ಬಳ್ಳಾರಿ: ನಗರ ಸೇರಿದಂತೆ ಜಿಲ್ಲಾದ್ಯಂತ ವರಮಹಾಲಕ್ಷ್ಮೀ ಹಬ್ಬವನ್ನು ಶುಕ್ರವಾರ ಅತ್ಯಂತ ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಗ್ಗಿನಿಂದಲೇ ಮಹಿಳೆಯರು ಮನೆಗಳನ್ನು ಸ್ವಚ್ಛಗೊಳಿಸಿ, ಬಣ್ಣಬಣ್ಣದ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಅಲಂಕರಿಸಿ, ವರಮಹಾಲಕ್ಷ್ಮಿ ದೇವಿಯ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರಲ್ಲದೆ, ಕುಟುಂಬದ ಸುಖ, ಸಮೃದ್ಧಿ, ಆರೋಗ್ಯ, ಐಶ್ವರ್ಯ ಹಾಗೂ ಸೌಭಾಗ್ಯಕ್ಕಾಗಿ ಶ್ರದ್ಧೆಯಿಂದ ವ್ರತಾಚರಣೆ ಮಾಡಿದರು.
ಮನೆಗಳಲ್ಲಿ ವಿಶೇಷ ಪೂಜೆ
ವರಮಹಾಲಕ್ಷ್ಮೀ ವ್ರತದ ಅಂಗವಾಗಿ ಮಹಿಳೆಯರು ಬೆಳಗ್ಗೆಯೇ ಸ್ನಾನಾದಿ ಕಾರ್ಯಗಳನ್ನು ಮುಗಿಸಿ, ಪೂಜಾ ಸ್ಥಳವನ್ನು ಸಿದ್ಧಪಡಿಸಿದರು. ಅಕ್ಕಿ, ಕಲಶ, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ಅರಿಶಿಣ-ಕುಂಕುಮ ಹಾಗೂ ಹೂವುಗಳಿಂದ ಪೂಜಾ ಸಾಮಗ್ರಿಗಳನ್ನು ಸಿದ್ಧಪಡಿಸಲಾಯಿತು. ಕೆಲವರು ಬೆಳ್ಳಿಯ ಲಕ್ಷ್ಮೀ ಮುಖವಾಡವನ್ನು ಬಳಸಿ ವಿಶೇಷವಾಗಿ ಅಲಂಕರಿಸಿದರೆ, ಇನ್ನೂ ಕೆಲವರು ದೇವಿಯ ಮೂರ್ತಿಯನ್ನು ಹೂವುಗಳಿಂದ ಅಲಂಕರಿಸಿ ಪೂಜೆ ನೆರವೇರಿಸಿದರು.ಪೂಜೆಯ ಸಂದರ್ಭದಲ್ಲಿ ಲಕ್ಷ್ಮೀ ಅಷ್ಟೋತ್ತರ, ವರಮಹಾಲಕ್ಷ್ಮಿ ವ್ರತ ಕಥೆ ಹಾಗೂ ವಿವಿಧ ಸ್ತೋತ್ರಗಳನ್ನು ಪಠಿಸಲಾಯಿತು. ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಪೂಜೆಯಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದರು. ಪೂಜೆಯ ನಂತರ ಮಹಿಳೆಯರು ಪರಸ್ಪರ ಅರಿಶಿಣ-ಕುಂಕುಮ ವಿನಿಮಯ ಮಾಡಿಕೊಂಡು ಸೌಭಾಗ್ಯದ ಸಂಕೇತದ ವಸ್ತುಗಳನ್ನು ನೀಡಿದರು.
ಶ್ರೀಕನಕ ದುರ್ಗಮ್ಮ ದೇವಿಗೆ ಚಿನ್ನದ ಅಲಂಕಾರ
ಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಜರುಗಿದವು. ದೇವಿಯ ಮೂರ್ತಿಯನ್ನು ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗಿತ್ತು. ದೇವಿಯ ದರ್ಶನಕ್ಕಾಗಿ ಬೆಳಗ್ಗೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡು ಬಂದವು. ನಗರದ ವಿವಿಧೆಡೆಯ ಶಕ್ತಿ ದೇವಸ್ಥಾನಗಳಲ್ಲಿ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಶ್ರೀಕನಕ ದುರ್ಗಮ್ಮ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಗ್ರಾಮೀಣ ಪ್ರದೇಶಗಳಲ್ಲಿ ವರಮಹಾಲಕ್ಷ್ಮೀ ಹಬ್ಬ ಸಂಭ್ರಮ, ಭಕ್ತಿ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ನೆರವೇರಿತು. ಮನೆ-ಮನೆಗಳಲ್ಲಿ ಮೊಳಗಿದ ಮಂಗಳಗೀತೆಗಳು, ಪೂಜಾ ಮಂತ್ರೋಚ್ಚಾರಣೆ, ಹೂವಿನ ಪರಿಮಳ ಹಾಗೂ ಮಹಿಳೆಯರ ಸಡಗರದಿಂದ ಜಿಲ್ಲಾದ್ಯಂತ ಹಬ್ಬದ ವಾತಾವರಣ ಕಳೆಗಟ್ಟಿತ್ತು.
ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆಗಳು ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಗುರುವಾರದಿಂದಲೇ ಜನಜಂಗುಳಿ ಕಂಡುಬಂತು. ಹೂವು, ಹಣ್ಣು, ಬಾಳೆಕಂದು, ಮಾವಿನ ಎಲೆ, ತೆಂಗಿನಕಾಯಿ, ಅರಿಶಿಣ, ಕುಂಕುಮ ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದರು. ವಿಶೇಷವಾಗಿ ಮಲ್ಲಿಗೆ, ಸೇವಂತಿಗೆ, ಗುಲಾಬಿ, ಕನಕಾಂಬರ ಸೇರಿದಂತೆ ವಿವಿಧ ಬಗೆಯ ಹೂವುಗಳಿಗೆ ಬೇಡಿಕೆ ಹೆಚ್ಚಾಗಿತ್ತು.