ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: ಓರ್ವನ ಬಂಧನ, 13 ಕ್ವಿಂಟಲ್ ಅಕ್ಕಿ ವಶ

KannadaprabhaNewsNetwork | Published : Oct 23, 2023 12:15 AM

ಸಾರಾಂಶ

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ ಮಾಡುತ್ತಿದ್ದ ಟಾಟಾ ಏಸ್ ವಾಹನ ಮತ್ತು 13 ಕ್ವಿಂಟಲ್ 40 ಕೆಜಿ ಅಕ್ಕಿ ವಶಪಡಿಸಿಕೊಂಡು, ವಾಹನ ಚಾಲಕನ ಮೇಲೆ ಪ್ರಕರಣ ದಾಖಲಿಸಿದ ಘಟನೆ ಭಾನುವಾರ ನಡೆದಿದೆ.
ರೋಣ: ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ ಮಾಡುತ್ತಿದ್ದ ಟಾಟಾ ಏಸ್ ವಾಹನ ಮತ್ತು 13 ಕ್ವಿಂಟಲ್ 40 ಕೆಜಿ ಅಕ್ಕಿ ವಶಪಡಿಸಿಕೊಂಡು, ವಾಹನ ಚಾಲಕನ ಮೇಲೆ ಪ್ರಕರಣ ದಾಖಲಿಸಿದ ಘಟನೆ ಭಾನುವಾರ ನಡೆದಿದೆ. ಶನಿವಾರ ಸಂಜೆ ರೋಣ ಪಟ್ಟಣದ ವಿವಿಧೆಡೆ ಅನ್ನಭಾಗ್ಯ ಯೋಜನೆಯ 50 ಕೆ.ಜಿ. ತೂಕದ ಒಟ್ಟು 27 ಮೂಟೆ ( ಚೀಲ) (13.40 ಕ್ವಿಂಟಲ್) ಅಕ್ಕಿ ತುಂಬಿಕೊಂಡು ಕೊತಬಾಳ ಮಾರ್ಗವಾಗಿ ಬಾಗಲಕೋಟೆಗೆ ತೆರಳುತ್ತಿದ್ದ ನಿಖರ ಮಾಹಿತಿ ಬೆನ್ನು ಹತ್ತಿದ ರೋಣ ಠಾಣೆ ಎಎಸ್‌ಐ ಎಸ್.ಬಿ. ಪವಾಡಿ, ಪೇದೆ ಯಲ್ಲಪ್ಪ ಮಾದರ ಅವರು ಅಕ್ರಮ ಅಕ್ಕಿ ಸಾಗಾಟಕ್ಕೆ ಯತ್ನಿಸಿದ ಟಾಟಾ ಏಸ್ ಗಾಡಿ ಹಿಡಿದು ಪರಿಶೀಲಿಸಿದರು. ಆ ವೇಳೆ ಅನ್ನಭಾಗ್ಯ ಅಕ್ಕಿ ಎಂದು ಸಂಶಯ ಬಂದಿದ್ದರಿಂದ ಚಾಲಕನ ಸಮೇತ ವಾಹನ ವಶಕ್ಕೆ ಪಡೆದು ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಆಹಾರ ನಿರೀಕ್ಷಕರಾದ ಸುವರ್ಣ ಜಮ್ಮನಕಟ್ಟಿ, ಉಪ ತಹಸೀಲ್ದಾರ್‌ ಶಾಂತಾ ಚವಡಿ ಅವರು ಟಾಟಾ ಏಸ್ ಗಾಡಿಯಲ್ಲಿ ಅಕ್ಕಿ ಮೂಟೆಗಳನ್ನು ಪರಿಶೀಲಿಸಿದಾಗ ಅನ್ನ ಭಾಗ್ಯ ಅಕ್ಕಿ ಎಂದು ದೃಢಪಟ್ಟಿದೆ. ಈ ಕುರಿತು ವಾಹನ ಚಾಲಕ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರ ಗ್ರಾಮದ ಮಲ್ಲಿಕಾರ್ಜುನ ಸುಣಗಾರ ಎಂಬುವನನ್ನು ತೀವ್ರ ವಿಚಾರಣೆಗೊಳಪಡಿಸಿದ ಬಳಿಕ ಸತ್ಯ ಬಹಿರಂಗಗೊಂಡಿದ್ದು, ರೋಣ ಪಟ್ಟಣದ ಕಲ್ಲಪ್ಪ ಜಕ್ಕಲಿ ಹಾಗೂ ಅನೇಕ ಕಡೆಗಳಿಂದ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿಕೊಂಡು ಬಾಗಲಕೋಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಾಗಿ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ 50 ಕೆಜಿ ತೂಕದ ಒಟ್ಟು 27 ಮೂಟೆ ಅಕ್ಕಿ ತುಂಬಿದ ಗಾಡಿ ವಶಪಡಿಸಿಕೊಂಡು, ರೋಣ ಠಾಣೆಯಲ್ಲಿ ಮಲ್ಲಿಕಾರ್ಜುನ ಸುಣಗಾರ ಎಂಬುವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

Share this article