ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾ ಪೊಲೀಸ್ ಇಲಾಖೆಯು ‘ನಮ್ಮ ಕಾಪ್ 24 X 7’ ಎಂಬ ವಾಟ್ಸ್ ಆ್ಯಪ್ ಚಾಟ್‌ಬಾಟ್ ಪರಿಚಯಿಸಿದ್ದು, ಸಾರ್ವಜನಿಕರಿಗೆ ಪೊಲೀಸ್ ಸೇವೆಗಳನ್ನು ಸುಲಭವಾಗಿ ತಲುಪಿಸುವ ಗುರಿಯನ್ನು ಹೊಂದಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದರು.ನಗರದ ಕನ್ನಡ ಭವನದಲ್ಲಿ ಪೋಲಿಸ್ ಇಲಾಖೆ ವತಿಯಿಂದ ಬುಧವಾರ ನಡೆದ ಚಾಟ್‌ಬಾಟ್ ಲೋಕಾರ್ಪಣೆ ಮಾಡಿ ಮಾತನಾಡಿ, ಇಂತಹ ವ್ಯವಸ್ಥೆ ದೇಶದಲ್ಲೇ ಪ್ರಥಮ. ರಕ್ಷಣೆ, ತುರ್ತು ಸೇವೆಗಳು, ಕಾನೂನು ಮಾಹಿತಿ ಮತ್ತು ಸೈಬರ್ ಅಪರಾಧಗಳ ಬಗ್ಗೆ ನೆರವು ಹಾಗೂ ಪೊಲೀಸ್ ಇಲಾಖೆಯಲ್ಲಿ ಸಿಗುವ ಎಲ್ಲ ಸೇವೆಗಳ ಬಗ್ಗೆ ಇದರಲ್ಲಿ ಮಾಹಿತಿ ಸಿಗಲಿದೆ ಎಂದರು.
ಜನತೆಯ ಸಮಸ್ಯೆಗೆ ಸ್ಪಂದನೆಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆ ಪೊಲೀಸ್ ಇಲಾಖೆಯಲ್ಲಿ ಸಿಗುವ ಹಲವು ಮಾಹಿತಿಗಳನ್ನು ನೀಡುವ ಹೊಸ ವ್ಯವಸ್ಥೆ ಇದು. ಪೊಲೀಸ್ ಇಲಾಖೆಯಲ್ಲಿ ಸಿಗುವ ಎಲ್ಲ ಸೇವೆಗಳ ಬಗ್ಗೆ ಇದರಲ್ಲಿ ಮಾಹಿತಿ ಸಿಗಲಿದೆ. ಪೊಲೀಸ್ ಇಲಾಖೆಯಲ್ಲಿ ಏನೆಲ್ಲ ಸೇವೆಗಳಿವೆ ಎಂಬುದರ ಮಾಹಿತಿ ಜತೆಗೆ ಹಲವು ಜಾಗೃತಿ ಮೂಡಿಸುವ ಸಂದೇಶಗಳು ಇದರಲ್ಲಿ ಲಭ್ಯವಾಗಲಿದೆ. ನಗರ ಹೊರವಲಯದ ಎಸ್‌ಜೆಸಿ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲ, ವಿದ್ಯುನ್ಮಾನ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಹಕಾರದೊಂದಿಗೆ ಜಿಲ್ಲಾ ಪೊಲೀಸ್ ಇಲಾಖೆ ಈ ವಾಟ್ಸ್‌ಆ್ಯಪ್ ಚಾಟ್‌ಬಾಟ್‌ನ್ನು ರೂಪಿಸಿರುವುದಾಗಿ ವಿವರಿಸಿದರು.
