ಜಲ ಜೀವನ್‌ ಮಿಷನ್‌ ಯೋಜನೆಗೆ ಶೋಷಿತರ ಅನುದಾನ ಬಳಕೆ

KannadaprabhaNewsNetwork | Published : Dec 13, 2023 1:00 AM

ಸಾರಾಂಶ

ಎಸ್‌ಸಿ,ಎಸ್‌ಟಿಗಳಿಗೂ ಕುಡಿಯುವ ನೀರು ಪೂರೈಸ್ತೇವೆ ಎಂದು ಸರ್ಕಾರ ಶೋಷಿತರ ಸಮಗ್ರ ಅಭಿವೃದ್ಧಿಗಾಗಿ ಮೀಸಲಿಡಲಾಗಬೇಕಾದ ಅನುದಾನವನ್ನು ರಾಜ್ಯದ ಗ್ರಾಮೀಣ ಜನವಸತಿಗಳಲ್ಲಿ ಅನುಷ್ಠಾನಗೊಳಿಸಲಾಗುವ ನೀರಿನ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಬಳಕೆ ಮಾಡುವ ಮೂಲಕ ಶೋಷಿತರಿಗಾಗಿಯೇ ಮೀಸಲಿಡಬೇಕಾದ ಅನುದಾನವನ್ನು ಬಳಕೆ ಮಾಡುವ ಮೂಲಕ ಮೂಲಭೂತ ಹಕ್ಕಿಗೆ ಕತ್ತರಿ ಪ್ರಯೋಗಿಸಿದ್ದು ಬೆಳಕಿಗೆ ಬಂದಿದೆ.

ಯೋಜನೆಗಾಗಿ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಉಪಯೋಗ

ಶಾಸಕ ಅರಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಉತ್ತರದಲ್ಲಿ ಸ್ಪಷ್ಟಕನ್ನಡಪ್ರಭ ವಾರ್ತೆ ಬೀದರ್‌

ಎಸ್‌ಸಿ,ಎಸ್‌ಟಿಗಳಿಗೂ ಕುಡಿಯುವ ನೀರು ಪೂರೈಸ್ತೇವೆ ಎಂದು ಸರ್ಕಾರ ಶೋಷಿತರ ಸಮಗ್ರ ಅಭಿವೃದ್ಧಿಗಾಗಿ ಮೀಸಲಿಡಲಾಗಬೇಕಾದ ಅನುದಾನವನ್ನು ರಾಜ್ಯದ ಗ್ರಾಮೀಣ ಜನವಸತಿಗಳಲ್ಲಿ ಅನುಷ್ಠಾನಗೊಳಿಸಲಾಗುವ ನೀರಿನ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಬಳಕೆ ಮಾಡುವ ಮೂಲಕ ಶೋಷಿತರಿಗಾಗಿಯೇ ಮೀಸಲಿಡಬೇಕಾದ ಅನುದಾನವನ್ನು ಬಳಕೆ ಮಾಡುವ ಮೂಲಕ ಮೂಲಭೂತ ಹಕ್ಕಿಗೆ ಕತ್ತರಿ ಪ್ರಯೋಗಿಸಿದ್ದು ಬೆಳಕಿಗೆ ಬಂದಿದೆ.ಈ ಕುರಿತಂತೆ ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅವರು ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಲಿಖಿತ ಉತ್ತರ ನೀಡಿರುವದರಲ್ಲಿ ಬೆಳಕಿಗೆ ಬಂದಿದೆ.ಜಲಜೀವನ್‌ ಮಿಷನ್‌ ಯೋಜನೆಯಡಿ ಎಸ್‌ಸಿಪಿ ಹಾಗೂ ಟಿಎಸ್‌ಪಿ ಅನುದಾನವನ್ನು ಗ್ರಾಮೀಣ ಜನವಸತಿಗಳಲ್ಲಿ ಅನುಷ್ಠಾನ ಗೊಳಿಸಲಾಗುತ್ತಿರುವ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗಳಲ್ಲಿ ಎಸ್‌ಸಿ ಹಾಗೂ ಎಸ್‌ಟಿ ಮನೆಗಳಿಗೆ ಸಹ ನಳ ಸಂಪರ್ಕ ಒದಗಿಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯದ ಪಾಲಿನ ಅನುದಾನದಲ್ಲಿ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಸಹ ಉಪಯೋಗಿಸಲಾಗುತ್ತಿದೆ ಎಂದು ತಿಳಿಸಿದ್ದು ಸರ್ಕಾರದ ಸಾಮಾನ್ಯ ನಿಯಮಿತ ಯೋಜನೆಗಳಿಗೆ ಶೋಷಿತರ ಸಮುದಾಯದ ಅಭಿವೃದ್ಧಿಗಾಗಿ ಸಾಂವಿಧಾನಿಕವಾಗಿ ಮೀಸಲಿಟ್ಟಿರುವ ಅನುದಾನವನ್ನು ಬಳಕೆ ಮಾಡಿಕೊಳ್ಳುತ್ತಿರುವದನ್ನು ಸರ್ಕಾರ ಒಪ್ಪಿಕೊಂಡಂತಾಗಿದೆ.

