ಓಟಿನ ರಾಜಕಾರಣಕ್ಕೆ ಕಾವೇರಿ ವಿವಾದ ಬಳಕೆ: ವೆಂಕಟಗಿರಿಯಯ್ಯ

KannadaprabhaNewsNetwork | Published : Apr 21, 2024 2:20 AM

ಸಾರಾಂಶ

ಕಾವೇರಿ ಜಲವಿವಾದ ಮುಂದಿಟ್ಟುಕೊಂಡು ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಓಟಿನ ರಾಜಕರಣ ಮಾಡಿಕೊಂಡಿರುವುದು ವಿಪರ್ಯಾಸ. ಮಾತುಕತೆಯ ಮೂಲಕ ಸೂಕ್ಷ್ಮವಾಗಿ ಬಗೆಹರಿಸಿಕೊಳ್ಳಬಹುದಾಗಿರುವ ಕಾವೇರಿ ಜಲವಿವಾದವನ್ನು ರಾಜಕೀಯ ಸ್ವಾರ್ಥಕ್ಕೆ ಇನ್ನಷ್ಟು ಜಟಿಲಗೊಳಿಸುತ್ತಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಕಾವೇರಿ ಜಲ ವಿವಾದವನ್ನು ಓಟಿನ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ದುರಂತ ಎಂದು ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಹೇಳಿದರು.

ಶನಿವಾರ ನಗರದ ಗಾಂಧಿ ಭವನದಲ್ಲಿ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ೧೩೩ನೇ ಜನ್ಮ ದಿನೋತ್ಸವ ಮತ್ತು ಜಿಲ್ಲಾ ಸ್ವಾಭಿಮಾನ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕಾವೇರಿ ಜಲವಿವಾದ ಮುಂದಿಟ್ಟುಕೊಂಡು ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಓಟಿನ ರಾಜಕರಣ ಮಾಡಿಕೊಂಡಿರುವುದು ವಿಪರ್ಯಾಸ. ಮಾತುಕತೆಯ ಮೂಲಕ ಸೂಕ್ಷ್ಮವಾಗಿ ಬಗೆಹರಿಸಿಕೊಳ್ಳಬಹುದಾಗಿರುವ ಕಾವೇರಿ ಜಲವಿವಾದವನ್ನು ರಾಜಕೀಯ ಸ್ವಾರ್ಥಕ್ಕೆ ಇನ್ನಷ್ಟು ಜಟಿಲಗೊಳಿಸುತ್ತಿವೆ ಎಂದು ದೂರಿದರು.

ಕಾವೇರಿ ಜಲವಿವಾದಕ್ಕೆ ಸಂವಿಧಾನದಲ್ಲೇ ಸ್ಪಷ್ಟ ಪರಿಹಾರವಿದೆ, ಆರ್ಟಿಕಲ್ ೨೬೨ರಲ್ಲಿ ರಾಷ್ಟ್ರೀಯ ಜಲನೀತಿ ರೂಪಿಸಿ ಎಲ್ಲಾ ನದಿಗಳ ಜಲವಿವಾದಕ್ಕೆ ಪರಿಹಾರ ನೀಡಿದ್ದಾರೆ. ಕೇಂದ್ರ ಸರ್ಕಾರ ಜಲನೀತಿ ರೂಪಿಸಿದರೆ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳಬಹುದು ಎಂದರು.

೭೦ ವರ್ಷದ ಹಿಂದ ಜಲನೀತಿಗೆ ಪರಿಹಾರ ಸೂಚಿಸಿದ್ದರೂ ಆಳುವ ಸರ್ಕಾರಗಳು ಸಂವಿಧಾನ ಕಲಂಗಳನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸದಿರುವುದರಿಂದಲೇ ಜಲವಿವಾದಗಳು ಹೆಚ್ಚಾಗುತ್ತಿವೆ ಎಂದರು.

ರಾಜ್ಯ ಸಂಪನ್ಮೂಲ ಕೇಂದ್ರದ ಮಾಜಿ ನಿರ್ದೇಶಕ ಡಾ.ಎಸ್.ತುಕಾರಾಂ ಮಾತನಾಡಿ, ಅಂಬೇಡ್ಕರ್ ಅವರ ಆಶಯ ನಮ್ಮ ಜನರು ಘನತೆ ಮತ್ತು ಗೌರವದಿಂದ ಬದುಕುವ ಸ್ವಾಭಿಮಾನವನ್ನು ಕಲಿಯಬೇಕಿದೆ, ಸಮಸಮಾಜ ನಿರ್ಮಾಣವಾಗುವ ರೀತಿ ಬದುಕು ಕಟ್ಟಿಕೊಳ್ಳಬೇಕಿದೆ ಎಂದರು.

ಶ್ರೇಣಿಕೃತ ಸಮಾಜದ ವ್ಯವಸ್ಥೆಯಲ್ಲಿ ಇಬ್ಬರೂ ಸುಖವಾಗಿಲ್ಲ. ದಲಿತರು ಮತ್ತು ದಲಿತೇರರು ಪರಿವರ್ತನೆಯತ್ತ ಸಾಗಬೇಕಿದೆ, ಉನ್ನತ ಶಿಕ್ಷಣ, ಉದ್ಯೋಗ ದಲಿತರ ಬದುಕನ್ನು ಅಸನು ಮಾಡಿತ್ತದೆ, ಸ್ವಾಭಿಮಾನಿಗಳನ್ನಾಗಿ ರೂಪಿಸುತ್ತದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಟಿ. ನರಸೀಪುರ ನಳಂದ ಬೌದ್ಧ ವಿಹಾರ ಭಂತೆ ಬೋಧಿರತ್ನ ಭಂತೇಜಿ, ಕದಸಂಸ ಜಿಲ್ಲಾಧ್ಯಕ್ಷ ಕೆ.ಎಂ.ಶ್ರೀನಿವಾಸ್, ಮೈಸೂರು ವಿಭಾಗೀಯ ಸಂಚಾಲಕ ಕೆ.ಎಂ.ಅನಿಲ್‌ಕುಮಾರ್, ಸಂಚಾಲಕ ಸುಭಾಷ್ ತಳವಾರ್, ತುಮಕೂರು ಶಿರಾ ರಂಗನಾಥ್ ಟೈರ್, ಬೆಂಗಳೂರು ಮುನಿರಾಜ್, ಸೋಮಶೇಖರ್ ಮೇನಾಗರ, ಆರ್ಮುಗಂ, ಕೆ.ಎಸ್.ದೇವರಾಜು, ಮದ್ದೂರು ಆನಂದ್, ಚನ್ನಕೇಶವ, ಭಾಗ್ಯಮ್ಮ ಮತ್ತಿತರರಿದ್ದರು.

Share this article