ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕೆಗೆ ಸರ್ಕಾರಿ ಭೂಮಿಯನ್ನು ಗುರುತಿಸುವಲ್ಲಿ ವಿಫಲರಾಗಿರುವ ಜಿಲ್ಲಾ ಕಂದಾಯ ಇಲಾಖೆ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಸುಳ್ಳು ವರದಿ ನೀಡಿದ್ದಾರೆ. ರಾಜಕೀಯ, ಕಲ್ಲು ಗಣಿ ಹಾಗೂ ಭೂಗಳ್ಳರ ಪ್ರಭಾವಕ್ಕೆ ಒಳಗಾಗಿ ಸತ್ಯವನ್ನು ಮರೆಮಾಚಿ ಸರ್ಕಾರ ಮತ್ತು ಜನರ ಕಣ್ಣಿಗೆ ಮಣ್ಣೆರಚಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಆರೋಪಿಸಿದರು.ಮಂಡ್ಯ ತಾಲೂಕು ರಾಗಿಮುದ್ದನಹಳ್ಳಿ ಗ್ರಾಮದ ಸರ್ವೇ ನಂ.೮೧ರಲ್ಲಿ ೯೨ ಎಕರೆ ೧೩ ಗುಂಟೆ ಹಾಗೂ ಶ್ರೀರಂಗಪಟ್ಟಣ ತಾಲೂಕು ಸಿದ್ದಾಪುರ ಗ್ರಾಮದ ಸರ್ವೇ ನಂ.೯೩ರಲ್ಲಿ ೨೧ ಎಕರೆ ೨೨ ಗುಂಟೆ , ಈ ಗೋಮಾಳ ಜಮೀನಿಗೆ ಹೊಂದಿಕೊಂಡಂತಿರುವ ಶ್ರೀರಂಗಪಟ್ಟಣ ತಾಲೂಕು ಜಕ್ಕನಹಳ್ಳಿ ಗ್ರಾಮದ ಸರ್ವೇ ನಂ೮೩ರಲ್ಲಿ ಆಕಾರ್ ಬಂದ್‌ನಂತೆ ೩೩೧ ಎಕರೆ ೩೫ ಗುಂಟೆ ಇದ್ದು ಇದರಲ್ಲಿ ೧೦೨ ಎಕರೆ ೩೫ ಗುಂಟೆ ಸರ್ಕಾರಿ ಗೋಮಾಳವಿರುವ ಬಗ್ಗೆ ೩ ಮೇ ೨೦೧೬ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಡೀಮ್ಡ್ ಫಾರೆಸ್ಟ್ ಕುರಿತಾದ ಕಂದಾಯ-ಅರಣ್ಯ ಅಧಿಕಾರಿಗಳ ಜಿಲ್ಲಾ ಮಟ್ಟದ ಸಂಚಲನಾ ಸಮಿತಿ ಸಭೆಯ ನಡವಳಿಗಳಲ್ಲಿ ತೀರ್ಮಾನಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಅದರಂತೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಅರಣ್ಯ ಇಲಾಖೆಗೆ ಸೇರಿದ ೮೨೭೯ ಎಕರೆ ೧೮ ಗುಂಟೆ ಸಕಾಜಮೀನಿದ್ದು ಇದರಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ೨೦೬೯ ಎಕರೆ ೩೮ ಗುಂಟೆ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಿಕೊಳ್ಳಲಾಗಿದೆ. ಈ ಜಮೀನುಗಳು ಭಾಗಶಃ ಒಂದೇಕಡೆ ಬರುತ್ತಿವೆ. ಸಮೀಪದಲ್ಲೇ ಮೈಸೂರು ನಗರವಿದೆ.
