ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಜಲ ಜೀವನ್ ಮಿಷನ್ ಯೋಜನೆ ಮೂಲಕ ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ನಲ್ಲಿ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ನೀಡಲಿದ್ದು, ಇದರ ಸದುಪಯೋಗ ಪಡೆಯಿರಿ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.
ತಾಲೂಕಿನ ಕೋರವಾರ ಗ್ರಾಮದಲ್ಲಿ ಭಾನುವಾರ ಜಿಲ್ಲಾ ಪಂಚಾಯತ್ ವಿಜಯಪುರ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪವಿಭಾಗ ಸಿಂದಗಿ ವತಿಯಿಂದ ₹3.76 ಕೋಟಿ ವೆಚ್ಚದ ಜೆಜೆಎಂ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮಸ್ಥರೆಲ್ಲರೂ ನನ್ನ ಮೇಲೆ ನಿರೀಕ್ಷೆ ಇಟ್ಟು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಿದ್ದೀರಿ, ನಿಮ್ಮ ನಿರೀಕ್ಷೆಗೆ ತಕ್ಕಹಾಗೆ ನಾನು ಕೆಲಸ ಮಾಡಲು ಕಾರ್ಯಪ್ರವೃತ್ತನಾಗಿದ್ದೇನೆ. ಕ್ಷೇತ್ರಕ್ಕೆ ಬೇಕಾದ ಅನುದಾನದ ಬಗ್ಗೆ ಮನವಿ ಮಾಡಿದ್ದೇನೆ. ಬರುವಂತ ದಿನಗಳಲ್ಲಿ ಗ್ರಾಮದ ಜೊತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ನನ್ನ ಕನಸಿನ ಗ್ರಾಮಗಳ ಅಭಿವೃದ್ಧಿಗೆ ಪೂರಕವಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಲ್ಲಿ ಜಲ ಜೀವನ್ ಮಿಷನ್ ಯೋಜನೆಯೂ ಒಂದಾಗಿದೆ. ಗ್ರಾಮೀಣ ಭಾಗದಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆಯಿಂದ ಕಾಯಿಲೆಗಳಿಗೆ, ದೈಹಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದರು.
ಸರ್ಕಾರ ಸಾಕಷ್ಟು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಾಡಿದರು ಸಹ ಇನ್ನು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದನ್ನು ನೋಡಿತ್ತಿದ್ದೇವೆ. ಅದಕ್ಕಾಗಿ ಗ್ರಾಮೀಣ ಭಾಗದ ಪ್ರತಿ ಮನೆಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡುವ ಮೂಲಕ ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ಕೆಲಸ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಚೌಕಿಮಠದ ಶ್ರೀ ಮುರುಘೇಂದ್ರ ಶಿವಾಚಾರ್ಯರು ಮಾತನಾಡಿ, ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಸಿ, ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮದೇ ಆದ ಕನಸನ್ನು ಇಟ್ಟುಕೊಂಡಿದ್ದಾರೆ.
ಮತಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ದೇವರು ಅವರಿಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.ಪ್ರಸ್ತಾವಿಕವಾಗಿ ಜೆಡಿಎಸ್ ತಾಲೂಕ ಘಟಕದ ಅಧ್ಯಕ್ಷರಾದ ಸಾಯಿಬಣ್ಣ ಬಾಗೇವಾಡಿ ಮಾತನಾಡಿ, ಶಾಸಕರು ಮತಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಗ್ರಾಮಸ್ಥರ ಬಹು ನಿರೀಕ್ಷಿತ ಯೋಜನೆಯಿಂದ ಪ್ರತಿ ಮನೆ ಮನೆಗೆ ನಳ ನೀರು ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ ಅದರ ಸದುಪಯೋಗ ಗ್ರಾಮಸ್ಥರು ಪಡೆದುಕೊಳ್ಳಬೇಕು.
ಕಾಮುಗಾರಿಯ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರನ್ನು ಗ್ರಾಮಸ್ಥರಿಂದ ಅದ್ದೂರಿಯಾಗಿ ಸ್ವಾಗತ ಕೋರಿದರು. ಈ ವೇಳೆ ಗ್ರಾಪಂ ಅಧ್ಯಕ್ಷ ರಫೀಕ ಬ್ಯಾಕೋಡ, ಮಾಜಿ ಗ್ರಾಪಂ ಅಧ್ಯಕ್ಷ ರಾಜಶೇಖರ ಛಾಯಾಗೋಳ, ಜೆಡಿಎಸ್ ತಾಲೂಕು ಕಾರ್ಯಧ್ಯಕ್ಷ ಮಡು ಸಾಹುಕಾರ ಬಿರಾದಾರ, ಪ್ರಧಾನ ಕಾರ್ಯದರ್ಶಿ ವೀರೇಶ್ ಕುದುರಿ, ಮುಖಂಡ ಶೇಖರಗೌಡ ಪಾಟೀಲ, ಬಸನಗೌಡ ಬಿರಾದಾರ, ಅಯ್ಯುಬ ತುರಕನಗೇರಿ, ದಯಾನಂದ ಗುತ್ತರಗಿಮಠ, ಶರಣಗೌಡ ನಾಯ್ಕಲ.
ಗುರು ಹುಣಸಗಿ, ಬಾಪುಗೌಡ ಬಿರಾದಾರ, ಸೋಮಯ್ಯ ಮುತ್ಯಾ ಹಿರೇಮಠ, ಸಂತೋಷಗೌಡ ಪೋಲಿಸಪಾಟೀಲ, ರಾಮನಗೌಡ ಬೋರಾವತ, ಶಿವನಗೌಡ ಪಾಟೀಲ, ಶಿವನಗೌಡ ಬಿರಾದಾರ, ಹಣಮಂತ ದೊಡಮನಿ, ಬಿಳಿಯಾನೆಪ್ಪ ಪೂಜಾರಿ, ಮುರ್ತುಜ ಮುಲ್ಲಾ, ಕಲ್ಲನಗೌಡ ಸುಂಕದ,ಗ್ರಾಪಂ ಕಾರ್ಯದರ್ಶಿ ಜಿ.ವ್ಹಿ.ಪಟ್ಟಣಶೆಟ್ಟಿ, ಮಾಜಿ ಜಿಪಂ ಸದಸ್ಯ ಬಿ.ಎಲ್. ನಾಯಕ, ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಕಲಶೆಟ್ಟಿ, ಗುತ್ತಿಗೆದಾರ ಶಂಕರ ರಾಠೋಡ ಸೇರಿದಂತೆ ಗ್ರಾಮದ ಸರ್ವ ಸದಸ್ಯರು, ಪ್ರಮುಖರು, ಗಣ್ಯರು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.