ಹಿಪ್ಪರಗಿ ಜಲಾಶಯ ನಿರ್ವಹಣೆಗೆ ಹುದ್ದೆಗಳು ಖಾಲಿ!

KannadaprabhaNewsNetwork |  
Published : Jan 25, 2026, 03:00 AM IST
ಹಿಪ್ಪರಗಿ ಖಾಲಿ ಜಲಾಶಯಕ್ಕೆ ಖಾಲಿ ಹುದ್ದೆಗಳು! | Kannada Prabha

ಸಾರಾಂಶ

ಜಿಲ್ಲೆಯ ಹಿಪ್ಪರಗಿ ಜಲಾಶಯದ ೨೨ನೇ ಗೇಟ್‌ನ ಪ್ಲೇಟ್‌ಲೇಟ್ ಜ.6ರಂದು ಮುರಿದು ಅಪಾರ ಪ್ರಮಾಣದ ನೀರು ಸೋರಿಕೆಗೆ ಜಲಾಶಯ ನಿರ್ವಹಣೆಗೆ ಅಗತ್ಯವಾಗಿದ್ದ ಸಿಬ್ಬಂದಿಯಿಲ್ಲದೇ ೯ ಹುದ್ದೆಗಳು ಖಾಲಿ ಇರುವುದು ಮತ್ತು ದೂರದ ಅಥಣಿ ಉಪವಿಭಾಗದ ಅಭಿಯಂತರರಿಗೆ ಬ್ಯಾರೇಜ್‌ ನಿರ್ವಹಣೆ ಹೊಣೆ ನೀಡಿರುವುದೇ ಪ್ರಮುಖ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ರಬಕವಿ-ಬನಹಟ್ಟಿ

ಜಿಲ್ಲೆಯ ಹಿಪ್ಪರಗಿ ಜಲಾಶಯದ ೨೨ನೇ ಗೇಟ್‌ನ ಪ್ಲೇಟ್‌ಲೇಟ್ ಜ.6ರಂದು ಮುರಿದುಬಿದ್ದು ಸಂಗ್ರಹಣೆಯಾಗಿದ್ದ ನೀರು ಸತತ ೧೩ ದಿನಗಳ ಕಾಲ ಹರಿದುಹೋಗಿ ಬರುವ ಬೇಸಿಗೆಗೆ ಅಗತ್ಯ ನೀರಿನ ಸಂರಕ್ಷಣೆಯಾಗದೆ ಎರಡು ಜಿಲ್ಲೆಗಳ ಜನತೆ ಬೇಸಿಗೆಯಲ್ಲಿ ಜೀವಜಲ ಸಮಸ್ಯೆಗೆ ಪರಿಹಾರ ಕಾಣದೆ ಕಂಗಾಲಾಗಿದ್ದಾರೆ. ಜಲಾಶಯ ನಿರ್ವಹಣೆಗೆ ಅಗತ್ಯವಾಗಿದ್ದ ಸಿಬ್ಬಂದಿಯಿಲ್ಲದೇ ೯ ಹುದ್ದೆಗಳು ಖಾಲಿ ಇರುವುದು ಮತ್ತು ದೂರದ ಅಥಣಿ ಉಪವಿಭಾಗದ ಅಭಿಯಂತರರಿಗೆ ಬ್ಯಾರೇಜ್‌ ನಿರ್ವಹಣೆ ಹೊಣೆ ನೀಡಿರುವುದೇ ಪ್ರಮುಖ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.

ನೀರು ಸೋರಿಕೆ ಬಳಿಕ ಸದ್ಯ ಜಲಾಶಯದಲ್ಲಿ 6 ಟಿಎಂಸಿಯಲ್ಲಿ ೩.೮ ಟಿಎಂಸಿ ನೀರು (ಶೇ.೬೩.೩೩) ಸಂಗ್ರಹವಿದೆ. ಸದ್ಯ ೪೫೦ ಕ್ಯುಸೆಕ್‌ ಜಲಾಶಯದ ಒಳಹರಿವಿದ್ದು, ಬೇಸಿಗೆ ಸಮಯದಲ್ಲಿ ರೈತರ ಜಮೀನಿಗೆ ನೀರು ಪೂರೈಕೆಗೆ ಕಾಲುವೆಗಳ ಮೂಲಕ ಘಟಪ್ರಭಾ ಜಲಾಶಯದಿಂದ ನೀರು ಹರಿಸುವುದು ಇಲ್ಲವೆ ಮಹಾರಾಷ್ಟ್ರ ಸರ್ಕಾರದ ಮನವೊಲಿಸಿ ಕೋಯ್ನಾ ಡ್ಯಾಂನಿಂದ ನೀರು ತರಲು ಸಾಧ್ಯವಿದೆ ಎಂದು ಜಲಾಶಯ ಎಇಇ ಶಿವಮೂರ್ತಿ ತಿಳಿಸಿದ್ದಾರೆ. ಆದರೆ, ಆಗಿರುವ ಪ್ರಮಾದಕ್ಕೆ ಜಲಾಶಯ ನಿರ್ವಹಣೆಗೆ ಅಗತ್ಯವಾಗಿ ಇರಬೇಕಿದ್ದ ಸಿಬ್ಬಂದಿ ಇಲ್ಲದಿರುವುದು ಮುಖ್ಯ ಕಾರಣ ಎನ್ನಲಾಗುತ್ತಿದೆ.

