- ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಿಗೆ ಸ್ಪೋಟಕಗಳ ವಿತರಣೆ । ಬಳಕೆ , ಸಾಮಾನ್ಯ ಸುರಕ್ಷತೆ ಕುರಿತ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಲ್ಲು ಗಣಿ ಗುತ್ತಿಗೆಗಳಲ್ಲಿ ಬಳಸುವ ಸ್ಪೋಟಕಗಳನ್ನು ಡಿಜಿಎಂಎಸ್ ನಿಯಮಾನುಸಾರ ಬಳಕೆ ಮಾಡಿ ಕಲ್ಲು ಉತ್ಪನ್ನ ಗಳನ್ನು ಉತ್ಪಾದಿಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.
ಗಣಿ ಸುರಕ್ಷತಾ ನಿರ್ದೇಶನಾಲಯ ಹಾಗೂ ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ವ್ಯಾಪ್ತಿಯ ಕಲ್ಲುಗಣಿ ಗುತ್ತಿಗೆ ಪ್ರದೇಶಗಳಿಗೆ ಸ್ಪೋಟಕಗಳ ವಿತರಣೆ, ಬಳಕೆ ಹಾಗೂ ಸಾಮಾನ್ಯ ಸುರಕ್ಷತೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ರೂಪಿಸಿರುವ ನಿಯಮ ಹಾಗೂ ಸುರಕ್ಷತೆ ಕುರಿತು ವಹಿಸಬೇಕಾದ ಕಾಳಜಿ ಬಗ್ಗೆ ಜಾಗೃತಿ ಇರಬೇಕು. ಕಲ್ಲುಗಣಿಗಳಲ್ಲಿ ಅಗತ್ಯ ಸುರಕ್ಷತಾ ವಿಧಾನಗಳನ್ನು ಬಳಸುವಂತೆ ತಿಳಿಸಿದ ಅವರು, ಕಲ್ಲು ಗಣಿಗಳು ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ನಿರ್ಮಾಣ ವಸ್ತುಗಳನ್ನು ಪೂರೈಸಬೇಕು ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಮಾತನಾಡಿ, ಜಿಲ್ಲಾ ವ್ಯಾಪ್ತಿಯ ಸುಮಾರು 110 ಗಣಿ ಗುತ್ತಿಗೆ ಗಳು, 3 ಮಾಗ್‌ಜಿನ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಕಲ್ಲುಗಣಿ ಗುತ್ತಿಗೆಗಳಲ್ಲಿ ಸಂಭವಿಸಬಹುದಾದ ಸ್ಪೋಟಕಗಳ ಅಪಘಾತಗಳನ್ನು ತಡೆಗಟ್ಟಲು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಕಲ್ಲುಗಣಿ ಗುತ್ತಿಗೆದಾರರಿಗೆ ಸೂಚಿಸಿದರು.
ಕಲ್ಲುಗಣಿ ಇಲಾಖೆ ನಿರ್ದೇಶಕ ಮುರಳೀಧರ್ ಬಿದರಿ ಉಪನ್ಯಾಸ ನೀಡಿ, ಗುತ್ತಿಗೆದಾರರು ಮೈನ್ ಕೋಡ್, ಲೀನ್ ನಂಬರ್ ಪಡೆಯುವುದು ಮತ್ತು ಸ್ಪೋಟಕಗಳನ್ನು ಗುತ್ತಿಗೆಗಳಲ್ಲಿ ಬಳಸುವ ಪರಿಣಿತಿ ಹೊಂದಿರುವ ಸೆಕೆಂಡ್ ಕ್ಲಾಸ್ ಮೈನ್ಸ್ ಮ್ಯಾನೇಜರ್ ಮತ್ತು ಫೋರ್ ಮೆನ್‌ಗಳನ್ನು ನೇಮಿಸಿಕೊಳ್ಳಬೇಕು. ಸ್ಪೋಟಕ ಕಾಯಿದೆ 2008 ಕಲಂ 47 ರಂತೆ ಸ್ಪೋಟಕ ಶೇಖರಣಾ ಘಟಕಗಳಿಂದ ಬಳಕೆ ಮಾಡುವ ಪ್ರದೇಶಕ್ಕೆ ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಸಂಬಂಧಪಟ್ಟ ಪ್ರದೇಶದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಕಡ್ಡಾಯ ಎಂದರು.ಸ್ಪೋಟಕ ಸಂಗ್ರಹಣಾ ಘಟಕಗಳನ್ನು ಸ್ಥಾಪಿಸಲು ಜಿಲ್ಲಾಧಿಕಾರಿಗಳ ನಿರಾಪೇಕ್ಷಣಾ ಪತ್ರ ಕಡ್ಡಾಯವಾಗಿರುತ್ತದೆ. ಸ್ಪೋಟಕ ಸರಬರಾಜು ದಾರರು ಸ್ಪೋಟಕಗಳನ್ನು ಸಂಗ್ರಹಣಾ ಘಟಕಗಳಿಂದ ಬಳಕೆ ಮಾಡುವ ಪ್ರದೇಶಕ್ಕೆ ಸಾಗಾಣಿಕೆ ನಡೆಸಲು ಸರಬರಾಜುದಾರರ ವಿವರ, ಸ್ಪೋಟಕಗಳ ಪ್ರಮಾಣ, ಬಳಕೆದಾರರ ವಿವರ ಮತ್ತು ಇತರೆ ಅಗತ್ಯ ಮಾಹಿತಿ ಗಳನ್ನೊಳಗೊಂಡ ಫಾರಂ ಆರ್.ಇ(13) ಹೊಂದಿರುವುದು ಅಗತ್ಯ. ಸ್ಪೋಟಕಗಳನ್ನು ಬಳಕೆದಾರರಿಗೆ ವಿತರಣೆ ಮಾಡುವ ಪೂರ್ವದಲ್ಲಿ ಹಾಗೂ ಬಳಕೆಯಾದ ನಂತರದಲ್ಲಿ ಸಂಬಂಧಪಟ್ಟ ಕಲ್ಲುಗಣಿ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ಮಹಜರ್ ಮಾಡಿಸುವುದು ಕಡ್ಡಾಯ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಜಿಲ್ಲಾ ಅಧಿಕಾರಿ ವಿಂದ್ಯಾ, ಡಿಜಿಎಂಎಸ್ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು, ಕಲ್ಲು ಗಣಿ ಗುತ್ತಿಗೆದಾರರು ಹಾಜರಿದ್ದರು.10 ಕೆಸಿಕೆಎಂ 1
ಚಿಕ್ಕಮಗಳೂರಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಿಗೆ ಸ್ಪೋಟಕಗಳ ವಿತರಣೆ, ಬಳಕೆ ಹಾಗೂ ಸಾಮಾನ್ಯ ಸುರಕ್ಷತೆ ಕುರಿತ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಉದ್ಘಾಟಿಸಿದರು. ಎಸ್ಪಿ ಡಾ. ವಿಕ್ರಂ ಅಮಟೆ, ಕಲ್ಲು ಗಣಿ ಇಲಾಖೆ ನಿರ್ದೇಶಕ ಮುರಳೀಧರ್ ಬಿದರಿ ಇದ್ದರು.