಯುಕ್ತ ರಾಸಾಯನಿಕ ಬಳಸಲಾಗುತ್ತದೆ. ಇದರಿಂದಾಗಿ ಭೂಮಿ ಬರಡಾಗುತ್ತದೆ. ಇದು ಗೊತ್ತಾಗುವಷ್ಟರಲ್ಲಿ ಹಲವು ವರ್ಷ ಕಳೆದು ಹೋಗಿತ್ತು. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಈ ಬೆಳೆಯನ್ನು ನಿಷೇಧಿಸಬೇಕು ಎಂದು ಆಗ್ರಹ ಮಾಡುತ್ತಲೇ ಬಂದಿದ್ದರು. ಆದರೆ ಅವರ ಅವಧಿಯಲ್ಲಿ ಕೂಡ ಇದು ಸಾಧ್ಯವಾಗಲಿಲ್ಲ ಎನ್ನುವುದು ಬೇರೆ ವಿಚಾರ.
ಮಲೆನಾಡನ್ನು ಬರಡಾಗಿಸುತ್ತಿರುವ ಶುಂಠಿ ಬೆಳೆರಾಜ್ಯದಲ್ಲಿ ಶುಂಠಿಯನ್ನು ಸದ್ಯ ಮಲೆನಾಡು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾವೇರಿ, ದಾವಣಗೆರೆ, ಹಾಸನ, ಮೈಸೂರು ಭಾಗದಲ್ಲಿ ಬೆಳೆಯಲಾಗುತ್ತಿದೆ. ಆರಂಭದಲ್ಲಿ ಕೇರಳದಿಂದ ನೇರವಾಗಿ ಶಿವಮೊಗ್ಗದ ರಿಪ್ಪನ್ ಪೇಟೆಯ ಭಾಗದಲ್ಲಿ ನೆಲೆ ಕಂಡುಕೊಂಡ ಕೇರಳ ವಲಸಿಗರು ಶುಂಠಿ ಬೆಳೆಯನ್ನು ಪರಿಚಯಿಸಿದರು. ತಮ್ಮ ನೆಲದಲ್ಲಿ ಮಾತ್ರವಲ್ಲ, ಬೇರೆಯವರ ಭೂಮಿಯನ್ನು ಲೀಸ್ ಮೇಲೆ ಕೊಂಡು ಅಲ್ಲಿಯೂ ಶುಂಠಿ ಬೆಳೆಯಲಾರಂಭಿಸಿದರು. ಇವರು ಗಳಿಸುತ್ತಿದ್ದ ಲಾಭ ಕಂಡು ಸ್ಥಳೀಯರೂ ಶುಂಠಿ ಬೆಳೆ ಆರಂಭಿಸಿದರು. ಈಗ ಸ್ಥಳೀಯರೇ ದೊಡ್ಡ ವ್ಯಾಪಾರಿಗಳೇ ಆಗಿ ಬದಲಾಗಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.