ನಿರ್ಲಕ್ಷ್ಯಕ್ಕೆ ಏನು ಕಾರಣ?:ಜಲಾಶಯದ ಸಮಯೋಚಿತ ನಿರ್ವಹಣೆ ಇಲ್ಲದಿರುವುದು ಮತ್ತು ಗೇಟ್‌ಗಳ ಕ್ಷಮತೆ ಕ್ಷೀಣಿಸಿದ ಬಗ್ಗೆ ಅಥಣಿ ವಿಭಾಗದ ನಿರ್ವಹಣೆ ಅಭಿಯಂತರರು ಗುರ್ತಿಸದೇ ಇರುವುದು ಹಾಗೂ ಜನಪ್ರತಿನಿಧಿಗಳು ಗೇಟ್‌ಗಳು ಗರಿಷ್ಠ ೧೫ ವರ್ಷ ತಾಳಿಕೆ ಸಾಮರ್ಥ್ಯವಿದ್ದು, ಅಳವಡಿಸಿ 23 ವರ್ಷಗಳಾದರೂ ಸರ್ಕಾರದ ಗಮನ ಸೆಳೆಯದೇ ಇರುವುದರಿಂದ ಈ ದುರ್ಘಟನೆ ನಡೆದಿದೆ. ನಿತ್ಯ ನಿರ್ವಹಣೆಗೆ ಅಗತ್ಯ ಸಿಬ್ಬಂದಿಯಲ್ಲಿ ಸದ್ಯ ಎಇಇ, ದ್ವಿತೀಯ ದರ್ಜೆ ಗುತ್ತಿಗೆದಾರ ಮತ್ತು ಇಬ್ಬರು ಸಿಪಾಯಿಗಳು ಮಾತ್ರ ಇದ್ದು, ಎರಡು ಎಇಇ, ಮೂರು ಜೆಇ, ಪ್ರಥಮ ದರ್ಜೆ ಗುತ್ತಿಗೆದಾರ, ಕಾವಲುಗಾರ ಸೇರಿ ಒಟ್ಟು ೯ ಹುದ್ದೆಗಳು ಖಾಲಿ ಇವೆ.

ಸದ್ಯ ಪ್ರಭಾರಿ ಎಇಇ ಕೆಲಸದಲ್ಲಿರುವ ಶಿವಮೂರ್ತಿಯವರನ್ನು ಬಳ್ಳಾರಿಗೆ ಡೆಪ್ಯುಟೇಶನ್ ನೀಡಲಾಗಿದೆ. ಕರ್ನಾಟಕ ನೀರಾವರಿ ನಿಗಮ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಮೂವರು ಸಹಾಯಕ ಅಭಿಯಂತರ ಹಾಗೂ ಮೂವರು ಕಿರಿಯ ಅಭಿಯಂತರ ಕಾರ್ಯನಿರ್ವಹಿಸುತ್ತಿದ್ದರು. ಆಶ್ಚರ್ಯವೆಂದರೆ ಮೂರು ವರ್ಷಗಳಿಂದ ಒಬ್ಬರೂ ಅಭಿಯಂತರರಿಲ್ಲದೆ ಎಲ್ಲ ಆರೂ ಹುದ್ದೆಗಳು ಖಾಲಿ ಇರುವುದು ಹಾಗೂ ದೂರದ ಅಥಣಿಯ ಅಭಿಯಂತರರಿಗೆ ನಿರ್ವಹಣೆ ಹೊಣೆ ಹೊರಿಸಿರುವುದು ನೀರು ಪೋಲಾಗಲು ಲೋಪಕ್ಕೆ ಕಾರಣ ಎನ್ನಲಾಗುತ್ತಿದೆ.

