ಉಡುಪಿ ಧರ್ಮಪ್ರಾಂತ್ಯದ 2ನೇ ಬಿಷಪ್‌ರಾಗಿ ವಂ. ಲೆಸ್ಲಿ ಸಿ. ಡಿಸೋಜ ಪೀಠಾರೋಹಣ

KannadaprabhaNewsNetwork |  
Published : Apr 21, 2026, 02:45 AM IST
ಉಡುಪಿ ಧರ್ಮಪ್ರಾಂತ್ಯಧ ಧರ್ಮಾಧ್ಯಕ್ಷರಾಗಿ ಡಾ. ಲೆಸ್ಲಿ ಸಿ. ಡಿಸೋಜ ಅವರು ದಂಡದೊಂದಿಗೆ ಪೀಠಾರೋಣಗೈದರು | Kannada Prabha

ಸಾರಾಂಶ

ಉಡುಪಿ ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರನ್ನು ಸೋಮವಾರ ಇಲ್ಲಿನ ಕಲ್ಯಾಣಪುರ ಮಿಲಾಗ್ರಿಸ್ ಪ್ರಧಾನಾಲಯದಲ್ಲಿ ನಡೆದ ಪವಿತ್ರ ಸಮಾರಂಭದಲ್ಲಿ ಅಭಿಷಿಕ್ತಗೊಳಿಸಿ, ಪೀಠಾರೋಹಣಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಕಲ್ಯಾಣಪುರ

ಉಡುಪಿ ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರನ್ನು ಸೋಮವಾರ ಇಲ್ಲಿನ ಕಲ್ಯಾಣಪುರ ಮಿಲಾಗ್ರಿಸ್ ಪ್ರಧಾನಾಲಯದಲ್ಲಿ ನಡೆದ ಪವಿತ್ರ ಸಮಾರಂಭದಲ್ಲಿ ಅಭಿಷಿಕ್ತಗೊಳಿಸಿ, ಪೀಠಾರೋಹಣಗೊಳಿಸಲಾಯಿತು.

ಭಾರತ ಮತ್ತು ನೇಪಾಳದ ಅಪೊಸ್ತೋಲಿಕ್ ನುನ್ಸಿಯೋ ಮಹಾಧರ್ಮಾಧ್ಯಕ್ಷ ಲಿಯೋಪೋಲ್ಡೊ ಗಿರೆಲ್ಲಿ ಅವರ ಉಪಸ್ಥಿತಿಯಲ್ಲಿ, ಗೋವಾ - ದಮನ್ ಗಳ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ ಅವರು ಧರ್ಮಾಧ್ಯಕ್ಷರ ಅಭಿಷೇಕದ ವಿಧಿಗಳನ್ನು ನೆರವೇರಿಸಿದರು. ಬೆಂಗಳೂರು ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಡಾ. ಪೀಟರ್ ಮಚಾದೊ ಹಾಗೂ ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಡಾ. ಜೆರಾಲ್ಡ್ ಐಸಾಕ್ ಲೋಬೊ ಸಹ ಅಭಿಷೇಕಕಾರರಾಗಿ ಸಹಕರಿಸಿದರು.ಮೊದಲು ಪೋಪ್ ಅವರು ಉಡುಪಿ ಧರ್ಮಾಧ್ಯಕ್ಷರನ್ನು ನೇಮಿಸಿದ ಅಧಿಕೃತ ನೇಮಕಾತಿ ಪತ್ರವನ್ನು ವಾಚಿಸಲಾಯಿತು. ನಂತರ ನೂತನ ಧರ್ಮಾಧ್ಯಕ್ಷರಿಗೆ ಪವಿತ್ರ ತೈಲದಿಂದ ಅಭಿಷೇಕ ಮಾಡಲಾಯಿತು, ಬಳಿಕ ಪವಿತ್ರ ಬೈಬಲನ್ನು ಅವರ ಶಿರದ ಮೇಲಿರಿಸಿ ಪ್ರಾರ್ಥಿಸಲಾಯಿತು. ಬಳಿಕ ಅಧಿಕಾರದ ಉಂಗುರ ಧಾರಣೆ, ಶಿರವಸ್ತ್ರ, ದಂಡವನ್ನು ಹಸ್ತಾಂತರಿಸಿ ಅಧಿಕೃತ ಪೀಠದಲ್ಲಿ ಕುಳ್ಳಿರಿಸಲಾಯಿತು. ಈ ಮೂಲಕ ನೂತನ ಧರ್ಮಾಧ್ಯಕ್ಷರ ಪೀಠಾರೋಹಣದ ಘೋಷಣೆ ಮಾಡಲಾಯಿತು.ಸುವಾರ್ತೆ ಸಾರುವ ಕರ್ತವ್ಯ:

