ಉ.ಕ. ಸಾಹಿತಿ, ಕಲಾವಿದರ ಗುರ್ತಿಸುವ ಕಾರ್ಯ ಆಗಲಿ: ಬಸವರಾಜ ಹೊರಟ್ಟಿ

KannadaprabhaNewsNetwork |  
Published : Feb 24, 2025, 12:31 AM IST
ಫೋಟೊ23ಬಿಕೆಟಿ6-ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಸಾಹಿತಿಗಳನ್ನು, ಕಲಾವಿದರನ್ನು ಗುರುತಿಸುವ ಕಾರ್ಯ ಸರ್ಕಾರದ ಮಟ್ಟದಲ್ಲಿ ನಡೆಯುವ ಅವಶ್ಯಕತೆ ಇದೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಉತ್ತರ ಕರ್ನಾಟಕದ ಸಾಹಿತಿಗಳನ್ನು, ಕಲಾವಿದರನ್ನು ಗುರುತಿಸುವ ಕಾರ್ಯ ಸರ್ಕಾರದ ಮಟ್ಟದಲ್ಲಿ ನಡೆಯುವ ಅವಶ್ಯಕತೆ ಇದೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಜಿಲ್ಲೆಯ ಮುಧೋಳದಲ್ಲಿ ನಡೆಯುತ್ತಿರುವ ರನ್ನ ವೈಭವದ 2ನೇ ದಿನದ ಕಾರ್ಯಕ್ರಮವನ್ನು ರನ್ನ ಕ್ರೀಡಾಂಗಣದಲ್ಲಿನ ಚಾವುಂಡರಾಯ ಮುಖ್ಯ ವೇದಿಕೆಯಲ್ಲಿ ಭಾನುವಾರ ರಾತ್ರಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಲೆ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಉತ್ತರ ಕರ್ನಾಟಕದ ಸಾಧಕರನ್ನು ಗುರುತಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಕೇವಲ ಬೆಂಗಳೂರು ಸೀಮಿತವಾಗಿ ಕಲಾವಿದರ, ಸಾಹಿತಿಗಳ, ಚಿಂತಕರನ್ನು ಗುರುತಿಸುವ ಕೆಲಸವಾದರೆ ಈ ಭಾಗಕ್ಕೆ ಅನ್ಯಾಯವಾದೀತು ಎಂದು ಆತಂಕವ್ಯಕ್ತಪಡಿಸಿ, ವೇದಿಕೆಯಲ್ಲಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರಿಗೆ ಈ ಕುರಿತು ಕ್ರಮಕ್ಕೆ ಸಲಹೆ ನೀಡಿದರು.

ರನ್ನನ ಸಾಹಿತ್ಯ ಮತ್ತಷ್ಟು ಶ್ರೀಮಂತಗೊಳ್ಳಬೇಕಿದೆ. ಉತ್ತರ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕಿದೆ. ಇದು ಸರ್ಕಾರದಿಂದಲೂ ಸಹ ಆಗಬೇಕಿದೆ ಎಂದು ಹೇಳಿದ ಬಸವರಾಜ ಹೊರಟ್ಟಿ, ಬರುವ ಅಧಿವೇಶನದಲ್ಲಿ ಈ ಭಾಗದ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹಾಗೂ ಉಮಾಶ್ರೀ ಅವರು ಪ್ರಸ್ತಾಪಿಸಿದರೆ ಸದನದಲ್ಲಿ ಹೆಚ್ಚಿನ ಅವಕಾಶ ನೀಡುವ ಭರವಸೆ ನೀಡಿದರು. ರನ್ನನ ನಾಡಿನಲ್ಲಿ ನಾವು ಜನಿಸಿರುವುದೇ ಬಹುದೊಡ್ಡ ಪುಣ್ಯ. ಈ ಭಾಗದ ರನ್ನನಂತಹ ಬಹುದೊಡ್ಡ ಕವಿಯನ್ನು ಮತ್ತಷ್ಟು ಪರಿಚಯಿಸುವ ಕೆಲಸ ಆಗಲಿ. ಆ ನಿಟ್ಟಿನಲ್ಲಿ ಮುಧೋಳದಲ್ಲಿ ನಡೆದಿರುವ ರನ್ನ ವೈಭವದ ಮೂಲಕ ಮತ್ತಷ್ಟು ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಮಾತನಾಡಿ, ಕವಿಗಳು, ಸಾಹಿತಿಗಳು, ಮಹಾಪುರುಷರನ್ನು ಜಾತಿಗೆ ಸಿಮಿತಗೊಳಿಸುವ ಪ್ರಯತ್ನ ಆಗಬಾರದು. ಮಹಾಪುರುಷರನ್ನು ಜಾತಿಗೆ ಸೀಮಿತಗೊಳಿಸಿದರೆ ಅದು ಅವರ ಸಾಧನೆಗೆ ಮಾಡಿದ ಅಪಮಾನವಾಗುತ್ತದೆ ಎಂದರು.