6 ಅಭಿಯಂತರರು ಸೇರಿ ಕಚೇರಿ ಕೆಲಸಕ್ಕೆಂದು ಎಸ್‌ಡಿಸಿ ಹೊರತುಪಡಿಸಿ ಎಫ್‌ಡಿಸಿ, ಬೆರಳಚ್ಚುಗಾರ, ವಾಹನ ಚಾಲಕ ಹೀಗೆ ಒಟ್ಟು ಎಲ್ಲ ೯ ಹುದ್ದೆಗಳೂ ಖಾಲಿ ಬಿದ್ದಿವೆ. ಉತ್ತರ ಕರ್ನಾಟಕ ಜೀವನದಿಯಾಗಿರುವ ಕೃಷ್ಣಾ ನದಿಯ ಸೊರಗುವಿಕೆಗೆ ಕೃಷ್ಣಾ ಜಲಾನಯನ ಪ್ರದೇಶದ ರೈತರು ಮತ್ತು ನೂರಾರು ಗ್ರಾಮಗಳ ಜನತೆ ಹಿಡಿಶಾಪ ಹಾಕುವಂತಾಗಿದೆ. ಬೇಸಿಗೆಯ ನೀರಿನ ಬವಣೆ ನಿವಾರಿಸಲು ಸರ್ಕಾರ ಈ ವರ್ಷ ಪರ್ಯಾಯ ವ್ಯವಸ್ಥೆ ಮಾಡುವುದರ ಜತೆಗೆ ಹಿಪ್ಪರಗಿ ಜಲಾಶಯ ಸುಭದ್ರಗೊಳಿಸಲು ಶೀಘ್ರ ಕಾಮಗಾರಿ ಕೈಗೊಂಡಲ್ಲಿ ಮಾತ್ರ ಮುಂದಿನ ವರ್ಷ ಕೃಷ್ಣಾ ನದಿಪಾತ್ರದ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯ ಎಂಬ ಅಭಿಪ್ರಾಯಗಳು ಕೇಳಿಬರುತ್ತಿದೆ.

ಬೇಸಿಗೆ ದಿನಗಳಲ್ಲಿ ಉಂಟಾಗಬಹುದಾದ ಸಮಸ್ಯೆಯನ್ನು ರೈತರು, ನಾಗರಿಕರು ಚಳಿಗಾಲದಲ್ಲೇ ಅನುಭವಿಸುವಂತಾಗಿದ್ದು, ಕೃಷ್ಣಾ ನದಿಪಾತ್ರದ ಕಾಗವಾಡ, ಕುಡಚಿ, ರಾಯಭಾಗ, ಅಥಣಿ, ತೇರದಾಳ, ಜಮಖಂಡಿ, ಮತಕ್ಷೇತ್ರ ಪ್ರತಿನಿಧಿಸುವ ಶಾಸಕರು ಮುತುವರ್ಜಿ ವಹಿಸಿ ತಮ್ಮ ವ್ಯಾಪ್ತಿಯ ರೈತರ ಬೆಳೆಗೆ ಹಾಗೂ ಜನ-ಜಾನುವಾರು ಕುಡಿಯುವ ಈಗಿನಿಂದಲೇ ನೀರಿನ ಸಮಸ್ಯೆ ನಿವಾರಿಸುವತ್ತ ಒಗ್ಗಟ್ಟಾಗಿ ಪಕ್ಷಭೇದ ಮರೆತು ಸರ್ಕಾರದ ಗಮನ ಸೆಳೆಯುವ ಅವಶ್ಯಕತೆಯಿದೆ.

ಸದ್ಯ ಹಿಪ್ಪರಗಿ ಜಲಾಶಯದ ಗೇಟ್‌ಗಳ ಸ್ಥಿತಿ ಸರಿಯಿಲ್ಲ. ಅವುಗಳ ಕಾಲಾವಧಿ ಪೂರ್ಣಗೊಂಡಿದ್ದು, ಮಹಾ ನೀರು ಬಂದಲ್ಲಿ ತಡೆಹಿಡಿಯುವ ಸಾಮರ್ಥ್ಯ ಇಲ್ಲವಾಗಿದೆ. ಸರ್ಕಾರ ಸಮರೋಪಾದಿಯಲ್ಲಿ ಎಲ್ಲ ೨೨ ಗೇಟ್‌ಗಳನ್ನು ಹೊಸದಾಗಿ ಅಳವಡಿಸಲು ಹಾಗೂ ಕೆಟ್ಟಿರುವ ಕ್ರೇನ್ ಸರಿಪಡಿಸುವ ಕಾಮಗಾರಿ ಅಂದಾಜು ₹೩೬ ಕೋಟಿ ಅನುದಾನ ಒದಗಿಸಿ ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಇಚ್ಛಾಶಕ್ತಿ ತೋರಬೇಕು. ಹಳೆಯ ಗೇಟ್‌ಗಳು ಯಾವುದೇ ಸಮಯದಲ್ಲಿ ಮುರಿದುಬೀಳುವ ಹಂತದಲ್ಲಿ ರಭಸದಿಂದ ನಿರ್ಗಮಿಸುವ ನೀರು ತಡೆಯಲು ಸ್ಟಾಪ್‌ ಲಾಗ್‌ಗಳಿಂದ ಅಸಾಧ್ಯ. ಸದ್ಯ ಜಲಾಶಯದಲ್ಲಿ ಎರಡು ಸೆಟ್ ಸ್ಟಾಪ್‌ಲಾಗ್‌ಗಳಿದ್ದರೂ ಅವುಗಳಿಂದ ನೀರು ತಡೆಗಟ್ಟಲು ಸಾಧ್ಯವಾಗದು.----

