ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ ಒಬ್ಬ ಪುಟಗೋಸಿ: ಸಚಿವ ಶಿವರಾಜ ತಂಗಡಗಿ ತಿರುಗೇಟು

KannadaprabhaNewsNetwork |  
Published : Jan 15, 2024, 01:51 AM ISTUpdated : Jan 15, 2024, 05:08 PM IST
ಸಚಿವ ಶಿವರಾಜ್ ತಂಗಡಗಿ | Kannada Prabha

ಸಾರಾಂಶ

ಸಿದ್ದರಾಮಯ್ಯ, ಪ್ರಧಾನಿ ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡಿದ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮೋದಿ ಅವರಿಗೆ ಬಾಯಿ ತಪ್ಪಿ ಏಕವಚನದಲ್ಲಿ ಮಾತನಾಡಿರಬಹುದು. ಆದರೆ, ಇಂಥ ಕೆಟ್ಟ ಭಾಷೆ ಬಳಸಿ ಮಾತನಾಡಿಲ್ಲ.

ಕಾರಟಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಸಂಸದ ಅನಂತಕುಮಾರ ಹೆಗಡೆ ಒಬ್ಬ ಪುಟಗೋಸಿ. ಸಿದ್ದರಾಮಯ್ಯ ಅವರಿಗೆ ಸಮನಲ್ಲ. ‘ಕಾಂಗ್ರೆಸ್ ಬಗ್ಗೆ ಮಾತನಾಡುವ ನಿಮ್ಮಂಥ ನಾಯಿಗಳಿಗೆ ನಾನು ಅಲ್ಲಿಗೆ ಬಂದು ಉತ್ತರ ಕೊಡಬೇಕಾಗುತ್ತದೆ ಮಗನೇ " ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಕಾರವಾಗಿ ತಿರುಗೇಟು ನೀಡಿದ್ದಾರೆ.

ಭಾನುವಾರ ಇಲ್ಲಿನ ಅವರ ಗೃಹ ಕಚೇರಿಯಲ್ಲಿ ಮಾತನಾಡಿದ ಸಚಿವರು, ಸಂಸದ ಅನಂತಕುಮಾರ ಹೆಗಡೆ ಹೇಳಿಕೆಗೆ ಏಕವಚನದಲ್ಲಿಯೇ ಪ್ರತಿಕ್ರಿಯಿಸಿದರು.

ಅನಂತಕುಮಾರ ಅವರಿಗೆ, ಅವನದೇ ಭಾಷೆಯಲ್ಲಿ ಉತ್ತರ ಕೊಡಲು ನನಗೂ ಬರುತ್ತೆ. ಆದರೆ, ನನಗೆ ನನ್ನ ಹಿರಿಯರು ಸಂಸ್ಕಾರ ಕಲಿಸಿದ್ದಾರೆ. ಅದಕ್ಕಾಗಿ ಅವನಿಗೆ ಕೆಟ್ಟ ಭಾಷೆಯಲ್ಲಿ ಉತ್ತರ ಕೊಡುತ್ತಿಲ್ಲ. 

ಬದಲಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಇದೇ ಮೊದಲು ಮತ್ತು ಕೊನೆ, ಸಿದ್ದರಾಮಯ್ಯ ಬಗ್ಗೆ ಅವನು ಮಾತನಾಡಬಾರದು. ಸಿದ್ದರಾಮಯ್ಯ ಅವರಿಗೆ ಆಗಿರುವ ಅನುಭವದಷ್ಟು ಅವನಿಗೆ ವಯಸ್ಸಾಗಿಲ್ಲ. 

ಅವರ ಕಾಲಿನ ಧೂಳಿಗೂ ಹೆಗಡೆ ಸಮನಲ್ಲ. ನಾನು ಕೂಡ ಹೀಗೆ ಮಾತನಾಡಬಾರದು. ಆದರೆ, ಅವನಾಡಿದ ಮಾತಿನಿಂದ ನೋವಾಗಿ ಹೀಗೆ ಹೇಳಿದ್ದೇನೆ ಎಂದರು.

