ಧಾರವಾಡ: ಯುವ ಜನಾಂಗದಲ್ಲಿ ಅಡಗಿದ ಅಗಾಧ ಶಕ್ತಿ ಸದ್ಬಳಸಿ, ಉನ್ನತ ಸಾಧನೆ ಮಾಡಬೇಕು. ಈ ಮೂಲಕ ತಂದೆ-ತಾಯಿ, ಕಲಿಸಿದ ಗುರು, ಸಮಾಜ ಹಾಗೂ ದೇಶದ ಋಣ ತೀರಿಸಬೇಕು ಎಂದು ಐಐಟಿ ಡೀನ್ ಹಾಗೂ ಹಿರಿಯ ವಿಜ್ಞಾನಿ ಡಾ. ಎಸ್.ಎಂ. ಶಿವಪ್ರಸಾದ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಪ್ರಸಕ್ತ ತ್ರೈವಾರ್ಷಿಕ ಅವಧಿಯ ಕಾರ್ಯಚಟುವಟಿಕೆಗಳ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.ಮನುಷ್ಯನ ಜೀವಿತ ಅವಧಿಯಲ್ಲಿ ಯೌವನದ ಬದುಕು ಬಹಳ ಸುಂದರ. ದುಶ್ಚಟಗಳಿಂದ ಈ ಯೌವನ ವ್ಯರ್ಥ ಮಾಡದೆ, ಸದ್ಗುಣಗಳು ಬೆಳೆಸಿಕೊಳ್ಳಬೇಕು. ಮತ್ತೊಬ್ಬರಿಗೆ ಮಾದರಿ ಆಗುವ ರೀತಿಯಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಸಲಹೆ ನೀಡಿದರು.
ಕ್ರೀಡೆಗಳು ಮನುಷ್ಯನ ಬದುಕಿಗೆ ಉಲ್ಲಾಸ, ಉತ್ಸಾಹ ತುಂಬಲಿವೆ. ಹೀಗಾಗಿ ಸೋಲು- ಗೆಲವು ಸಮ ಚಿತ್ತದಿಂದ ಸ್ವೀಕರಿಸಬೇಕು. ಸ್ಪರ್ಧಾ ಮನೋಭಾವ ಉತ್ತಮ ಕ್ರೀಡಾರ್ಥಿ ಲಕ್ಷಣ. ಉನ್ನತ ಗುರಿಯೊಂದಿಗೆ ಸಾಧನೆ ಹಾದಿಯಲ್ಲಿ ಸಾಗಿದರೆ ಮಾತ್ರವೇ ಗುರಿ ಮುಟ್ಟಲು ಸಾಧ್ಯ ಎಂದರು.ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಯುವಜನಾಂಗದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಯುವ ಜನಾಂಗವೇ ಈ ದೇಶದ ಆಸ್ತಿ. ಇದು ಎಂದಿಗೂ ವ್ಯರ್ಥ ಆಗಬಾರದು ಎಂದರು.
ಪ್ರೇಮಾ ಬೂದಿಹಾಳ ಮಲ್ಲಕಂಬ, ಕೆ.ಇ. ಬೋರ್ಡ್ ಪ್ರಥಮ ದರ್ಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಹಾಗೂ ಜಿಗಳೂರು ಮಹಿಳಾ ಕಾಲೇಜು ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯನ್ನು ಪ್ರಸ್ತುತಪಡಿಸಿದರು. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಸಮೂಹಗಾನ ಮತ್ತು ಮೃತ್ಯುಂಜಯ ಕತಾಲೇಜು ವಿದ್ಯಾರ್ಥಿಗಳು ನಾಟಕ ಪ್ರದರ್ಶನ ನೀಡಿದರು.ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ವಸಂತ ಮುರ್ಡೇಶ್ವರ, ಶಂಕರ ಹಲಗತ್ತಿ, ವೀಣಾ ಹೊಸಮನಿ, ಡಾ. ವಿಜಯಶ್ರೀ ಅಂಗಡಿ, ವಿಶ್ವೇಶ್ವರಿ ಹಿರೇಮಠ, ಡಾ. ಬಾಬು ಬೆಣ್ಣಿ ಇದ್ದರು.