ಅಂತರ್ಜಾಲ ಜಾಗೃತಿ ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತದಿಂದ ಸುರಕ್ಷಿತ ಅಂತರ್ಜಾಲ ದಿನಾಚರಣೆಯ ಅಂಗವಾಗಿ ನಡೆದ ಅಂತರ್ಜಾಲ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಇಂದಿನ ಆಧುನಿಕ ದಿನಗಳಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಮೊಬೈಲ್ ಸಹ ಜೀವನದ ಒಂದು ಅವಿಭಾಜ್ಯ ಅಂಗವಾಗಿದ್ದು, ಮೊಬೈಲ್, ಇಂಟರ್‌ನೆಟ್‌ನಿಂದ ಲಾಭ-ನಷ್ಟಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ. ನಾವು ಎಷ್ಟೇ ಜಾಣರಿದ್ದರೂ ಸೈಬರ್ ಕ್ರೈಮ್ ಪ್ರಕರಣಗಳಿಗೆ ಬಲಿಯಾಗಿ, ತೊಂದರೆಗೆ ಒಳಗಾಗಬಹುದು. ಪ್ರತಿಯೊಬ್ಬರೂ ಸೈಬರ್ ಅಪರಾಧಗಳ ಕುರಿತು ಜಾಗೃತರಾಗಿರಬೇಕು. ಈ ಹಿನ್ನೆಲೆಯಲ್ಲಿ ವಿಶ್ವ ಸುರಕ್ಷಿತ ಅಂತರ್ಜಾಲ ದಿನ ಆಚರಿಸಲಾಗುತ್ತಿದ್ದು, ಜೊತೆಯಾಗಿ ಉತ್ತಮ ಇಂಟರ್ನೆಟ್ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ಅರಿವು ಮೂಡಿಸಲಾಗುತ್ತಿದೆ. ಎಲ್ಲರೂ ಸುರಕ್ಷತೆಯಿಂದ ಇಂಟರ್ನೆಟ್ ಬಳಕೆ ಮಾಡಬೇಕು ಎಂದರು.ಸೈಬರ್ ಸೆಲ್‌ನ ಸಿಪಿಐ ಮಹಾಂತೇಶ ಸಜ್ಜನ ಮಾತನಾಡಿ, ಮನುಷ್ಯನಿಗೆ ಅತೀ ಆಸೆ ಮತ್ತು ಭಯದಿಂದ ಸೈಬರ್ ಕ್ರೈಮ್ ಪ್ರಾರಂಭವಾಗುತ್ತದೆ. ಸೈಬರ್ ಕ್ರೈಮ್‌ಗೆ ಯಾರಾದರೂ ಒಳಗಾಗಬಹುದು. ಉದಾಹರಣೆಗೆ ನೀವು ಲಕ್ಕಿ ಡ್ರಾನಲ್ಲಿ ಹಣ ಗೆದ್ದಿದ್ದೀರಿ. ನಿಮ್ಮ ಮೊಬೈಲ್ ಸಂಖ್ಯೆಗೆ ಆಫರ್ ಬಂದಿದೆ ಎಂದು ವಿವಿಧ ಆಸೆಗಳನ್ನು ತೋರಿಸಿ ಮತ್ತು ನಿಮ್ಮ ಎಟಿಎಂ ಕಾರ್ಡ್ ಅವಧಿ ಮುಕ್ತಾಯಗೊಂಡಿದೆ, ಬ್ಲಾಕ್ ಆಗಿದೆ, ಹೀಗೆ ವಿವಿಧ ಬಗೆಗಳಲ್ಲಿ ಭಯ ಹುಟ್ಟಿಸಿ, ವಂಚಿಸಬಹುದು. ಹಿಂದೆ ಕಿಪ್ಯಾಡ್ ಮೊಬೈಲ್ ಬಳಕೆ ಇತ್ತು. ಆಗ ಇಂತಹ ವಂಚನೆ ಪ್ರಕರಣಗಳು ಆಗುತ್ತಿರಲಿಲ್ಲ.
ಮೊಬೈಲ್ ಕರೆಗಳ ಮೂಲಕ ಸೂಕ್ಷ್ಮವಿವರಗಳಾದ ಓಟಿಪಿ, ಆಧಾರ್, ಪ್ಯಾನ್ ಅಥವಾ ಬ್ಯಾಂಕ್ ರುಜುವಾತುಗಳನ್ನು ಎಂದಿಗೂ ಬಹಿರಂಗಪಡಿಸಬಾರದು. ಅನಧಿಕೃತ ಆಧಾರ್ ಪಾವತಿ ಅಧಿಸೂಚನೆಗಳ ಬಗ್ಗೆ ಜಾಗರೂಕರಾಗಿರಿ. ಪ್ಯಾನ್, ಆಧಾರ್ ಅಥವಾ ಬ್ಯಾಂಕ್ ವಿವರಗಳಂತಹ ಸೂಕ್ಷ್ಮ ಮಾಹಿತಿಯನ್ನು ಕೇಳುವ ಅಪರಿಚಿತ ದೂರವಾಣಿ ಸಂಖ್ಯೆಗಳಿಂದ ಹಾಗೂ ವಿಶೇಷವಾಗಿ ಕೆವೈಸಿ ನವೀಕರಣಗಳ ನೆಪದಲ್ಲಿ ಬರುವ ಲಿಂಕ್‌ಗಳ ಮೇಲೆ ಎಂದಿಗೂ ಕ್ಲಿಕ್ ಮಾಡಬೇಡಿ. ವೈಯಕ್ತಿಕ ಮಾಹಿತಿ ಅಥವಾ ಹಣಕ್ಕಾಗಿ ವಿನಂತಿಸುವ ಅಪರಿಚಿತ ದೂರವಾಣಿ ಸಂಖ್ಯೆಗಳಿಂದ ಬರುವ ಕರೆಗಳಿಗೆ ಎಂದಿಗೂ ಪ್ರತಿಕ್ರಿಯಿಸಬಾರದು. ಸೈಬರ್ ಅಪರಾಧಕ್ಕೆ ಒಳಗಾಗಿದ್ದರೆ, ತಕ್ಷಣ 24*7 ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಬಹುದು ಎಂದು ವಿವರವಾಗಿ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ದಿನನಿತ್ಯದ ಜೀವನದಲ್ಲಿ ಅಂತರ್ಜಾಲ ಬಳಕೆ, ಅಂತರ್ಜಾಲ ಸುರಕ್ಷಿತ ಬಳಕೆ (ಅಂತರ್ಜಾಲ ಸುರಕ್ಷತೆ), ಸಾಮಾನ್ಯ ಸೈಬರ್ ಬೆದರಿಕೆಗಳು, ಸೈಬರ್ ನೈರ್ಮಲ್ಯ ಅಭ್ಯಾಸಗಳು, ಸೈಬರ್ ಅಪರಾಧಗಳನ್ನು ವರದಿ ಮಾಡುವ ಕಾರ್ಯವಿಧಾನ (1930), ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಜಾಗೃತಿ ಸಂಪನ್ಮೂಲಗಳ ಕುರಿತು ಮಾಹಿತಿ ನೀಡಲಾಯಿತು.