ಲಕ್ಷ್ಮೇಶ್ವರ: ನೊಂದವರ, ಬಡವರ, ಸಮಾಜದ ಹಿಂದುಳಿದವರ ಕಣ್ಣೀರು ಒರೆಸುವ ಕಾರ್ಯ ನಿರಂತರವಾಗಿ ನಿಮ್ಮಿಂದ ಆಗಲಿ ಎಂದು ಹೂವಿನ ಶಿಗ್ಲಿಯ ವಿರಕ್ತ ಮಠದ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ವೀರ ಗಂಗಾಧರ ಸಮುದಾಯ ಭವನದಲ್ಲಿ ಶುಕ್ರವಾರ ಶಾಸಕ ಡಾ. ಚಂದ್ರು ಲಮಾಣಿ ಅವರ ಅಭಿಮಾನಿ ಬಳಗವು ಹಮ್ಮಿಕೊಂಡಿದ್ದ ಶಾಸಕ ಡಾ. ಚಂದ್ರು ಲಮಾಣಿ ಅವರ 36ನೇ ಜನ್ಮ ದಿನಾಚರಣೆ ಅಂಗವಾಗಿ ಎಸ್ಸೆಸ್ಸೆಲ್ಸಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಸ್ಟಡಿ ಮಟಿರಿಯಲ್ ವಿತರಿಸಿ ಅವರು ಮಾತನಾಡಿದರು.ಅಧಿಕಾರ ಇದ್ದಾಗ ಬಡವರ ಸೇವೆ ಮಾಡುವ ಅವಕಾಶ ಸಿಕ್ಕಾಗ ಅದನ್ನು ಬಳಸಿಕೊಂಡು ಉತ್ತಮ ಕಾರ್ಯ ನಿಮ್ಮಿಂದ ನಡೆಯಲಿ. ಸಮಾಜದಲ್ಲಿನ ಕಡೆಯ ವ್ಯಕ್ತಿಗೂ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ತಾವು ಶ್ರಮಿಸಬೇಕು. ಕ್ಷೇತ್ರಕ್ಕೆ ಹಲವಾರು ಜನಪರ ಯೋಜನೆಗಳನ್ನು ತರುವ ಮೂಲಕ ಮಾದರಿ ಕ್ಷೇತ್ರವಾಗಿ ಬದಲಾಯಿಸುವ ಕಾರ್ಯ ನಿಮ್ಮಿಂದ ಆಗಲಿ. ಅಧಿಕಾರ ಶಾಶ್ವತವಲ್ಲ ನಾವು ಮಾಡುವ ಕೆಲಸಗಳು ನಿಮ್ಮನ್ನು ಜನ ಮಾನಸದಲ್ಲಿ ನೆಲೆ ನಿಲ್ಲುವಂತೆ ಮಾಡುತ್ತೇವೆ ಎಂದು ಹೇಳಿದರು. ಈ ವೇಳೆ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಮಾತನಾಡಿ, ಶಾಸಕರು ಶಿರಹಟ್ಟಿ ಮತಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡುವ ಮೂಲಕ ಮಾದರಿ ಕ್ಷೇತ್ರವಾಗಿ ಮಾಡಬೇಕು. ಸಿಕ್ಕ ಅವಕಾಶ ಬಳಸಿಕೊಳ್ಳುವ ಮೂಲಕ ಬಡಜನರಿಗೆ ಸಹಾಯ ಮಾಡುವ ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಕಾರ್ಯ ಮಾಡಬೇಕು. ದೇವರು ಇನ್ನೂ ಹೆಚ್ಚಿನ ಆರೋಗ್ಯ ನೀಡುವ ಮೂಲಕ ಜನ ಸೇವೆ ಮಾಡುವ ಭಾಗ್ಯ ನಿಮ್ಮದಾಗಲಿ ಎಂದು ಹೇಳಿದರು.
ವೇದಿಕೆಯ ಮೇಲೆ ಟೋಪಣ್ಣ ಲಮಾಣಿ, ಶಿವಣ್ಣ ಲಮಾಣಿ, ಬಿ.ಎಸ್. ಹರ್ಲಾಪೂರ, ಮಲ್ಲೇಶಪ್ಪ ಲಮಾಣಿ, ಜಾನು ಲಮಾಣಿ, ಶಿಗ್ಲಿಯ ರಾಮಣ್ಣ ಲಮಾಣಿ, ನಿಂಗಪ್ಪ ಬನ್ನಿ, ಮಹಾದೇವಪ್ಪ ಅಣ್ಣಿಗೇರಿ, ಬಿ.ಡಿ. ಪಲ್ಲೇದ, ಸಂತೋಷ ಅಕ್ಕಿ, ಗುರುಪ್ಪ ಲಮಾಣಿ, ಚನ್ನಪ್ಪ ಕೋಲಕಾರ, ಥಾವರೆಪ್ಪ ಲಮಾಣಿ, ಗಂಗಾಧರ ಮೆಣಸಿನಕಾಯಿ, ನೀಲಪ್ಪ ಹತ್ತಿ, ಎಸ್.ಕೆ. ಕಾಳಪ್ಪನವರ ಹಾಗೂ ಅಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.ಈ ವೇಳೆ ಉಪನ್ಯಾಸ ಬಸವರಾಜ ಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಕಮ್ಮ ಕೋರದಾಳ ಪ್ರಾರ್ಥಿಸಿದರು. ಕೆ.ಆರ್. ಲಮಾಣಿ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ಕಾರ್ಯಕ್ರಮ ನಿರೂಪಿಸಿದರು.