ಕೃಷ್ಣಾ ನದಿ ಪಾತ್ರದಲ್ಲಿ ನೀರೆ ಇಲ್ಲ: ಪುಣ್ಯ ಸ್ನಾನಕ್ಕೆ ಭಕ್ತರ ಪರದಾಟ

KannadaprabhaNewsNetwork | Updated : Jan 15 2024, 05:15 PM IST

ಸಾರಾಂಶ

ಮರಳು ಗಣಿಕಾರಿಕೆ, ಮಳೆ ಕೊರತೆ ಪರಿಣಾಮ ಉಲ್ಬಣಗೊಂಡ ನೀರಿನ ಸಮಸ್ಯೆ. ಸಂಕ್ರಾಂತಿ ಹಬ್ಬದ ಹಿನ್ನೆಲೆ ನದಿಯಲ್ಲಿ ನೀರಿಲ್ಲದ ಕಾರಣ ಸ್ನಾನಕ್ಕೆ ಭಕ್ತರು ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ದೇವದುರ್ಗ

ಮಕರ ಸಂಕ್ರಮಣ ಪುಣ್ಯ ಪರ್ವ ಕಾಲದಲ್ಲಿ ನದಿ ಸ್ನಾನ ಮಾಡುವುದು ಈ ಪ್ರದೇಶದಲ್ಲಿ ಸಂಪ್ರದಾಯ. ಗ್ರಾಮೀಣ, ಪಟ್ಟಣ ಸೇರಿದಂತೆ ಅನೇಕರು ನದಿ ದಂಡೆಯಲ್ಲಿರುವ ದೇವಸ್ಥಾನಗಳಿಗೆ ಹೋಗಿ ನದಿಯಲ್ಲಿ ಸ್ನಾನ ಮಾಡಿ ವಿಶೇಷ ಪೂಜೆ ಮಾಡಿ ಸಂಕ್ರಮಣ ಹಬ್ಬ ಆಚರಣೆ ಮಾಡಲಾಗುತ್ತದೆ.

ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯ ನದಿ ತೀರದಲ್ಲಿ ಭಕ್ತರು ಈ ಬಾರಿ ಮಲೀನ ನೀರಿನ ಪುಣ್ಯ ಸ್ನಾನ ಸಾಮಾನ್ಯ ಎಂಬ ಪರಿಸ್ಥಿತಿಗೆ ತಲುಪಿದೆ.

ಮುಂಗಾರು ಮತ್ತು ಹಿಂಗಾರು ಮಳೆ ಕೂಡ ಅತಿ ಕಡಿಮೆ ಪ್ರಮಾಣವಾಗಿದ್ದು, ಆಲಮಟ್ಟಿ ಮತ್ತು ಬಸವ ಸಾಗರ ಜಲಾಶಯದಲ್ಲಿಯೂ ನೀರಿನ ಅಭಾವ ಇದೆ. ಇತ್ತೀಚೆಗೆ ರೈತರ ಒತ್ತಾಯದ ಮೇರೆಗೆ ನಾರಾಯಣಪೂರ ಬಲದಂಡೆ ಮತ್ತು ಎಡದಂಡೆ ಕಾಲುವೆಗಳ ವ್ಯಾಪ್ತಿಯಲ್ಲಿ ಮೆಣಸಿನಕಾಯಿ ಬೆಳೆಗಳಿಗಾಗಿ ಜಲಾಶಯದಿಂದ ನೀರು ಹರಿಸಲಾಗುತ್ತಿದೆ.

ನೀರಿನ ಕೊರತೆ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿಯೂ ಕೂಡ ಗಣನೀಯ ಕಡಿಮೆ ಪ್ರಮಾಣದ ನೀರು ಹರಿಯಲಾಗುತ್ತಿದೆ. ನದಿ ನೀರಿನ ಹರಿವು ಕೂಡ ಬದಲಾವಣೆಗೊಂಡಿದ್ದು ನೀರಿಗಾಗಿ ನದಿ ಮಧ್ಯಭಾಗದಲ್ಲಿ ಇಲ್ಲವೇ ದಂಡೆಯ ತಿರುವುಗಳಲ್ಲಿ ನೀರು ನಿಂತು ಹರಿಯದೇ ಇರುವದರಿಂದ ನೀರು ಮಲೀನಗೊಂಡಿದ್ದು ಪುಣ್ಯಸ್ನಾನ ಹಾಗೂ ಕುಡಿಯಲು ಕೃಷ್ಣಾ ನದಿ ನೀರು ನಿಶ್ಪ್ರಯೋಜಕವಾಗಿದೆ.

