ಕನ್ನಡಪ್ರಭ ವಾರ್ತೆ ಹಾವೇರಿ
ಅನುಸೂಚಿತ ಜಾತಿ, ಬುಡಕಟ್ಟು ಉಪ ಯೋಜನೆಯಡಿ ಕಾಮಗಾರಿ ಕೈಗೊಳ್ಳುವಾಗ ಕನಿಷ್ಠ ಶೇ.೫೦ ಪ್ರಮಾಣಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳು ವಾಸಿಸುವ ವಾರ್ಡುಗಳು, ಓಣಿಗಳಲ್ಲಿ ಮಾತ್ರ ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳಿಸಬೇಕು. ಈ ನಿಟ್ಟಿನಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ನಿಯಮಾನುಸಾರ ಕಾಮಗಾರಿ ಅನುಷ್ಠಾನಗೊಳಿಸಲು ವಿವಿಧ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಗಳ ಇಲಾಖಾವಾರು ಕಾರ್ಯಕ್ರಮ ಅನುಷ್ಠಾನ ಪ್ರಗತಿ ಪರಿಶೀಲನೆ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆ ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಹಾಗೂ ಇನ್ ಸ್ಯಾನಿಟರಿ ಲ್ಯಾಟ್ರಿನ್ ಮತ್ತು ಸಫಾಯಿ ಕರ್ಮಚಾರಿಗಳ ಕುರಿತಾದ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಸಿ ಮಾತನಾಡಿದರು.
ನಗರ ಪ್ರದೇಶಗಳಲ್ಲಿ ವಾರ್ಡ್ ವಾರು, ಗ್ರಾಮ ಪಂಚಾಯಿತಿವಾರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನಸಂಖ್ಯೆ ಹೆಚ್ಚಿರುವ ಪ್ರದೇಶ ಕುರಿತಂತೆ ಸರ್ವೇಮಾಡಿ ನಿಖರವಾದ ಮಾಹಿತಿ ನೀಡಬೇಕು. ಈ ಜನಸಂಖ್ಯೆ ಹೆಚ್ಚಿರುವ ವಾರ್ಡ್‌ಗಳಲ್ಲೇ ವಿಶೇಷ ಘಟಕದ ಅನುದಾನವನ್ನು ಬಳಸಬೇಕು ಎಂದು ತಾಕೀತು ಮಾಡಿದರು.ನಗರಾಭಿವೃದ್ಧಿಕೋಶ, ನಗರ ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಪಂಚಾಯಿತಿ, ಎಂಜಿನಿಯರಿಂಗ್ ವಿಭಾಗ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಾಲೋನಿಗಳ ಅಭಿವೃದ್ಧಿ ಕಾಮಗಾರಿಗಾಗಿ ಮೀಸಲಿಟ್ಟ ಹಣವನ್ನು ಬೇರೆಡೆ ಬಳಸುತ್ತಿರುವ ಕುರಿತಂತೆ ದೂರುಗಳು ಬರುತ್ತಿವೆ. ಈ ಹಿನ್ನಲೆಯಲ್ಲಿ ಅನುದಾನವನ್ನು ಬೇರೆಡೆ ಬಳಸದಂತೆ ಕ್ರಮವಹಿಸಬೇಕು. ಒಂದೊಮ್ಮೆ ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನ ಬೇರೆಡೆ ಬಳಸಿದರೆ ಅಂತಹ ಅಧಿಕಾರಿಗಳ ಮೇಲೆ ಪರಿಶಿಷ್ಟ ಕಾಯ್ದೆ ಅನ್ವಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗುತ್ತಿಗೆ ಮೀಸಲಾತಿ:ವಿವಿಧ ಇಲಾಖಾ ಕಾಮಗಾರಿ ಗುತ್ತಿಗೆ ವಹಿಸುವ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಮಾಣದಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ಮೀಸಲು ಪ್ರಮಾಣ ಕಾಯ್ದುಕೊಳ್ಳುವಂತೆ ವಿವಿಧ ಇಲಾಖಾ ಅಭಿಯಂತರರಿಗೆ ಸೂಚನೆ ನೀಡಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅಧಿಕಾರಿ ನೌಕರರಿಗೆ ಕಾಲಮಿತಿಯೊಳಗೆ ಬಡ್ತಿ, ವೇತನ ಬಡ್ತಿ, ಟೈಂ ಬಾಂಡ್ ನೀಡುವಲ್ಲಿ ಇಲಾಖಾ ಮುಖ್ಯಸ್ಥರು ವಿಳಂಬ ಮಾಡುತ್ತಿರುವ ವಿಚಾರ ಕುರಿತಂತೆ ಜಾಗೃತ ಸಮಿತಿ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ತ್ವರಿತವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ, ಮುಂಬಡ್ತಿ ಹಾಗೂ ಸೌಲಭ್ಯಗಳ ನೀಡಿಕೆಯಲ್ಲಿ ಯಾವುದೇ ವಿಳಂಬ ಮಾಡುವ ಹಾಗಿಲ್ಲ. ನೌಕರರಿಗೆ ಸಕಾಲದಲ್ಲಿ ಸೌಲಭ್ಯ ದೊರಕಬೇಕು. ಈ ಕುರಿತಂತೆ ಎಲ್ಲ ಇಲಾಖೆಗಳ ಮಾಹಿತಿ ಪಡೆದು ಪ್ರತ್ಯೇಕ ಸಭೆ ನಡೆಸಿ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.ರುದ್ರಭೂಮಿ ಸಮಸ್ಯೆ:ಜಿಲ್ಲೆಯಲ್ಲಿ ಎಲ್ಲೆಲ್ಲಿ ದಲಿತ ಸಮುದಾಯಕ್ಕೆ ಸ್ಮಶಾನ ಭೂಮಿಯ ಸಮಸ್ಯೆ ಇದೆಯೋ ತಕ್ಷಣ ಸಮಸ್ಯೆಗೆ ಸ್ಪಂದಿಸಲು ತಹಸೀಲ್ದಾರಗಳಿಗೆ ನಿರ್ದೇಶನ ನೀಡಿದರು. ಸ್ಮಶಾನ ಭೂಮಿ ಅಗತ್ಯವಿದ್ದೆಡೆ ಕ್ರಮವಹಿಸುವಂತೆ ಸೂಚನೆ ನೀಡಿದರು.ಶಿಗ್ಗಾಂವಿ ತಾಲೂಕು ಅಂದಲಗಿ ಗ್ರಾಮದಲ್ಲಿ ವಸತಿ ರಹಿತ ಕುಟುಂಬದವರಿಗೆ ಗಾಂವಠಾಣಾ ಜಾಗೆಯಲ್ಲಿ ನಿವೇಶನ ಹಂಚಿಕೆ ವಿಷಯ ಬಹಳದಿನದಿಂದ ನೆನೆಗುದಿಗೆ ಬಿದ್ದಿದೆ. ತಹಸೀಲ್ದಾರ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ ಗ್ರಾಮಕ್ಕೆ ವಾರದೊಳಗೆ ಭೇಟಿ ನೀಡಿ ಪರ್ಯಾಯ ಜಾಗೆ ಕುರಿತಂತೆ ಪರಿಶೀಲನೆ ನಡೆಸಬೇಕು. ವಸತಿ ರಹಿತರಿಗೆ ವಸತಿ ನೀಡುವುದು ಮೊದಲ ಆದ್ಯತೆ ಆಗಿರುವುದರಿಂದ ೧೫ ದಿನದೊಳಗಾಗಿ ನಿವೇಶನ ಹಂಚಿಕೆ ಸಮಸ್ಯೆ ಇತ್ಯರ್ಥಪಡಿಸಲು ಸೂಚನೆ ನೀಡಿದರು.ತಹಸೀಲ್ದಾರ್ ಹೊಣೆ:ಜಿಲ್ಲೆಯ ತಾಲೂಕಾ ಕೇಂದ್ರ, ಪುರಸಭೆ, ಪಟ್ಟಣ ಪಂಚಾಯಿತಿಗಳ ಜನಸಂದಣಿ ಪ್ರದೇಶದಲ್ಲಿ ಸಾಮೂಹಿಕ ಶೌಚಾಲಯಗಳ ಕೊರತೆ, ಈಗಾಗಲೇ ನಿರ್ಮಾಣವಾಗಿರುವ ಶೌಚಾಲಯಗಳ ದುರಸ್ತಿ, ಹೊಸ ಶೌಚಾಲಯಗಳ ನಿರ್ಮಾಣ, ಸಮರ್ಪಕ ನಿರ್ವಹಣೆ ಹೊಣೆ ಇನ್ನು ಮುಂದೆ ತಹಸೀಲ್ದಾರಗಳಿಗೆ ವಹಿಸಲಾಗುವುದು. ಎಲ್ಲ ತಹಸೀಲ್ದಾರ್‌ಗಳು ತಮ್ಮ ಹಂತದಲ್ಲಿ ಪರಿಶೀಲನೆ ನಡೆಸಿ ೧೫ ದಿನದೊಳಗಾಗಿ ಶೌಚಾಲಯಗಳ ದುರಸ್ತಿ, ಹೊಸ ಶೌಚಾಲಯಗಳ ನಿರ್ಮಾಣ, ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆಯುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ವಸತಿ ರಹಿತ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ತ್ವರಿತವಾಗಿ ಮನೆ ನಿರ್ಮಾಣ ಮಾಡಿಕೊಡಬೇಕು. ಎರಡು ವರ್ಷ ಸೇವಾವಧಿ ಪೌರಕಾರ್ಮಿಕರು ಹೊರತುಪಡಿಸಿ ಜಿಲ್ಲೆಯಲ್ಲಿ ವಸತಿ ಸೌಲಭ್ಯವಿಲ್ಲದ ಪೌರಕಾರ್ಮಿಕರ ಮಾಹಿತಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ ಗುಣಾರೆ, ಜಿಪಂ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ತಹಸೀಲ್ದಾರ ಶಂಕರ್, ಸರ್ಕಾರಿ ಅಭಿಯೋಜಕಿ ಸರೋಜಾ ಕೂಡಲಗಿಮಠ, ಜಿಲ್ಲಾ ಜಾಗೃತಿ ಸಮಿತಿಯ ಅಧಿಕಾರೇತರ ಸದಸ್ಯ ರಮೇಶ ಆನವಟ್ಟಿ, ಸಿದ್ದಲಿಂಗಪ್ಪ ಗುಡ್ಡಪ್ಪ ಹೊನ್ನಪ್ಪ, ಗಾಳೆಮ್ಮನವರ, ಮುತ್ತುರಾಜ ಮಾದರ, ಸುಭಾಸ ಬೆಂಗಳೂರು ಇತರರು ಉಪಸ್ಥಿತರಿದ್ದರು.