ಉತ್ಸವ ನಡೆಸಿವುದೆಂದರೆ ನಮ್ಮ ಪರಂಪರೆ ಮುಂದುವರಿಸುವ ಆ ಮೂಲಕ ಸಾಧಕರನ್ನು ಪರಿಚಯಿಸಿ ಯುವ ಪೀಳಿಗೆಗೆ ಸಾಧನೆ ಅರ್ಥ ಮಾಡಿಸುವ ಪ್ರಯತ್ನವಾಗಿದೆ. ಕನ್ನಡ ಸಾಹಿತ್ಯ ಪರಿಚಯಿಸಿದ ರನ್ನನ ಸಾಹಿತ್ಯವನ್ನು ನಾಡಿಗೆ ಪರಿಚಯಿಸುವ ರನ್ನ ವೈಭವ ಕಾರ್ಯಕ್ರಮ ನಿಜಕ್ಕೂ ಸಾರ್ಥಕವಾಗಿದೆ. ಸಂಸ್ಕಾರ ಮತ್ತು ಸಂಸ್ಕೃತಿ ನಮ್ಮ ಜೀವನದ ಭಾಗವಾಗಿದೆ. ಹೀಗಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾಹಿತ್ಯ ಸಂಸ್ಕೃತಿ ಉಳಿಸಲು ಸಾಕಷ್ಟು ನೆರವು ನೀಡುತ್ತಿದ್ದು, ವಿವಿಧ ಅಕಾಡೆಮಿಗಳ ಮೂಲಕ ಈ ಕಾರ್ಯ ಮುಂದುವರಿದಿದೆ ಎಂದು ಹೇಳಿದರು.

ಸಕ್ಕರೆ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಬಹುದಿನಗಳಿಂದ ನಿಂತಿದ್ದ ರನ್ನ ವೈಭವ ಮತ್ತೆ ಆರಂಭವಾಗಲು ಶ್ರಮಿಸಿದ ಸಚಿವ ತಿಮ್ಮಾಪೂರ ಅವರನ್ನು ಅಭಿನಂದಿಸಿದರಲ್ಲದೆ, ರನ್ನನ್ನು ದೇಶಕ್ಕೆ ಪರಿಚಯಿಸುವ ಕಾರ್ಯ ಈ ಮೂಲಕ ನಡೆಯಲಿ ಎಂದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಸ್ವಾಗತಿಸಿದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ರನ್ನ ಬೆಳಗಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೂಪಾ ಸದಾಶಿವ ಹೊಸಟ್ಟಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ನಗರಸಭೆಯ ಅಧ್ಯಕ್ಷೆ ಸುನಂದ ತೇಲಿ ಇದ್ದರು.

ನಾವೆಲ್ಲಾ ಚಿಕ್ಕಂದಿನಲ್ಲಿ ಚಾಲುಕ್ಯ ಉತ್ಸವ ನೋಡಿ ಬೆಳೆದವರು. ರನ್ನ ವೈಭವ ನೋಡಿ ನಿಜಕ್ಕೂ ಸಂತೋಷವಾಗಿದೆ. ನಾನು ಇಲಾಖೆಯಿಂದ ನೀಡಿದ ₹2 ಕೋಟಿ ಅನುದಾನ ಸದ್ಬಳಕೆಯಾಗಿದೆ. ಬರುವ ದಿನಗಳಲ್ಲಿ ರನ್ನ ವೈಭವ ಕಾರ್ಯಕ್ರಮಕ್ಕೆ ಮತ್ತಷ್ಟು ಅನುದಾನ ನೀಡುತ್ತೇನೆ.

ಶಿವರಾಜ ತಂಗಡಗಿ ಸಚಿವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