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು, ‘ಪ್ರತಿಯೊಬ್ಬರಿಗೂ ತಂದೆಯ ಆಶೀರ್ವಾದವು ಅಮೂಲ್ಯವಾಗಿರುತ್ತದೆ. ಇಂದಿನ ಸಮಾಜದಲ್ಲಿ ಹಲವಾರು ಕುಟುಂಬಗಳಲ್ಲಿ ತಂದೆಯ ಉಪಸ್ಥಿತಿ ಕಾಣುವುದಿಲ್ಲ. ದೇವರ ಕುಟುಂಬದಲ್ಲಿ ಧರ್ಮಾಧ್ಯಕ್ಷರು ಪರಮಪಿತನ ಪ್ರತಿನಿಧಿಗಳು. ವಂ. ಲೆಸ್ಲಿ ಅವರ ಮೂಲಕ ದೇವರು ಉಡುಪಿ ಧರ್ಮಪ್ರಾಂತ್ಯಕ್ಕೆ ತನ್ನ ಪ್ರತಿನಿಧಿಯನ್ನು ಆಯ್ಕೆ ಮಾಡಿದ್ದಾರೆ. ಧರ್ಮಾಧ್ಯಕ್ಷರು ದೇವರ ವಾಕ್ಯವನ್ನು ಭಕ್ತರಲ್ಲಿ ಬಿತ್ತಬೇಕು ಹಾಗೂ ಎಲ್ಲರನ್ನು ಪ್ರೀತಿಯಿಂದ ನಡೆಸಬೇಕು. ಸುವಾರ್ತೆಯ ಸಾರವನ್ನು ಸಾರುವುದು ಅವರ ಪ್ರಮುಖ ಕರ್ತವ್ಯ’ ಎಂದು ಹೇಳಿದರು.30ಕ್ಕೂ ಹೆಚ್ಚು ಬಿಷಪರ ಸಾಕ್ಷಿ:ಭಾರತ ಮತ್ತು ನೇಪಾಳದ ಅಪೊಸ್ತೋಲಿಕ್ ನುನ್ಸಿಯೋ ಮಹಾಧರ್ಮಾಧ್ಯಕ್ಷ ಲಿಯೋಪೋಲ್ಡೊ ಗಿರೆಲ್ಲಿ, ದೇಶದ 30ಕ್ಕೂ ಹೆಚ್ಚು ಧರ್ಮಾಧ್ಯಕ್ಷರು, 300ಕ್ಕೂ ಅಧಿಕ ಧರ್ಮಗುರುಗಳು ಮತ್ತು ಧರ್ಮಭಗಿನಿಯರು ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 6,000 ಭಕ್ತರು, ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.ಸುಮಾರು 3 ಗಂಟೆ ಕಾಲ ನಡೆದ ಧರ್ಮಪ್ರಾಂತ್ಯ ಕ್ರೈಸ್ತರಿಗೆ ಅತೀಶ್ರೇಷ್ಠವಾದ ಈ ಧಾರ್ಮಿಕ ಕಾರ್ಯಕ್ರಮ ಅತ್ಯಂತ ಶಿಸ್ತುಬದ್ಧವಾಗಿ ಪೂರ್ವಯೋಜಿತ ನಿಯಮಗಳಂತೆ ಸಮಯಕ್ಕೆ ಸರಿಯಾಗಿ ನಡೆದು ಗಮನ ಸಳೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಪ್ಪೂರು ನದಿಕೊರೆತ ಪ್ರದೇಶಕ್ಕೆ ಶಾಸಕ ಯಶ್ ಪಾಲ್ ಭೇಟಿ
ಅಗ್ನಿ ಅವಘಡಗಳಿಗೆ ಸುರಕ್ಷತಾ ಕ್ರಮ ತಿಳಿದುಕೊಳ್ಳುವುದು ಅವಶ್ಯಕ: ಲಕ್ಷ್ಮಿಕುಮಾರ್