ಮೌಢ್ಯದ ಆಚರಣೆಗಳಿಂದ ದೂರ ಇರಿ: ನಿರಂಜನಾನಂದಪುರಿ ಸ್ವಾಮಿಗಳು

KannadaprabhaNewsNetwork |  
Published : Jan 15, 2024, 01:50 AM ISTUpdated : Jan 15, 2024, 05:19 PM IST
ಕಂಪ್ಲಿಯಲ್ಲಿ ನಡೆದ ಶ್ರೀಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ಗೌರವಿಸಲಾಯಿತು.  | Kannada Prabha

ಸಾರಾಂಶ

ಕುರುಬ ಸಮಾಜದ ಪ್ರಗತಿಗಾಗಿ ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಹಾಗೂ ಅಭಿರುಚಿಗೆ ತಕ್ಕಂತೆ ಉದ್ಯೋಗ ಕಲ್ಪಿಸಿ ದುಡಿಮೆಗೆ ಕಳುಹಿಸಿ

ಕಂಪ್ಲಿ: ದೇವರಿಗೆ ಬೇಕಿರುವುದು ನಿಷ್ಕಲ್ಮಶ ಮನಸ್ಸಿನ ಭಕ್ತಿಯೇ ಹೊರತು ಆಡಂಬರದ ಆಚರಣೆಗಳಲ್ಲ. ಹೀಗಾಗಿ ಪ್ರತಿಯೊಬ್ಬರೂ ಮೌಢ್ಯದ ಆಚರಣೆಗಳಿಂದ ದೂರ ಉಳಿಯಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮಿಗಳು ತಿಳಿಸಿದರು.

ಪಟ್ಟಣದ ಕಮ್ಮವಾರಿ ಭವನದಲ್ಲಿ ಕಂಪ್ಲಿ ತಾಲೂಕು ಸಮಸ್ತ ಹಾಲುಮತ ಸಮಾಜದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ಜಯಂತಿ, ಹಬ್ಬ ಹರಿದಿನ ಆಚರಣೆಗಳು ಇನ್ನೊಂದು ಸಮುದಾಯವನ್ನು ನೋಯಿಸುವಂತೆ ಅಥವಾ ಕೆಣಕುವಂತಿರಬಾರದು. ಬದಲಾಗಿ ಜಾತಿ- ಜಾತಿಗಳ ಮಧ್ಯೆ ಕೊಂಡಿ ಬೆಸೆಯುವಂತಹ ಭಾವೈಕ್ಯದ ಆಚರಣೆಗಳಾಗಿರಬೇಕು ಎಂದರು.

ಸಮುದಾಯದ ಮಹಾನ್ ನಾಯಕರ ಪ್ರತಿಮೆಗಳ ಪ್ರತಿಷ್ಠಾಪನೆಯ ವಿಚಾರದಲ್ಲಿ ಅನೇಕ ಕೋಮುಗಲಭೆಗಳು ಜರುಗುತ್ತಿವೆ. ಇದರಿಂದ ಅನೇಕ ಯುವ ಜನತೆಯ ಭವಿಷ್ಯ ಹಾಳಾಗುತ್ತಿದೆ. ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಡದೆ ಅನುಮತಿ ಇದ್ದಲ್ಲಿ ಮೂರ್ತಿ ಪ್ರತಿಷ್ಠಾಪನೆಗಳಂತಹ ಕಾರ್ಯಕ್ಕೆ ಮುಂದಾಗಿ. ಇಲ್ಲದಿದ್ದಲ್ಲಿ ಕೈಲಾದಷ್ಟು ಹಣ ಸಂಗ್ರಹಿಸಿ ಸರ್ಕಾರಿ ಶಾಲೆಗಳಲ್ಲಿನ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿ ಎಂದರು.

ಕುರುಬ ಸಮಾಜದವರು ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಹಿಂದುಳಿದಿದ್ದು, ಸಮಾಜದ ಪ್ರಗತಿಗಾಗಿ ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಹಾಗೂ ಅಭಿರುಚಿಗೆ ತಕ್ಕಂತೆ ಉದ್ಯೋಗ ಕಲ್ಪಿಸಿ ದುಡಿಮೆಗೆ ಕಳುಹಿಸಿ ಎಂದರು.

ಇನ್ನು ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸುವ ವಿಚಾರ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಹೋಗಿದ್ದು, ಆದಷ್ಟು ಬೇಗ ಕೇಂದ್ರ ಸರ್ಕಾರವು ನಮ್ಮ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಒದಗಿಸಲು ಮುಂದಾಗಬೇಕು ಎಂದರು.

ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ರವಿ ಬಿ.ಕೆ. ಮಾತನಾಡಿ, ಕುರುಬರೆಂದರೆ ಸ್ವಚ್ಛ ಮನಸ್ಸಿನವರಾಗಿದ್ದಾರೆ. ಕಂಬಳಿಯನ್ನು ಬೀಸಿ ಮಳೆ ತರಿಸುವ ಶಕ್ತಿ ಹಾಲುಮತ ಸಮಾಜಕ್ಕಿದೆ ಎಂದರು.

ಕಾರ್ಯಕ್ರಮದಲ್ಲಿ ನಿರಂಜನಾನಂದಪುರಿ ಸ್ವಾಮಿಗಳ ತುಲಾಭಾರ ಸೇವೆ ಜರುಗಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಗೌರವಿಸಲಾಯಿತು.

ಇದಕ್ಕೂ ಮುನ್ನ ಇಲ್ಲಿನ ಸಂಗಾತ್ರಯ ಸಂಸ್ಕೃತ ಪಾಠಶಾಲೆಯಿಂದ ವಿವಿಧ ಮುಖ್ಯ ರಸ್ತೆಗಳ ಮಾರ್ಗವಾಗಿ ಕಮ್ಮವಾರಿ ಭವನದವರೆಗೆ ಕನಕದಾಸರ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಡೊಳ್ಳು ಕುಣಿತ, ಹಗಲುವೇಷಗಾರರು ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು.

ಶಾಸಕ ಜೆ.ಎನ್. ಗಣೇಶ್, ತಹಸೀಲ್ದಾರ್ ಶಿವರಾಜ್, ಹಾಲುಮತ ಸಮಾಜದ ಮುಖಂಡರಾದ ಕುರಿ ಹುಸೇನಪ್ಪ, ಕಡೆಮನೆ ರಾಮಣ್ಣ, ಹೊಸೂರು ಜಡಪ್ಪ, ಕುರಿ ಮಲ್ಲಪ್ಪ ಸೇರಿದಂತೆ ಇತರರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