ರಾಮನಗರ: ಬೇಸಿಗೆ ಬೇಗೆ ಹೆಚ್ಚಾಗಿರುವುದರಿಂದ ಜನ , ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ. ಈಗಿರುವ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಗ್ರಾಮ ಪಂಚಾಯಿತಿಯಲ್ಲಿರುವ ಅನುದಾನವನ್ನು ಕುಡಿಯುವ ನೀರಿನ ವ್ಯವಸ್ಥೆಗಷ್ಟೆ ಬಿಲ್‌ಗಳನ್ನು ಪಾವತಿಸಬೇಕು. ಬೇರೆ ಯಾವುದೇ ಉದ್ದೇಶಗಳಿಗೆ ಹಣ ಬಳಸಿದರೆ ಪಿಡಿಒಗಳ ವಿರುದ್ಧ ಕ್ರಮ ವಹಿಸಬೇಕಾಗುತ್ತದೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಖಡಕ್ ಎಚ್ಚರಿಕೆ ನೀಡಿದರು.
ಗ್ರಾಪಂ ಪಿಡಿಓ ಗಳು ಜನರಿಗೆ ಕುಡಿಯುವ ನೀರು ಕೊಡಲು ದೂರ ಎಂದು ಕೈ ಚೆಲ್ಲುವ ಕೆಲಸ ಮಾಡಿದರೆ ಆಗುವುದಿಲ್ಲ. ನೀರು ಸಿಗುವ ಜಾಗ ಇದೆ ಎಂದರೆ ಒಂದು ಕಿ.ಮೀ ದೂರವಾದರೂ ಸರಿ, ಪಾಯಿಂಟ್ ಮಾಡಿಸಿ ಬೋರ್ ವೆಲ್ ಕೊರೆಸಿ ನೀರು ಪೂರೈಕೆಗೆ ಅಗತ್ಯ ಕ್ರಮ ವಹಿಸಬೇಕು. ಯಾರಿಂದಲಾದರು ಸಾರ್ವಜನಿಕರಿಗೆ ತೊಂದರೆಯಾದರೆ ಪಿಡಿಓಗಳು ಅವರ ವಿರುದ್ಧ ಕಾನೂನು ಕ್ರಮ ವಹಿಸುವಂತೆ ತಿಳಿಸಿದರು.
ಸಾರ್ವಜನಿಕರು ಸಭೆಯಲ್ಲಿ ನನ್ನ ಗಮನ ಸೆಳೆದಿರುವ ಎಲ್ಲ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮುಂದಿನ ಸಭೆಯಷ್ಟರಲ್ಲಿ ಬಗೆಹರಿಸಿ, ಕೆಲವು ಬಗೆಹರಿಸಲು ಸಮಸ್ಯೆಯಿರುವ ಸ್ಥಳ ಪರಿಶೀಲಿಸಿ ವಾಸ್ತವತೆಯ ವರದಿಯನ್ನು ನೀಡಿ ನಂತರ ಚರ್ಚಿಸಿ ಬಗೆಹರಿಸುವ ಕೆಲಸವನ್ನು ಮಾಡೋಣ ಎಂದು ಕಿವಿಮಾತು ಹೇಳಿದರು.ಸಭೆಯಲ್ಲಿ ಪಹಣಿ ಬದಲಾಯಿಸಿಕೊಡಿ, ಗೋಪಳ್ಳಿ ಆಸ್ಪತ್ರೆ ಸಮಸ್ಯೆ ಬಗೆಹರಿಸಿ, ಸಾಗುವಳಿ ಚೀಟಿ ಖಾತೆ ಮಾಡಿಕೊಡಿ, ಶೇಷಗಿರಿಹಳ್ಳಿ ಗ್ರಾಮ ಪರಿಮಿತಿಯಲ್ಲಿ ಕಳ್ಳಿಬೇಲಿ ತೆರವು ಮಾಡಿ, ಹಕ್ಕುಪತ್ರ ಸೇರಿದಂತೆ ಹಲವು ಸಮಸ್ಯೆಗಳನ್ನು ಶಾಸಕ ಹೆಚ್.ಸಿ.ಬಾಲಕೃಷ್ಣ ಆಲಿಸಿ ಬಗೆಹರಿಸುವ ಭರವಸೆ ನೀಡಿದರು.
27ಕೆಆರ್ ಎಂಎನ್ 5.ಜೆಪಿಜಿ