ಪ್ರವಾಸಿ ತಾಣಿಗಳು ಹತ್ತಿರದಲ್ಲಿ ಇವೆ. ನೀರು, ವಿದ್ಯುತ್, ಹೆದ್ದಾರಿ ಸೇರಿದಂತೆ ಇನ್ನಿತರ ಮೂಲಸೌಲಭ್ಯಗಳಿವೆ. ಅಲ್ಲದೇ, ಶ್ರೀರಂಗಪಟ್ಟಣ ಸಮೀಪದ ಅಲ್ಲಾಪಟ್ಟಣ ಸರ್ವೇ ನಂ. ೨೧೨ರಲ್ಲಿ ಮರಳಗಾಲ ಗ್ರಾಮದ ಸರ್ಕಾರಿ ಜಾಗದಲ್ಲಿ ಲೀಥಿಯಂ ನಿಕ್ಷೇಪವಿದೆ. ಅರಣ್ಯ ಪ್ರದೇಶ ಹಾಗೂ ಗೋಮಾಳ ಪ್ರದೇಶಗಳು ಒಂದಕ್ಕೊಂದು ಹೊಂದಿಕೊಂಡಿರುವುದರಿಂದ ಅರಣ್ಯ, ಕಂದಾಯ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆಐಎಡಿಬಿ ಮತ್ತು ಇತರೆ ಇಲಾಖೆಗಳ ಅಧಿಕಾರಿಗಳ ತಂಡ ರಚಿಸಿ ಕೈಗಾರಿಕೆ ಸ್ಥಾಪನೆಗೆ ಹಸ್ತಾಂತರಿಸುವಂತೆ ಆಗ್ರಹಪಡಿಸಿದರು.ವಾಸ್ತವಾಂಶ ಹೀಗಿದ್ದರೂ ಸತ್ಯವನ್ನು ಮರೆಮಾಚಿ ರಾಗಿಮುದ್ದನಹಳ್ಳಿ ಸರ್ವೇ ನಂ.೮೧ ಹಾಗೂ ಸಿದ್ದಾಪುರ ಗ್ರಾಮದ ಸರ್ವೇ ನಂ.೯೩ರಲ್ಲಿರುವ ಸರ್ಕಾರಿ ಜಮೀನುಗಳು ಈಗಾಗಲೇ ಕಲ್ಲುಗಣಿಗಾರಿಕೆ ನಡೆದು ಹಳ್ಳ, ಕಲ್ಲು-ಬಂಡೆ, ಹಾಗೂ ಗುಡ್ಡಗಳಿಂದ ಕೂಡಿರುವ ಪ್ರದೇಶವಾಗಿದೆ. ಭೂಮಿ ಸಮತಟ್ಟಾಗಿರುವುದಿಲ್ಲ. ಕೈಗಾರಿಕಾ ಘಟಕ ಸ್ಥಾಫನೆಗೆ ಸೂಕ್ತವಾಗಿರುವುದಿಲ್ಲ ಎಂದು ಅಧಿಕಾರಿಗಳು ಸರ್ಕಾರಕ್ಕೆ ತಿಳಿಸಿದ್ದಾರೆ. ಆದರೆ, ಈ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ನಮೂನೆ ೫೦, ೫೩, ೫೭ರಲ್ಲಿ ವಿಲೇವಾರಿಗೆ ಬಾಕಿ ಇದೆ ಎಂದು ಕಲ್ಲು ಬಂಡೆ ಹಾಗೂ ಗುಡ್ಡಗಳಿಂದ ಕೂಡಿರುವ ಈ ಪ್ರದೇಶವನ್ನು ವ್ಯವಸಾಯಕ್ಕೆ ಹೇಗೆ ಮಂಜೂರು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಹಾಗೂ ಎರಡೂ ಗ್ರಾಮಗಳ ಸರ್ಕಾರಿ ಜಮೀನಿಗೆ ಕಾವೇರಿ ನೀರು, ಇತರೆ ಮೂಲಸೌಲಭ್ಯಗಳಿರುವುದರಿಂದ ಒಟ್ಟು ೧೧೩ ಎಕರೆ ೩೫ ಗುಂಟೆ ಪ್ರದೇಶವನ್ನು ಅಭಿವೃದ್ಧಿಪಡಿಸಿ ಹಳ್ಳ, ಕಲ್ಲು ಬಂಡೆ, ಗುಡ್ಡಗಳಿಂದ ಕೂಡಿರುವ ಪ್ರದೇಶವನ್ನು ಸಮತಟ್ಟುಗೊಳಿಸಿ ಕೈಗಾರಿಕೆ ಘಟಕಕ್ಕೆ ನೀಡಬಹುದು ಎಂದು ಸಲಹೆ ನೀಡಿದರು.
