ಉಡುಪಿ: ಮಾದಕ ವಸ್ತುಗಳ ಸಾಗಾಟ, ಮಾರಾಟ, ಬಳಕೆಯನ್ನು ನಿಯಂತ್ರಿಸಿ, ಉಡುಪಿಯನ್ನು ಮಾದಕ ವ್ಯಸನ ಮುಕ್ತ ಜಿಲ್ಲೆಯನ್ನಾಗಿ ಮಾಡುವುದಕ್ಕಾಗಿ, ಪೊಲೀಸ್ ಇಲಾಖೆ ಕ್ಯೂಆರ್ ಕೋಡನ್ನು ಅಭಿವೃದ್ಧಿಪಡಿಸಿದ್ದು, ಮಾದಕ ವಸ್ತುಗಳ ಮಾರಾಟ, ಬಳಕೆ ಮತ್ತಿತರ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ಈ ಕ್ಯೂಆರ್ ಕೋಡ್ನ ಮೂಲಕ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು, ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ಈ ಕ್ಯೂ ಆರ್ ಕೋಡ್ಗೆ ವ್ಯಾಪಕ ಪ್ರಚಾರ ನೀಡಬೇಕು ರೈಲ್ವೆ ನಿಲ್ದಾಣ, ಬಸ್ಸು ನಿಲ್ದಾಣ, ಕಾಲೇಜು - ಹಾಸ್ಟೆಲು, ಸರಕಾರಿ ಕಚೇರಿಗಳು, ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳು, ಮೆಡಿಕಲ್ ಶಾಪ್ ಇತ್ಯಾದಿ ಹೆಚ್ಚು ಜನರು ಸೇರುವ ಪ್ರದೇಶದಲ್ಲಿ ಎದ್ದು ಕಾಣುವಂತೆ ಪ್ರದರ್ಶಿಸಬೇಕು ಎಂದವರು ಸೂಚಿಸಿದರು.
ಕಳೆದ ಸಭೆಯಲ್ಲಿಯೇ ಈ ಸೂಚನೆ ನೀಡಲಾಗಿದ್ದರೂ ಇದರ ಅನುಷ್ಠಾನ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.ಔಷಧಿ ಅಂಗಡಿಗಳಲ್ಲಿ ಅಮಲು ಬರಿಸುವಂತಹ ಔಷಧಿಗಳನ್ನು ಮಾರುವಂತಿಲ್ಲ, “ವೈದ್ಯರ ನಿರ್ದೇಶನವಿಲ್ಲದೇ ಔಷಧ ಮಾರಾಟ ನಿಷೇಧಿಸಲಾಗಿದೆ” ಎಂಬ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಔಷಧಿ ಅಂಗಡಿಗಳಲ್ಲಿ ಪ್ರದರ್ಶಿಸಬೇಕು. ಸಂದೇಹಾಸ್ಪದವಾಗಿ ಕೆಮ್ಮಿನ ಸಿರಪ್ಗಳನ್ನು ಖರೀದಿಸುವವರ ಬಗ್ಗೆ ನಿಗಾ ವಹಿಸಬೇಕು, ಔಷಧಿ ಅಂಗಡಿಗಳಲ್ಲಿ ಸಿಸಿ ಕ್ಯಾಮರ ಅಳವಡಿಸಿ, ನಿರಂತರ ಚಾಲನೆಯಲ್ಲಿಟ್ಟಿರಬೇಕು. ಸಿಸಿಟಿವಿ ಫೂಟೇಜ್ಗಳು ಕನಿಷ್ಠ 3 ತಿಂಗಳವರೆಗೆ ಸಂಗ್ರಹ ಇರುವಂತೆ ನೋಡಿಕೊಳ್ಳಬೇಕು. ಔಷಧ ನಿಯಂತ್ರಣ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮವಹಿಸಬೇಕು ಎಂದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಡಿ.ಹೆಚ್.ಓ ಡಾ. ಬಸವರಾಜ್ ಹುಬ್ಬಳ್ಳಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.