ಮಂಗಳೂರು

ಕಲೆ ಇದ್ದ ಹಾಗೆ ಇದ್ದರೆ ಅದು ಭಜನೆ ಆಗುತ್ತದೆ, ಪ್ರತಿಭೆ ಇರಿಸಿಕೊಂಡು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಈ ಕಲೆ ಸಾಕ್ಷಿ. ಕಳೆದ ಹಲವು ವರ್ಷಗಳಿಂದ ಸಾವಿರಾರು ಕಲಾವಿದರು ಯಕ್ಷರಂಗಭೂಮಿಯಲ್ಲಿ ದುಡಿಯುತ್ತಿದ್ದಾರೆ. ಜಗತ್ತಿನ ಯಾವುದೇ ಕಲೆಗೂ ಕೂಡ ಯಕ್ಷಗಾನಕ್ಕೆ ಇರುವ ಶಕ್ತಿ ಇನ್ನೂ ಯಾವ ಕಲೆಯಲ್ಲಿಯೂ ಇಲ್ಲ ಎಂದು ಅರ್ಥವಿಹಾರಿ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು. ಅವರು ನಗರದ ಕೊಡಿಯಾಲ್ ಬೈಲ್ ಕುದ್ರೋಳಿ ಶ್ರೀ ಭಗವತೀ ದೇವಸ್ಥಾನದ ಕೂಟಕ್ಕಳ ಸಭಾಂಗಣದಲ್ಲಿ ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್ (ರಿ) ಮತ್ತು ರಂಗಸ್ಥಳ ಮಂಗಳೂರು (ರಿ) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರ ಆಶ್ರಯದಲ್ಲಿ ನಡೆದ ‘ಬಳ್ಕೂರು ಯಕ್ಷ ಕುಸುಮ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ನಾನು ವಿದ್ವಾಂಸನಲ್ಲ, ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಒಬ್ಬ ಕೆಲಸಗಾರ ಅಷ್ಟೇ. ಕಳೆದ ೬೦ ವರ್ಷಗಳಿಂದ ಯಕ್ಷಗಾನ ಕಲೆಗಾಗಿ ನನ್ನ ಬದುಕನ್ನು ಸಮರ್ಪಿಸಿದ್ದೇನೆ. ೧೦ನೇ ವರ್ಷದಲ್ಲಿ ನನ್ನ ಅಜ್ಜನಿಂದ ಕಲಿತ ಅರ್ಥಗಾರಿಕೆ ಬದುಕಿಗೆ ಪೂರಕವಾಗಿದೆ. ನಾನು ಯಕ್ಷಗಾನ ಕ್ಷೇತ್ರದಲ್ಲಿ ಬೆಳೆಯಲು ಯಾರ ಹೆಗಲಮೇಲೆ ಇದ್ದೇನೋ ಎಲ್ಲಾ ಕಲಾವಿದರಿಗೆ, ಪ್ರೇಕ್ಷಕರಿಗೆ, ಪೋಷಕರಿಗೆ, ಅಭಿಮಾನಿಗಳಿಗೆ ಈ ದಿನ ಪಡೆದ ಪ್ರಶಸ್ತಿಯನ್ನು ನಾನು ಅರ್ಪಿಸುತ್ತೇನೆ. ಅಂತೆಯೇ ಇಂದು ಸಿಕ್ಕಿರುವ ಈ ಪ್ರಶಸ್ತಿಯ ಮೊತ್ತವನ್ನು ನನ್ನ ಮುಂದಿನ ಪುಸ್ತಕದ ಪ್ರಕಟಣೆಗಾಗಿ ಉಪಯೋಗಿಸುತ್ತೇನೆ ಎಂದು ಹೇಳಿದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಸಂಸ್ಕೃತಿಯನ್ನು, ವಿಚಾರಧಾರೆಗಳನ್ನು ಉಳಿಸಿಕೊಳ್ಳಬೇಕು ಎಂಬ ಮಾರ್ಗದಲ್ಲಿ ಯಕ್ಷಕುಸುಮ ಚಾರಿಟೇಬಲ್ ಟ್ರಸ್ಟ್‌ನವರು ಪೌರಾಣಿಕ ಯಕ್ಷಗಾನವನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಿರುವುದು ಬಹಳ ಹೆಮ್ಮೆಯ ವಿಷಯ ಎಂದರು.

ಈ ಸಂದರ್ಭ ‘ಬಳ್ಕೂರು ಯಕ್ಷ ಕುಸುಮ’ ಪುರಸ್ಕಾರವನ್ನು ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ.ಪ್ರಭಾಕರ ಜೋಶಿ ಅವರಿಗೆ ನೀಡಿ ಗೌರವಿಸಲಾಯಿತು.ಹಿರಿಯ ಸಾಹಿತಿ ಜನಾರ್ದನ ಹಂದೆ ಯಕ್ಷ ಕುಸುಮ ಕವಿತೆ ವಾಚಿಸಿದರು. ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ ಅವರು ಡಾ. ಎಂ. ಪ್ರಭಾಕರ ಜೋಶಿಯವರ ಯಕ್ಷಗಾನಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ವೇದಿಕೆಯಲ್ಲಿ ಮಂಗಳೂರಿನ ಹಿರಿಯ ಲೆಕ್ಕ ಪರಿಶೋಧಕ ಎಸ್. ಎಸ್. ನಾಯಕ್, ಮಂಗಳೂರು ರಂಗಸ್ಥಳ ಸಂಸ್ಥೆಯ ಎಸ್. ಎಲ್. ನಾಯಕ್ ಮತ್ತು ದಿನೇಶ್ ಪೈ, ಮಂಗಳೂರು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್, ಮೇಳದ ಯಜಮಾನ ರಂಜಿತ್ ಕುಮಾರ್ ವಕ್ವಾಡಿ, ಬಳ್ಕೂರು ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಕರುಣಾಕರ ಬಳ್ಕೂರು ಇದ್ದರು.

ಉಪನ್ಯಾಸಕ ಶ್ರೀಕೃಷ್ಣ ಭಟ್ ಸುಣ್ಣಂಗುಳಿ ನಿರೂಪಿಸಿದರು.


ಬಳಿಕ ಬಡಗು ತಿಟ್ಟಿನ ಪ್ರಸಿದ್ಧ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಮೆಕ್ಕೆಕಟ್ಟು ಮೇಳದವರಿಂದ ದ್ರೌಪದಿ ಪ್ರತಾಪ ಮತ್ತು ವಿದ್ಯುಜ್ಜಿಹ್ವ ಎಂಬ ಪೌರಾಣಿಕ ಕಥಾನಕ ಪ್ರದರ್ಶನಗೊಂಡಿತು. ----------------