ದೇವರಾಜ ಅರಸುಗೆ ಭಾರತರತ್ನ ನೀಡಲು ವಿ.ಎಸ್.ಉಗ್ರಪ್ಪ ಒತ್ತಾಯ

KannadaprabhaNewsNetwork |  
Published : Aug 22, 2026, 01:45 AM IST
ವಿ.ಎಸ್ ಉಗ್ರಪ್ಪ ಅವರ ಫೋಟೋ ಬಳಸಿಕೊಳ್ಳುವುದು  | Kannada Prabha

ಸಾರಾಂಶ

ಬಿಹಾರದ ಸಮಾಜ ಸುಧಾರಕ ಕರ್ಪೂರಿ ಠಾಕೂರ್‌ ಅವರಿಗೆ ಭಾರತರತ್ನ ನೀಡಿರುವ ಮಾದರಿಯಲ್ಲೇ ದೇವರಾಜ ಅರಸು ಅವರಿಗೂ ದೇಶದ ಅತ್ಯುನ್ನತ ನಾಗರಿಕ ಗೌರವ ನೀಡಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಒತ್ತಾಯಿಸಿದರು.

ಬಳ್ಳಾರಿ: ಬಿಹಾರದ ಸಮಾಜ ಸುಧಾರಕ ಕರ್ಪೂರಿ ಠಾಕೂರ್‌ ಅವರಿಗೆ ಭಾರತರತ್ನ ನೀಡಿರುವ ಮಾದರಿಯಲ್ಲೇ ದೇವರಾಜ ಅರಸು ಅವರಿಗೂ ದೇಶದ ಅತ್ಯುನ್ನತ ನಾಗರಿಕ ಗೌರವ ನೀಡಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲೂರಿನಲ್ಲಿರುವ ಅರಸು ಅವರ ಹುಟ್ಟೂರು ಹಾಗೂ ಸ್ಮಾರಕಕ್ಕೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದೆ. ಎಂಟು ವರ್ಷಗಳ ಕಾಲ ರಾಜ್ಯವನ್ನು ಮುನ್ನಡೆಸಿದ ಮಹಾನ್‌ ನಾಯಕನ ಹುಟ್ಟೂರು ಹಾಗೂ ಸಮಾಧಿ ಸ್ಥಳಗಳ ಸ್ಥಿತಿ ಕಂಡು ಬೇಸರವಾಯಿತು. ಅವರ ಮನೆ ಶಿಥಿಲಗೊಂಡಿದ್ದು, ಬಿದಿರು ಮತ್ತು ನಾಡು ಹೆಂಚಿನಿಂದ ನಿರ್ಮಿಸಿರುವ ಮನೆಯ ಹೆಂಚುಗಳು ಉದುರಿ ಬೀಳುತ್ತಿವೆ. ಇಂದಿರಾ ಗಾಂಧಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರೊಂದಿಗೆ ಅರಸು ಅವರು ಇರುವ ಅಪರೂಪದ ಛಾಯಾಚಿತ್ರಗಳು ಮಳೆ, ಗಾಳಿಗೆ ಹಾಳಾಗುತ್ತಿವೆ. ಅರಸು, ಅವರ ಪತ್ನಿ, ಪುತ್ರಿ ಚಂದ್ರಪ್ರಭಾ ಅರಸ್‌ ಹಾಗೂ ಅಳಿಯನ ಸಮಾಧಿಗಳೂ ಸೂಕ್ತ ನಿರ್ವಹಣೆಯಿಲ್ಲದೆ ನಿರ್ಲಕ್ಷ್ಯಕ್ಕೊಳಗಾಗಿವೆ ಎಂದು ತಿಳಿಸಿದರು.

