ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಅರಮನೆ ಮೈದಾನದಲ್ಲಿ ಭಾನುವಾರ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ಆಯೋಜಿಸಿದ್ದ ಉತ್ತರ ಕರ್ನಾಟಕ ಉತ್ಸವ ಉದ್ಘಾಟಿಸಿದ ನಂತರ ಮಾತನಾಡಿದರು.
ಬಸವರಾಜ ಬೊಮ್ಮಾಯಿ ಮಾತನಾಡಿ, ಪ್ರತ್ಯೇಕ ಉತ್ತರ ಕರ್ನಾಟಕ ಘೋಷಣೆ ಮಾಡುವುದು ಸುಲಭ. ಆದರೆ, ಘೋಷಣೆಗೆ ತಕ್ಕಂತೆ ವಾಸ್ತವ ಇರದಿದ್ದರೆ ಘೋಷಣೆ ಯಶಸ್ವಿಯಾಗುವುದಿಲ್ಲ, ಬೆಂಗಳೂರು ಸಂಪರ್ಕದಲ್ಲಿರುವವರು ಬೆಳೆದಿದ್ದೀರಿ, ಬೇರೆಯವರೂ ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆಯಬೇಕು, ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡುವಾಗ ಬುದ್ಧಿವಂತಿಕೆಯಿಂದ ಕೂಡಿರಬೇಕು ಎಂದರು.ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣವಾಗಲಿ:
ಕೃಷ್ಣಾ ನದಿ ಹರಿದಾಗಲೂ, ಮಹಾರಾಷ್ಟ್ರದಿಂದ ನೀರು ತಂದು ಹರಿಸುವುದೂ ಲಕ್ಷ್ಮಣ ಸವದಿಗೆ ಗೊತ್ತು. ಬೆಳಗಾವಿ, ಬಾಗಲಕೊಟೆ, ವಿಜಯಪುರ, ಹಾವೇರಿ, ಕೊಪ್ಪಳ, ಕಲಬುರಗಿ, ಬೀದರ್‌ವರೆಗೂ ಸಕ್ಕರೆ ಉದ್ಯಮ ಇದೆ. ಒಂದು ರಾಜ್ಯದ ಆರ್ಥಿಕ ಸ್ಥಿತಿಯನ್ನೇ ಬದಲಿಸುವ ಶಕ್ತಿ ಉತ್ತರ ಕರ್ನಾಟಕಕ್ಕೆ ಇದೆ ಎಂದು ಹೇಳಿದರು.ಯಾವುದೇ ವ್ಯಕ್ತಿಗೆ ಊರು ಮತ್ತೆ ಬೇರು ಎರಡೂ ಬಹಳ ಮುಖ್ಯ, ಎರಡನ್ನೂ ನಾವು ಯಾವತ್ತೂ ಮರೆಯಬಾರದು. ಬೇರು ಗಟ್ಟಿಇದ್ದರೆ ಎಂತಹ ಬಿರುಗಾಳಿಯಿದ್ದರೂ ಗಟ್ಟಿಯಾಗಿ ನಿಲ್ಲತ್ತೇವೆ. ಆದ್ದರಿಂದ ಊರನ್ನೂ ಮರೆಯಬಾರದು ಎಂದರು.
ಸಚಿವ ಲಕ್ಷ್ಮಣ ಸವದಿ ಮಾತನಾಡಿ, ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಘೋಷಣೆ ಕೂಗಿದವರಿಗೆ ಕೆಲ ಸತ್ಯ ಘಟನೆಗಳು ಇನ್ನೂ ತಿಳಿದಿಲ್ಲ. ದಕ್ಷಿಣ ಕರ್ನಾಟಕದಿಂದ ತೆರಿಗೆ ಸಂಗ್ರಹ ಹೆಚ್ಚಿದೆ. ಉತ್ತರ ಕರ್ನಾಟಕ ತುಂಬಾ ಕೃಷಿ ಆಧಾರಿತ ವಲಯ ಇದೆ, ಕೃಷಿಯಲ್ಲಿ ಅಷ್ಟೇನೂ ತೆರಿಗೆ ಬರುತ್ತಿಲ್ಲ. ನಾವೇನಾದರೂ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಮಾಡಿದರೆ, ತೆರಿಗೆ ಹಣ ಇಲ್ಲದೆ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಸಮಗ್ರ ಕರ್ನಾಟಕದಲ್ಲಿದ್ದರೆ ಮಾತ್ರ ಉತ್ತರ ಕರ್ನಾಟಕ ಅಭಿವೃದ್ಧಿ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಕ್ರೀಡಾಸ್ಪರ್ಧೆಯನ್ನು ಬಸವರಾಜ ಬೊಮ್ಮಾಯಿ ಮತ್ತು ಲಕ್ಷ್ಮಣ ಸವದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಉತ್ತರ ಕರ್ನಾಟಕದ ಮಹಿಳೆಯರು, ಪುರುಷರು, ಮಕ್ಕಳು ಗೋಲಿಯಾಟ ಸೇರಿ ಇತರೆ ಕ್ರೀಡೆಗಳಲ್ಲಿ ಭಾಗವಹಿಸಿ ಗಮನ ಸೆಳೆದರು. ಇದಲ್ಲದೆ, ಜಾನಪದ ಕಲೆಗಳಾದ ಜಗ್ಗಲಗಿ ಮೇಳ, ಮುಳ್ಳುಹೆಜ್ಜೆ ಮೇಳ, ಕರಡಿ ಮಜಲು, ಮಲ್ಲಕಂಬ, ಡೊಳ್ಳುಕುಣಿತ, ಗೊಂದಲಿಗರ ಪದ ಏರ್ಪಡಿಸಲಾಗಿತ್ತು. ಸುಮಾರು 30ಕ್ಕೂ ಹೆಚ್ಚು ಮಳಿಗೆಗಳಲ್ಲಿ ಉತ್ತರ ಕರ್ನಾಟಕದ ಸಾಹಿತ್ಯ ಒಳಗೊಂಡ ಪುಸ್ತಕ ಮಾರಾಟ, ತಿಂಡಿ ತಿನಿಸು ಮಾರಾಟ, ನಂದಿನ ಹಾಲು, ಬೆಳಗಾವಿ ಕುಂದಾ, ಧಾರವಾಡದ ಪೇಡ ಮಾರಾಟ ಮಾಡಲಾಯಿತು. ಹೆಚ್ಚಿನ ಮಂದಿ ಉತ್ತರಕರ್ನಾಟಕದ ದಿರಿಸಿನಲ್ಲಿ ಮಿಂಚಿದ್ದು ವಿಶೇಷವಾಗಿತ್ತು.