ನಮ್ಮದು ಗಂಡು ಮೆಟ್ಟಿದ ನಾಡು. ಇಂಥ ನಾಯಿಗಳಿಗೆ ನಾವು ಬುದ್ಧಿ ಕಲಿಸುತ್ತೇವೆ. ಮತ್ತೊಮ್ಮೆ ಅನಂತಕುಮಾರ ಮಾತು ಮುಂದುವರಿಸಿದರೆ, ನಾನು ಮುಂದೆ ಉತ್ತರ ಕರ್ನಾಟಕದ ಭಾಷೆಯಲ್ಲಿಯೇ ಕಾರ ಹತ್ತುವಂಗೆ ಉತ್ತರ ಕೊಡಬೇಕಾಗುತ್ತೆ. ಇವನಿಗಿಂತ ನಮಗೂ ಕೆಟ್ಟ ಭಾಷೆಯಲ್ಲಿ ಉತ್ತರ ಕೊಡುವುದಕ್ಕೆ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.

ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ, ೧೪ ಬಾರಿ ದಾಖಲೆಯ ಬಜೆಟ್ ಮಂಡನೆ ಮಾಡಿರುವ ದೇಶದ ಕೆಲವೇ ಕೆಲವು ಹಿಂದುಳಿದ ಅಗ್ರಗಣ್ಯ ನಾಯಕರಲ್ಲಿ ಸಿದ್ದರಾಮಯ್ಯ ಒಬ್ಬರು. 

ಜತೆಗೆ ಅವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಬಡಜನರ, ದೀನ-ದಲಿತರ ಮತ್ತು ಅಲ್ಪಸಂಖ್ಯಾತರಿಗೆ ಅನೇಕ ಯೋಜನೆಗಳನ್ನು ಜಾರಿ ತಂದು ಜನಾನುರಾಗಿಯಾಗಿರುವ ವ್ಯಕ್ತಿ. ಸಿದ್ದರಾಮಯ್ಯ ಎಲ್ಲಿ, ಈ ಪುಟಗೋಸಿ ಅನಂತಕುಮಾರ ಹೆಗಡೆ ಎಲ್ಲಿ? ಎಂದರು.

ಸಿದ್ದರಾಮಯ್ಯ, ಪ್ರಧಾನಿ ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡಿದ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮೋದಿ ಅವರಿಗೆ ಬಾಯಿ ತಪ್ಪಿ ಏಕವಚನದಲ್ಲಿ ಮಾತನಾಡಿರಬಹುದು. 

ಆದರೆ, ಇಂಥ ಕೆಟ್ಟ ಭಾಷೆ ಬಳಸಿ ಮಾತನಾಡಿಲ್ಲ. ಸಿದ್ದರಾಮಯ್ಯ ಇಡೀ ದೇಶದಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರಿಗೆ ಅನಂತಕುಮಾರ ಪುಟಗೋಸಿಗೆ ಸಮ. ಒಬ್ಬ ಸಂಸ್ಕಾರ, ಸಂಸ್ಕೃತಿ ಇರುವ ವ್ಯಕ್ತಿಯಾಗಿ ಯಾರೊಬ್ಬರೂ ಮಾತನಾಡದ ಭಾಷೆಯಲ್ಲಿ ಮಾತನಾಡಲು ಆಗುವುದಿಲ್ಲ. 

ಇದೇ ಕೊನೆ ಅವಕಾಶ, ನೀವೇನಾದರೂ ಮುಖ್ಯಮಂತ್ರಿ ಬಗ್ಗೆ ಹಗುರವಾಗಿ ಮಾತನಾಡಿದರೆ ಹುಷಾರ್! ನಾಲಿಗೆ ಬಿಗಿ ಹಿಡಿದು ಮಾತಾಡಿ ಎಂದು ಸಚಿವ ಶಿವರಾಜ್ ತಂಗಡಗಿ ಎಚ್ಚರಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