ಜನರಿಗೆ ಸುಲಭವಾಗಿ ಪೊಲೀಸ್ ಸೇವೆಗಳನ್ನು ತಕ್ಷಣ ಒದಗಿಸಲಾಗುವುದು. ಪೊಲೀಸ್ ಸೇವೆಗಳನ್ನು ಜನರಿಗೆ ಸುಲಭವಾಗಿ ತಲುಪಿಸುವುದು ಇದರ ಉದ್ದೇಶ. ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ತೆಲುಗಿನಲ್ಲಿ ಚಾಟ್‌ಬಾಟ್ ಲಭ್ಯವಿದೆ. ಸಣ್ಣ ಪುಟ್ಟ ಮಾಹಿತಿಗಾಗಿ ನಾವು ಪೊಲೀಸ್ ಠಾಣೆಗೆ ಹೋಗುವುದರ ಅವಶ್ಯಕತೆ ಇರುವುದಿಲ್ಲ. ಉತ್ತಮ ಪೊಲೀಸ್ ಸೇವೆಗಳನ್ನು ಜಿಲ್ಲೆಯ ಜನರಿಗೆ ಒದಗಿಸುವ ಬದ್ಧತೆಯನ್ನು ಇದು ಹೊಂದಿದೆ.ಮೊ.ಸಂ. 9480802538 ಬಳಸಿ
ಜಿಲ್ಲಾ ಪೊಲೀಸ್ ಇಲಾಖೆಯಿಂದ ವಾಟ್ಸ್‌ಆ್ಯಪ್ ಚಾಟ್‌ಬಾಟ್‌ಗೆಂದೇ 9480802538 ಮೊಬೈಲ್ ನಂಬರ್ ನೀಡಲಾಗಿದ್ದು, ಮೊದಲು ಈ ನಂಬರ್‌ಅನ್ನು ನಿಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿಕೊಳ್ಳಬೇಕು. ಆನಂತರ ವಾಟ್ಸ್‌ಆ್ಯಪ್‌ನಲ್ಲಿ ಈ ನಂಬರ್‌ಗೆ ಹಾಯ್ ಎಂದು ಮೆಸೇಜ್ ಕಳಿಸಿದರೆ ಸಾಕು ಪೊಲೀಸ್ ಇಲಾಖೆಯಲ್ಲಿ ಲಭ್ಯವಿರುವ ಸೇವೆಗಳ ಹೆಸರು ಬರಲಿವೆ. ನಿಮಗೆ ಬೇಕಾದ ಸೇವೆಯ ಸಂಖ್ಯೆಯನ್ನು ಹಾಕಿದರೆ ಆ ಸೇವೆಗೆ ಸಂಬಂಧಿಸಿದ ಮಾಹಿತಿ ನಿಮಗೆ ಲಭ್ಯವಾಗಲಿದೆ. ದಿನದ 24 ಗಂಟೆಯೂ ವಾಟ್ಸ್‌ಆ್ಯಪ್ ಮೂಲಕ ಈ ಸೇವೆ ಎಲ್ಲರಿಗೂ ಲಭ್ಯವಾಗಲಿದೆ ಎಂದರು.ಪ್ರೋಗ್ರಾಮಿಂಗ್ ಮೂಲಕ ಪೊಲೀಸ್ ಇಲಾಖೆಯಲ್ಲಿ ಸಿಗುವ ಎಲ್ಲ ಸೌಲಭ್ಯಗಳ ಮಾಹಿತಿಯನ್ನು ಈ ಚಾಟ್‌ಬಾಟ್‌ನಲ್ಲಿ ಹಾಕಲಾಗಿದೆ. ಸದ್ಯ ಈ ಚಾಟ್‌ಬಾಟ್‌ನಲ್ಲಿ ತುರ್ತು ಸೇವೆ, ಕಾನೂನು ಉಲ್ಲಂಘನೆ ವರದಿ ಮಾಡುವುದು, ಎಫ್‌ಐಆರ್ ಕಾಪಿ ಡೌನ್‌ಲೋಡ್ ಮಾಡುವ ಲಿಂಕ್, ಸಂಚಾರ ಸುರಕ್ಷತೆ ಮತ್ತು ನಿಯಮಗಳು, ಪೊಲೀಸ್ ಮಾಹಿತಿ, ಸೈಬರ್ ಅಪರಾಧ ಜಾಗೃತಿ, ಜಾಗೃತಿ ಅಭಿಯಾನ, ಪತಿ-ಪತ್ನಿಯರಿಗೆ ಕಾನೂನು ಅರಿವು,ನೆರವು, ಕಾನೂನು ಮಾಹಿತಿ, ನಾಗರಿಕ ಹಕ್ಕುಗಳು, ಹೆಚ್ಚುವರಿ ಸೇವೆಗಳು ಹೀಗೆ ಹಲವು ಮಾಹಿತಿ ಇಲ್ಲಿ ಲಭ್ಯವಿದೆ.
ಆ್ಯಪ್ ರೂಪಿಸಿದವರಿಗೆ ಸನ್ಮಾನಈ ವೇಳೆ ಆಪ್ ರೂಪಿಸಲು ನೆರವಾದ ಎಸ್‌ಜೆಸಿಐಟಿ ಪ್ರಾಂಶುಪಾಲ ಡಾ.ಜಿ.ಟಿ.ರಾಜು, ವಿದ್ಯುನ್ಮಾನ ವಿಭಾಗ ಮುಖ್ಯಸ್ಥ ಡಾ.ರಂಗಸ್ವಾಮಿ, ಪ್ರಾಧ್ಯಾಪಕಿ ಡಾ.ಪ್ರಾಂಜಲಾ ತಿವಾರಿ, ಅಂತಿಮ ವರ್ಷದ ವಿದ್ಯಾರ್ಥಿಗಳಾದ ಹೆಚ್.ಸಿ.ಭರತ್, ಎಂ.ಪಿ.ಹೇಮಂತ್ ಕುಮಾರ್,ಸಿ.ಆಯುಶ್ ರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ ರೈ, ಡಿವೈಎಸ್ ಪಿಗಳಾದ ಎಸ್.ಶಿವಕುಮಾರ್, ರವಿಕುಮಾರ್, ಮುರಳೀಧರ್, ನಾಗೇಂದ್ರಪ್ರಸಾದ್, ಜಿಲ್ಲೆಯ ಎಲ್ಲಾ ಪೋಲಿಸ್ ಅಧಿಕಾರಿಗಳು,ಕಾಲೇಜು ವಿದ್ಯಾರ್ಥಿಗಳು ಇದ್ದರು.