ಶ್ರೀರಾಮನ ಹೆಸರಿನಲ್ಲಿ ಬಿಜೆಪಿ ರಾಜಕೀಯ

ಭೂ ಸುಧಾರಣಾ ಕಾಯಿದೆ ಜಾರಿಗೆ ತರುವುದರ ಜತೆಗೆ ಮಲಹೊರುವ ಪದ್ಧತಿ ಹಾಗೂ ಜೀತ ಪದ್ಧತಿ ನಿರ್ಮೂಲನೆಗೆ ಅರಸು ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಹೀಗಾಗಿ, ಅವರ ಸೇವೆಯನ್ನು ದೇಶದ ಮಟ್ಟದಲ್ಲಿ ಗೌರವಿಸಬೇಕಿದೆ. ಹೀಗಾಗಿ, ಅರಸು ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಅರಸು ಅವರ ಸ್ಮಾರಕವನ್ನು ದೇಶಕ್ಕೇ ಮಾದರಿಯಾಗುವ ಸಾಮಾಜಿಕ ನ್ಯಾಯದ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು. ಈ ಕುರಿತು ಮುಖ್ಯಮಂತ್ರಿ ಅವರಿಗೆ ಈಗಾಗಲೇ ಪತ್ರ ಬರೆದಿದ್ದು, ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಚರ್ಚಿಸಿ ಸಮಗ್ರ ಯೋಜನೆ ರೂಪಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಉಗ್ರಪ್ಪ ತಿಳಿಸಿದರು.

ಶ್ರೀರಾಮನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಇಟ್ಟಿಗೆ ಯಾತ್ರೆ ಮೂಲಕ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪಗಳಿವೆ. ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳ ಸಹಯೋಗದಲ್ಲಿ ರಚಿಸಿರುವ ಟ್ರಸ್ಟ್‌ನಲ್ಲೂ ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿಬರುತ್ತಿದ್ದು, ಇದರಿಂದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರತಿಷ್ಠೆಗೆ ಧಕ್ಕೆ ಉಂಟಾಗುತ್ತಿದೆ ಎಂದರು.

ಬೋಫೋರ್ಸ್‌ ಪ್ರಕರಣದಲ್ಲಿ ಬಿಜೆಪಿ ರಾಜೀವ್‌ ಗಾಂಧಿ ಅವರ ವಿರುದ್ಧ ₹63 ಕೋಟಿ ಅವ್ಯವಹಾರದ ಆರೋಪ ಮಾಡಿತ್ತು. ಆದರೆ, ಅದನ್ನು ಇದು ವರೆಗೆ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಅದೇ ರೀತಿ ಸುಮಾರು ₹40 ಸಾವಿರ ಕೋಟಿ ಮೊತ್ತದ ರಫೇಲ್‌ ವ್ಯವಹಾರದ ಅಕ್ರಮದ ಕುರಿತು ಸಂಸತ್ತಿನಲ್ಲಿ ಪ್ರಶ್ನೆ ಎತ್ತಿದರೂ ಕೇಂದ್ರ ಸರ್ಕಾರ ತನಿಖೆಗೆ ಮುಂದಾಗಲಿಲ್ಲ ಎಂದು ಆರೋಪಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ವಿಷಯದ ಕುರಿತು ಚರ್ಚೆಗೆ ಅವಕಾಶ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಪ್ರತಿಪಕ್ಷಗಳು ಧರಣಿ ನಡೆಸುವುದಕ್ಕಿಂತ ದಾಖಲೆಗಳೊಂದಿಗೆ ಸದನಕ್ಕೆ ಬಂದು ಚರ್ಚಿಸಬೇಕು. ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ತಮ್ಮ ಬಳಿ ದಾಖಲೆಗಳಿದ್ದರೆ ಸದನದಲ್ಲಿ ಮಂಡಿಸಿ ಚರ್ಚಿಸಲಿ ಎಂದು ಸವಾಲು ಹಾಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗದಲ್ಲಿ ಅಕ್ರಮವಾಗಿ ವಾಸವಿದ್ದ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳ ವಶ
ಕೂಲಿ ಹಣಕ್ಕಾಗಿ ಗ್ರಾಪಂ ಎದುರು ಕಾರ್ಮಿಕರ ಪ್ರತಿಭಟನೆ