ಪ್ರಸ್ತುತ ಯೋಜನೆಯ ಗ್ರಾಮದೊಳಗಿನ ಕಾರ್ಯಾತ್ಮಕ ನಳ ಸಂಪರ್ಕ ನೀಡುವ ಕಾಮಗಾರಿಗಳಿಗೆ ಶೇ. 45ರಷ್ಟು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಶೇ. 45ರಷ್ಟು ಮತ್ತು ಗ್ರಾಮ ಪಂಚಾಯತಿಯ ಶೇ. 10ರಷ್ಟು ಪಾಲುದಾರಿಕೆ ಇದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆಯನ್ನು ಭರಿಸಲು ಎಸ್‌ಸಿಪಿ ಟಿಎಸ್‌ಪಿ ಅನುದಾನವನ್ನು ಕಾಮಗಾರಿಗಳಿಗಾಗಿ ಎಸ್‌ಸಿ, ಎಸ್‌ಟಿ ಜನಸಂಖ್ಯೆಗೆ ಅನುಗುಣವಾಗಿ ಉಪಯೋಗ ಮಾಡಲಾಗುತ್ತಿದೆ ಎಂದು ತಿಳಿಸಿರುವ ಸರ್ಕಾರ ಎಸ್‌ಸಿಟಿ, ಟಿಎಸ್‌ಪಿ ಮಾನದಂಡವನ್ನೇ ಬದಿಗೊತ್ತಿದಂತಿದೆ. ಇನ್ನು ರಾಜ್ಯದ 31 ಜಿಲ್ಲೆಗಳ ಪೈಕಿ 28,383 ಗ್ರಾಮಗಳ ಪೈಕಿ ಕೇವಲ 2,593 ಗ್ರಾಮಗಳಲ್ಲಿ ಪೂರ್ಣಗೊಂಡಿದ್ದು ಇನ್ನೂ 25,740 ಗ್ರಾಮಗಳಲ್ಲಿ ಜಲಜೀವನ್‌ ಮಿಷನ್‌ ಯೋಜನೆ ಬಾಕಿ ಉಳಿದಿದೆ ಎಂದು ಸಚಿವರು ಮಾಹಿತಿ ನೀಡಿರುವದು, ಯೋಜನೆ ಕುಂಟುತ್ತ ಸಾಗಿರುವದಲ್ಲದೆ ಶೋಷಿತ ಸಮುದಾಯದ ಏಳ್ಗೆಗಾಗಿ ಸಾಂವಿಧಾನಾತ್ಮ ಕವಾಗಿ ಮೀಸಲಿಟ್ಟಿರುವ ಅನುದಾನ ಮೂಲೆಗುಂಪಾಗುತ್ತಿರುವ ಯೋಜನೆಗೆ ಚೆಲ್ಲಿದಂತಾಗುವ ಆತಂಕವನ್ನು ಮುಂದಿಟ್ಟಿದೆ.

----

Share this article