ದೇವದುರ್ಗ ತಾಲೂಕಿನ ಪವಿತ್ರ ಕ್ಷೇತ್ರಗಳಾದ ತಿಂಥಣಿ ಎಡ ಮತ್ತು ಬಲಭಾಗದಲ್ಲಿರುವ ಮೌನೇಶ್ವರ, ಅಣೆ ಮಲ್ಲೇಶ್ವರ, ಕೇಶವಶೃಂಗಿ, ಕೊಪ್ಪರ ಶ್ರೀ ಲಕ್ಷ್ಮೀ ನರಸಿಂಹ, ಅಲ್ಲಮಪ್ರಭು ದೇವಸ್ಥಾನಗಳಲ್ಲಿ ಇಂದು ಮತ್ತು ನಾಳೆ ಜನಜಂಗುಳಿ ಸಾಮಾನ್ಯವಾಗಿರುತ್ತದೆ.

ಪಕ್ಕದ ತಾಲೂಕುಗಳಾದ ಸಿರವಾರ, ಮಾನ್ವಿ, ರಾಯಚೂರು ಮತ್ತು ಲಿಂಗಸಗೂರು ಹಾಗೂ ಯಾದಗಿರಿ, ಸುರಪುರ, ವಡಿಗೇರಾ, ಶಹಪುರ ತಾಲೂಕುಗಳಿಂದ ಭಕ್ತರು ಕೃಷ್ಣಾನದಿಯಲ್ಲಿ ಸ್ನಾನ ಮಾಡಿ ದೇವರ ದರುಶನ ಮಾಡಿಕೊಂಡು ಸಹಭೋಜನ ಮಾಡುವ ಪದ್ಧತಿ ಈ ಭಾಗದಲ್ಲಿದೆ. 

ಆದರೆ ಈ ಬಾರಿ ಮಕರ ಸಂಕ್ರಮಣದ ಪುಣ್ಯಸ್ನಾನಕ್ಕಾಗಿ ಬರುವವವರು ಆಡಳಿತ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.ಅಕ್ರಮ ಮರಳು ದಂಧೆ: ಮಳೆ ಕೊರತೆಯಿಂದ ನದಿ ಪಾತ್ರದಲ್ಲಿ ನೀರಿನ ಕೊರತೆ ಸಮಸ್ಯೆ ಒಂದು ಕಡೆಯಾದರೆ ಅಕ್ರಮ ಮರಳು ದಂದೆ ಇಡೀ ನದಿ ಪಾತ್ರದಲ್ಲಿ ಮರಳಿಗಾಗಿ ಮನಬಂದಂತೆ ಅಗೆದಿರುವ ಪರಿಣಾಮ ನೀರಿನ ಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ನದಿ ಮೂಲದಿಂದ ನೀರಾವರಿ ಮಾಡಿಕೊಂಡಿರುವ ರೈತರು ಜಮೀನುಗಳಿಗೆ ನೀರು ಪಡೆಯಲು ಹರಸಾಹಸ ಮಾಡುತ್ತಿದ್ದಾರೆ.

ಕೂಡಲೇ ರಾಯಚೂರು ಮತ್ತು ಯಾದಗಿರಿ ಜಿಲ್ಲಾಡಳಿತ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಮತ್ತು ನದಿ ಪಾತ್ರದ ಗ್ರಾಮಗಳಲ್ಲಿ ಕುಡಿವ ನೀರಿನ ಸೌಲಭ್ಯ ಒದಗಿಸುವ ಕುರಿತು ಮುಂಜಾಗ್ರತಾ ಕ್ರಮಗೈಗೊಳ್ಳಬೇಕೆಂಬ ಕೂಗು ಕೇಳಿಬರುತ್ತಿದೆ.

Share this article