ಇನ್ನು ಮಂಡ್ಯ ತಾಲೂಕು ಮುದ್ದನಘಟ್ಟ ಮತ್ತು ಹೆಗ್ಗಡತಿಹಳ್ಳಿ ಗ್ರಾಮದಲ್ಲಿ ೧೦೫ ಎಕರೆ ಸರ್ಕಾರಿ ಭೂಮಿಯೇ ಇಲ್ಲ. ಆದರೂ, ಭೂಮಿ ಇರುವುದಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಅಧಿಕಾರಿಗಳು ದಿಕ್ಕು ತಪ್ಪಿಸಿದ್ದಾರೆ ಎಂದು ದೂರಿದ ಕೆ.ಆರ್.ರವೀಂದ್ರ, ಈ ಎರಡೂ ಸರ್ಕಾರಿ ಜಮೀನುಗಳ ಕುರಿತಾಗಿ ಈಗ ಸರ್ವೇ ಕಾರ್ಯ ನಡೆಯುತ್ತಿದೆ. ಆದರೆ, ೧೩ ನವೆಂಬರ ೨೦೧೫ರಲ್ಲಿ ಮಂಡ್ಯ ತಹಸೀಲ್ದಾರ್ ಅವರಿಂದ ಪಡೆದಿರುವ ನಮೂನೆ-೭ರ ದಾಖಲೆಯ್ಲಿ ಹೆಗ್ಗಡತಿಹಳ್ಳಿ ಗ್ರಾಮದ ಸರ್ವೆ ನಂ.೩೫ರಲ್ಲಿ ೧೮೫ ಎಕರೆ ೩೫ ಗುಂಟೆ ಸರ್ಕಾರಿ ಗೋಮಾಳದ ಜಮೀನಿದ್ದು ೧೭೪ ಎಕರೆ ೧೩ ಗುಂಟೆ ರೈತರಿಗೆ ಮಂಜೂರಾಗಿದೆ. ೮ ಜನರು ೧೧ ಎಕರೆ ೨೨ ಗುಂಎ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು ನಮೂನೆ-೫೦ರಲ್ಲಿ ಅರ್ಜಿ ಸಲ್ಲಿಸಿರುವುದಾಗಿ ವಿವರಿಸಿದರು.
ಜಿಲ್ಲೆಗೆ ಕೈಗಾರಿಕೆಯನ್ನು ತರಬೇಕೆಂಬ ಆಸಕ್ತಿ ಅಥವಾ ದೂರದೃಷ್ಟಿ ಜನಪ್ರತಿನಿಧಿಗಳಿಗೆ ಇಲ್ಲವೇ ಇಲ್ಲ. ಮೊದಲಿಗೆ ೧೦೦ ಎಕರೆ ಜಮೀನು ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇದೀಗ ೫೦೦ ರಿಂದ ೬೦೦ ಎಕರೆ ಜಮೀನು ಕೇಳುತ್ತಿದ್ದಾರೆ. ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಕ್ಷೇತ್ರದಲ್ಲಿ ಕೈಗಾರಿಕೆ ಸ್ಥಾಪನೆಯಾಗಬೇಕೆಂದು ಹಠ ಹಿಡಿದಿದ್ದಾರೆ. ಇವರಿಗೆ ನಿಜವಾದ ಇಚ್ಛಾಶಕ್ತಿ ಇದ್ದಿದ್ದರೆ. ಪರಸ್ಪರ ಸಹಕಾರ ಮನೋಭಾವದೊಂದಿಗೆ ಕೈಗಾರಿಕೆ ಸ್ಥಾಪನೆಗೆ ಅಗತ್ಯವಿರುವಷ್ಟು ಜಮೀನನ್ನು ಕೊಡಿಸುತ್ತಿದ್ದರು. ಜನರಿಗೆ ಉದ್ಯೋಗ ಸೃಷ್ಟಿಸುವ ಕೈಗಾರಿಕೆಯನ್ನು ಕಾಲಮಿತಿಯೊಳಗೆ ಜಾರಿಗೊಳಿಸುತ್ತಿದ್ದರು. ಸದ್ಯಕ್ಕೆ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವ ಯಾವುದೇ ಲಕ್ಷಣಗಳಿಲ್ಲವೆಂದು ತಿಳಿಸಿದರು.ಈಗ ಸ್ಥಾಪಿಸಲು ಉದ್ದೇಶಿಸಿರುವ ಎಆರ್‌ಎಐ ಪರೀಕ್ಷಾ ಕೇಂದ್ರ ದೊಡ್ಡ ಮಟ್ಟದ ಉದ್ಯೋಗಗಳನ್ನೇನೂ ಸೃಷ್ಟಿಸುವುದಿಲ್ಲ. ಹೊಸ ಕಾರುಗಳು, ವಾಹನಗಳು ಬಂದ ಸಮಯದಲ್ಲಿ ಅವುಗಳನ್ನು ಪರೀಕ್ಷಿಸುವ ಕೇಂದ್ರವಾಗಷ್ಟೇ ಕಾರ್ಯನಿರ್ವಹಿಸಲಿದೆ ಎಂದು ನುಡಿದರು.