ರಾಸುಗಳಿಗೆ ಕಾಲಕಾಲಕ್ಕೆ ಕಾಲುಬಾಯಿ ಜ್ವರ ಲಸಿಕೆ ಹಾಕಿಸಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ

KannadaprabhaNewsNetwork | Published : Oct 23, 2024 12:38 AM

ಸಾರಾಂಶ

ಕಾಲುಬಾಯಿ ಜ್ವರವು ಜಾನುವಾರುಗಳಿಗೆ ಕಾಣಿಸಿಕೊಂಡು ಮರಣ ಹೊಂದುವ ಮೂಲಕ ರೈತರಿಗೆ ಆರ್ಥಿಕವಾಗಿ ನಷ್ಟವಾಗುವುದನ್ನು ತಪ್ಪಿಸುವ ಜೊತೆಗೆ ರಾಸುಗಳ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡಲು ಲಸಿಕೆ ಹಾಕಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ರೈತರು ಕಾಲಕಾಲಕ್ಕೆ ರಾಸುಗಳಿಗೆ ಕಾಲು ಬಾಯಿ ಜ್ವರದ ವಿರುದ್ಧದ ಲಸಿಕೆ ಹಾಕಿಸುವ ಮೂಲಕ ರಾಸುಗಳಿಗೆ ರೋಗ ಹರಡುವುದನ್ನು ತಪ್ಪಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ತಾಲೂಕಿನ ಕ್ಯಾತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಪಶುಪಾಲನಾ ಇಲಾಖೆಯಿಂದ ಆಯೋಜಿಸಿದ್ದ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆ ವಿತರಿಸಿ ಮಾತನಾಡಿದರು.

ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕಿಸಿದರೆ ಹಾಲು ಕೊಡುವುದನ್ನು ಕಡಿಮೆ ಮಾಡುತ್ತವೆ ಮತ್ತು ಗರ್ಭಪಾತವಾಗುತ್ತದೆ ಎಂಬ ಪೂರ್ವಗ್ರಹವನ್ನು ಬಿಟ್ಟು ತುಂಬು ಗರ್ಭದ ಜಾನುವಾರು ಹೊರತುಪಡಿಸಿ ಉಳಿದಂತೆ ಎಲ್ಲಾ ದನಕರು, ಎಮ್ಮೆಗಳಿಗೆ ಲಸಿಕೆ ಹಾಕಿಸುವಂತೆ ಸಲಹೆ ನೀಡಿದರು.

ಕಾಲುಬಾಯಿ ಜ್ವರವು ಜಾನುವಾರುಗಳಿಗೆ ಕಾಣಿಸಿಕೊಂಡು ಮರಣ ಹೊಂದುವ ಮೂಲಕ ರೈತರಿಗೆ ಆರ್ಥಿಕವಾಗಿ ನಷ್ಟವಾಗುವುದನ್ನು ತಪ್ಪಿಸುವ ಜೊತೆಗೆ ರಾಸುಗಳ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡಲು ಲಸಿಕೆ ಹಾಕಲಾಗುತ್ತಿದೆ ಎಂದರು.

ಅ.21ರಿಂದ ನ.20ರವರೆಗೆ ತಾಲೂಕಿನಾದ್ಯಂತ ಆರನೇ ಸುತ್ತಿನ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 40 ಸಾವಿರ ರಾಸುಗಳಿಗೆ 30 ತಂಡಗಳಿಂದ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ ಎಂದರು.

ಕಸಬಾ, ಚಿನಕುರಳಿ, ಮೇಲುಕೋಟೆ ಹೋಬಳಿಗಳಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮತ್ತು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ವೇಳೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಹೇಂದ್ರ, ಪಶು ವೈದ್ಯಾಧಿಕಾರಿಗಳಾದ ಡಾ.ಹಿಮಾಚಲ್, ಡಾ.ಪ್ರಕಾಶ್, ಡಾ.ಸಂತೋಷ್, ಮನ್ಮುಲ್ ಉಪ ವ್ಯವಸ್ಥಾಪಕ ಪ್ರಸಾದ್, ಮಾರ್ಗವಿಸ್ತರಣಾಧಿಕಾರಿ ಉಷಾ ಸೇರಿದಂತೆ ಪಶು ಇಲಾಖೆ ಸಿಬ್ಬಂದಿ ಇದ್ದರು.

Share this article