ಕನ್ನಡಪ್ರಭ ವಾರ್ತೆ ತುಮಕೂರುಪ್ರತಿಭಾ ಕಾರಂಜಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಗೆ ತೆಗೆಯಲು ಸೂಕ್ತ ವೇದಿಕೆಯಾಗಿದೆ ಎಂದು ಡಿಡಿಪಿಐ (ಅಭಿವೃದ್ದಿ) ಮಂಜುನಾಥ್ ಕೆ. ತಿಳಿಸಿದ್ದಾರೆ.ನಗರದ ಶ್ರೀಸಿದ್ದಗಂಗಾ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ, ತುಮಕೂರು ದಕ್ಷಿಣ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳು-2024-25ಕ್ಕೆ ಚಾಲನೆ ನೀಡಿ ಮಾತನಾಡಿದರು.ತಾಲೂಕು, ಕ್ಲಸ್ಟರ್ ಮಟ್ಟದಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ಇಲ್ಲಿಗೆ ಬಂದಿದ್ದೀರಿ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಲಲಿತ ಕಲೆಗಳು ಬದುಕಿನ ಭಾಗವಾಗಬೇಕಿದೆ. ಹಾಗಾಗಿ ಸರಕಾರ ನಲಿಕಲಿ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಎಂದರು. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಶಿವಮೂರ್ತಿ ಮಾತನಾಡಿ,ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಿಗೆ ಇಂದು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಹಮ್ಮಿಕೊಳ್ಳಲಾಗಿದೆ. ಇಂತಹ ವೇದಿಕೆಗಳು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರ ತರಲು ಸೂಕ್ತ ವೇದಿಕೆಗಳಾಗಿವೆ ಎಂದರು.
ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ಸಂಘದಿಂದ ಗುರುಭವನ ನಿರ್ಮಾಣಕ್ಕೆ ಮುಂದಾಗಿದ್ದು, ಡಿಡಿಪಿಐ ರವರು ಗುರುಭವನಕ್ಕೆ ಹೆಚ್ಚಿನ ಸಹಕಾರ ನೀಡಬೇಕು. ಮುಖ್ಯೋಪಾಧ್ಯಯರ ಮೇಲಿರುವ ಒತ್ತಡ ಕಡಿಮೆ ಮಾಡಿ, ಬೋಧನೆಗೆ ಹೆಚ್ಚು ಒತ್ತು ನೀಡುವಂತಹ ವಾತಾವರಣ ಸೃಷ್ಟಿಸಬೇಕೆಂದು ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ(ಆಡಳಿತ) ಎಚ್.ಕೆ.ಮನಮೋಹನ್ ಮಾತನಾಡಿ, ಪ್ರತಿಭಾ ಕಾರಂಜಿ ಇಲಾಖೆಯ ಒಂದು ಪ್ರಮುಖ ಕಾರ್ಯಕ್ರಮವಾಗಿದೆ. ಈ ಮೊದಲು ಶಾಲಾ ವಾರ್ಷಿಕೋತ್ಸವದಲ್ಲಿ ಮಾತ್ರ ಮಕ್ಕಳ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶವಿತ್ತು.ಆದರೆ ಈಗ ಇಲಾಖೆಯೇ ಪ್ರತಿಭಾ ಕಾರಂಜಿ, ಕಲೋತ್ಸವದ ಮೂಲಕ ಮಕ್ಕಳ ಪ್ರತಿಭೆಯನ್ನು ಹೊರತರಲು ಮುಂದಾಗಿದೆ. ಸರ್ವಶಿಕ್ಷಣ ಅಭಿಯಾನದ ನಂತರ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿದೆ. ಮಕ್ಕಳನ್ನು ದೇಶದ ಆಸ್ತಿಯನ್ನಾಗಿಸಲು, ಆ ಮೂಲಕ ಕಲೆ, ಸಂಸ್ಕೃತಿಯನ್ನು ಪ್ರಚುರ ಪಡಿಸಲು ಮುಂದಾಗಿದೆ.ಮಕ್ಕಳು ಹೆಚ್ಚಿನ ರೀತಿಯಲ್ಲಿ ಪಾಲ್ಗೊಂಡು ತಾವು ಕಲಿಯುವ ಶಾಲೆಗೆ, ತಾಲೂಕಿಗೆ, ಜಿಲ್ಲೆಗೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು.ವೇದಿಕೆಯಲ್ಲಿ ನೋಡಲ್ ಅಧಿಕಾರಿ ಪ್ರಮೀಳಾ ಎಸ್.ಆರ್.,ಉಪನಿರ್ದೇಶಕರ ಕಚೇರಿ ಡಿಪಿಇಓ ಎಂ.ಬಿ.ಮರಮೇಶ್ವರಪ್ಪ,ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಅರ್.ಜಯರಾಂ, ಗುಬ್ಬಿ ಅಧ್ಯಕ್ಷರಾದ ಎನ್.ಟಿ.ಪ್ರಕಾಶ್, ಜಿಲ್ಲಾ ಸಂಘದ ಕಾರ್ಯದರ್ಶಿ ಜಯಲಕ್ಷ್ಮಮ್ಮ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಶ್,ಕೆ.ಎಸ್.ತುಮಕೂರು ತಾಲೂಕು ಅಧ್ಯಕ್ಷ ತಿಮೇಗೌಡ,ವಿವಿಧ ಶಿಕ್ಷಕರ ಸಂಘಟನೆಗಳ ಮುಖಂಡರಾದ ಎಚ್.ಸಿ. ಸತ್ಯಪ್ರಕಾಶ್, ಅನುಸೂಯಾದೇವಿ, ದೊಡ್ಡರಂಗಪ್ಪ, ಮಂಜುನಾಥ್, ಲೋಕೇಶ್ ರೆಡ್ಡಿ, ಲೋಕೇಶ್.ಕೆ.ಎಚ್, ಗಂಗಾಧರ್.ಎಚ್.ಆರ್., ಷಡಕ್ಷರಿ, ಶಿವಕುಮಾರ್, ಸಿದ್ದಮ್ಮ, ಸುಂದರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.