ಜಲಾಶಯ ನಿರ್ವಹಣೆಗೆ ಅಗತ್ಯ ಎಲ್ಲ ಸಿಬ್ಬಂದಿ ಭರ್ತಿ ಮಾಡಬೇಕು. ಅಪರೇಟರ್ ಹುದ್ದೆಯಲ್ಲಿರುವ ಜೀವ ಒತ್ತೆ ಇಟ್ಟು ನೀರು ತಡೆಯಲು ಶ್ರಮಿಸಿದ ಗುತ್ತಿಗೆ ನೌಕರನಿಗೆ ೧೦ ತಿಂಗಳಿಂದ ವೇತನ ಪಾವತಿಯಾಗಿಲ್ಲ. ಜೀವದಾಸೆ ಬಿಟ್ಟು ನೌಕರಿ ಮಾಡುವ ಸಿಬ್ಬಂದಿಯನ್ನು ಕಾಯಂಗೊಳಿಸಿ ಅವರಿಗೆ ಉದ್ಯೋಗ ಭದ್ರತೆ ಒದಗಿಸುವ ಮತ್ತು ಜಲಾಶಯ ಪ್ರದೇಶದಲ್ಲೇ ಸಿಬ್ಬಂದಿಗೆ ವಸತಿ ಕಲ್ಪಿಸಿ, ಅವರಿಗೆ ಪೂರ್ಣ ನಿರ್ವಹಣೆಯ ಅಧಿಕಾರ ನೀಡಿದಲ್ಲಿ ಮಾತ್ರ ಜಲಾಶಯದ ಭವಿಷ್ಯದ ದುರ್ಘಟನೆ ತಡೆಯಲು ಸಾಧ್ಯವಾಗಲಿದೆ.

-ಅರುಣಕುಮಾರ ಯರಗುದ್ರಿ ನಿವೃತ್ತ ಅಭಿಯಂತರರು, ಪ್ರಗತಿಪರ ರೈತರು, ಮಹಿಷವಾಡಗಿ

ಈ ಬೇಸಿಗೆ ಸಮಯದಲ್ಲಿ ಜನ-ಜಾನುವಾರು ಹಾಗೂ ರೈತರಿಗೆ ಪರ್ಯಾಯ ಜಲಮೂಲ ನೀಡಿಯಾದರೂ ಜಲಾಶಯದ ಎಲ್ಲ ೨೨ಗೇಟ್‌ಗಳನ್ನು ಹಾಗೂ ಕ್ರೇನ್ ಹೊಸದಾಗಿ ಅಳವಡಿಸಿ, ಸುಲಭ ನಿರ್ವಹಣೆಗೆ ಅಗತ್ಯ ಎಲ್ಲ ಸಿಬ್ಬಂದಿ ಭರ್ತಿ ಮಾಡಿ ರಾಜ್ಯ ಸರ್ಕಾರ ಸಂಪೂರ್ಣ ಅನುದಾನ ನೀಡಿ ತ್ವರಿತ ಕಾಮಗಾರಿ ನಡೆಸುವ ಗುತ್ತಿಗೆದಾರ ಸಂಸ್ಥೆಗೆ ಬೇಸಿಗೆಯೊಳಗೆ ಪೂರ್ಣಗೊಳಿಸುವ ಷರತ್ತಿನೊಡನೆ ಮುಂದಾದಲ್ಲಿ ಮಾತ್ರ ಬರುವ ಎರಡು ದಶಕಗಳಾದರೂ ಕೃಷ್ಣಾ ಪಾತ್ರದ ಬೆಳಗಾವಿ, ಬಾಗಲಕೋಟ ಜಿಲ್ಲೆಗಳ ನಾಗರಿಕರು ಸಂತೃಪ್ತರಾಗಲು ಸಾಧ್ಯ.

- ಡಾ.ಧನಪಾಲ ಯಲ್ಲಟ್ಟಿ ಕನ್ನಡಪ್ರಭ ರೈತರತ್ನ ಪ್ರಶಸ್ತಿ ಪುರಸ್ಕೃತರು, ಕೃಷಿಕ ಹಳಿಂಗಳಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!