ಕಾರಟಗಿ: ತೊಗರಿ ಬೆಳೆಯಲ್ಲಿ ನ್ಯಾನೋ ರಸಗೊಬ್ಬರ ಮತ್ತು ಕುಡಿ ಚುಟುವ ಯಂತ್ರ ಬಳಸಿಕೊಂಡು ಉತ್ತಮ ಫಸಲು ಪಡೆಯಬಹುದು ಎಂದು ಕೃಷಿ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು.
ವಡ್ಡರಹಟ್ಟಿಯ ಕೃಷಿ ತರಬೇತಿ ಕೇಂದ್ರದ ಬೀರಪ್ಪ ಮಾತನಾಡಿ, ರೈತರು ತೊಗರಿ ಬಿತ್ತನೆ ಮಾಡಿದ ೫೦ರಿಂದ ೫೫ ದಿನಗಳ ನಂತರ ಗಿಡದ ಮೇಲಿನ ಭಾಗದ ೫ ರಿಂದ ೬ ಸೆಮೀ ಕುಡಿಯನ್ನು ಕೈಯಿಂದ ಅಥವಾ ಯಂತ್ರದ ಸಹಾಯದಿಂದ ಚಿವುಟಿ ಬೀಳಿಸಬೇಕು. ಈ ಕ್ರಮದಿಂದ ಗಿಡಗಳು ಅತಿಯಾಗಿ ಎತ್ತರ ಬೆಳೆಯುವುದನ್ನು ತಡೆಯುವ ಜತೆಗೆ ಹೆಚ್ಚು ಕವಲು ಬರುವಂತೆ ಮಾಡುತ್ತದೆ. ಇದರಿಂದ ಹೂವಿನ ಮತ್ತು ಕಾಯಿಗಳ ಸಂಖ್ಯೆ ಹೆಚ್ಚಾಗಿ ಪ್ರತಿಗಿಡಿಗಳಲ್ಲೂ ಇಳುವರಿ ಹೆಚ್ಚುತ್ತದೆ ಎಂದ ಅವರು, ಪಲ್ಸ್ ಮ್ಯಾಜಿಕ್ ಸಿಂಪಡಣೆ ಮಾಡುವಂತೆ ರೈತರಿಗೆ ಸಲಹೆ ನೀಡಿದರು.
ತೊಗರಿ ಬೆಳೆಯ ಸಮಗ್ರ ಬೇಸಾಯ ಕೀಟ ನಿರ್ವಹಣೆ ಮತ್ತು ಇತರ ನೂತನ ತಂತ್ರಗಳ ಕುರಿತು ಸಂಪೂರ್ಣ ಮಾಹಿತಿ ರೈತರಿಗೆ ನೀಡಿದರು.ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ ಅಪರೇಟಿವ್ ಸಂಸ್ಥೆಯ ಪ್ರತಿನಿಧಿ ರಾಘವೇಂದ್ರ ಮಾಹಿತಿ ನೀಡಿ ತೊಗರಿ ಬೆಳೆಗೆ ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ ಮತ್ತು ಸೂಕ್ಷ್ಮ ಪೋಷಕಾಂಶಗಳ ಬಳಕೆ ಕುರಿತು ವಿವರಿಸಿದರು.
ಈ ವೇಳೆ ಕಾರಟಗಿ ಹೋಬಳಿಯ ನಾಗರಾಜ ರ‍್ಯಾವಳದ, ಆತ್ಮಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ದೀಪಾ, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ, ಇಪ್ಕೋ ಸಂಸ್ಥೆಯ ಅಧಿಕಾರಿಗಳು, ರೈತರು ಇದ್ದರು.