ಹರಿಹರ ಪಂಚಮಸಾಲಿ ಪೀಠದ ಟ್ರಸ್ಟ್ ವಿರೋಧದ ಮಧ್ಯೆಯೂ ಪದಚ್ಯುತ ವಚನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೀಠದ ಆವರಣದಲ್ಲಿಯೇ ಬಸವೋತ್ಸವ ನೆರವೇರಿತು. ಈ ವೇಳೆ ಸ್ವಾಮೀಜಿಗೆ ಪೀಠ ತೊರೆಯುವಂತೆ ಕರೆ ನೀಡಿದ್ದ ಪಂಚಮಸಾಲಿ ಯುವ ಘಟಕದ ರಾಜ್ಯಾಧ್ಯಕ್ಷ ಕಿಚಡಿ ಕೊಟ್ರೇಶ ಬೌನ್ಸರ್‌ಗಳ ಸಮೇತ ಆಗಮಿಸಿದ್ದು, ತೀವ್ರ ಕುತೂಹಲ ಕೆರಳಿಸಿತು.
ಬಸವೋತ್ಸವದಲ್ಲಿ ಮಾಜಿ ಶಾಸಕರಾದ ಎಚ್.ಎಸ್.ಶಿವಶಂಕರ, ಅರುಣಕುಮಾರ ಪೂಜಾರ, ಮಾಜಿ ಎಂಎಲ್‌ಸಿ ಸೋಮಣ್ಣ ಬೇವಿನಮರದ, ಆಡಳಿತಾಧಿಕಾರಿ ಹುದ್ದೆಯಿಂದ ಅಮಾನತಾದ ಡಾ। ರಾಜಕುಮಾರ್, ಟ್ರಸ್ಟಿ ಹೊನ್ನಾಳಿ ಬಾಬಣ್ಣ, ಬಿಜೆಪಿ ಮುಖಂಡ ಬಿ.ಜಿ.ಅಜಯಕುಮಾರ, ಲೆಕ್ಕ ಕೊಡಿ ಚಳವಳಿ ಸಮಿತಿ ಅಧ್ಯಕ್ಷ ಪರಮೇಶ್ವರ ಗೌಡ್ರು ಭಾಗಿಯಾಗಿದ್ದರು.
ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಆಗಮಿಸಿದ ಪಂಚಮಸಾಲಿ ಯುವ ಘಟಕದ ರಾಜ್ಯಾಧ್ಯಕ್ಷ ಕಿಚಡಿ ಕೊಟ್ರೇಶ ಲಿಂಗೈಕ್ಯ ಡಾ। ಮಹಾಂತ ಶಿವಾಚಾರ್ಯ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದರು. ಆ ಬಳಿಕ ಶಿವಧ್ಯಾನ ಮಂದಿರದಲ್ಲಿ ಶಿವಲಿಂಗ ದರ್ಶನ ಪಡೆದರು. ಈ ವೇಳೆ ಸಮಾಜದ ಯುವ ಮುಖಂಡರೊಡನೆ ಬೌನ್ಸರ್‌ಗಳು ಸಹ ಬಂದಿದ್ದರು. ಇವರು ಸುಮಾರು ಹೊತ್ತು ಮಠದ ಆವರಣದಲ್ಲೇ ನಿಂತು ತೆರಳಿರುವುದು ಕುತೂಹಲ ಕೆರಳಿಸಿತ್ತು.
ಗಟ್ಟಿಯಾಗಿರಿ-ಬೇವಿನಮರದ:
ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಸೋಮಣ್ಣ ಬೇವಿನಮರದ, ವಚನಾನಂದ ಸ್ವಾಮೀಜಿ ಬಗ್ಗೆ ರಾಜ್ಯದಲ್ಲಿ ಎಲ್ಲಿಯೂ ಒಂದು ಚೂರು ಸಹ ಅಪಸ್ವರವಿಲ್ಲ. ಆನೆ ಹೋಗುವಾಗ ನಾಯಿಗಳು ಬೊಗಳುತ್ತವೆ. ಅದಕ್ಕೆ ತಾವು ಕಿಂಚಿತ್ತೂ ತಲೆಕೆಡಿಸಿಕೊಳ್ಳಬೇಡಿ. ಈ ಹಿಂದೆ ಪೀಠ ಸ್ಥಾಪನೆಯಲ್ಲಿ ಸಾಕಷ್ಟು ತ್ಯಾಗ, ಬಲಿದಾನಗಳು ಆಗಿವೆ. ನೀವು ಇವಾಗ ಹೇಗೆ ಗಟ್ಟಿಯಾಗಿದ್ದೀರೋ ಹಾಗೆಯೇ ಇರಿ. ನೀವು ಸಣ್ಣ ವಯಸ್ಸಿನವರಿದ್ದು, ಸಮಾಜ ಕಟ್ಟುವುದಕ್ಕೆ ಗಟ್ಟಿಯಾಗಿದ್ದೀರಿ. ನೀವು ಇನ್ನೂ ಗಟ್ಟಿಯಾಗಿರಬೇಕು ಎಂದು ತಿಳಿಸಿದಾಗ ವಚನಾನಂದ ಸ್ವಾಮೀಜಿ ಭಾವುಕರಾದರು.
ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಅವರಿಗೂ ಒಂದು ಮಾತು ಹೇಳುತ್ತೇನೆ. ನೀವು 18 ವರ್ಷದಿಂದ ಮಠಕ್ಕೆ ಬಂದಿಲ್ಲವೆಂಬ ಮಾತಿದೆ. ಅಂತಹ ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡಿ. ರಾಜ್ಯದಲ್ಲಿ ಹೋದಲ್ಲೆಲ್ಲಾ ನೀವು ಸ್ವಾಮೀಜಿ ಪರವಾಗಿ ಗಟ್ಟಿಯಾಗಿರಿ. ನಾವೆಲ್ಲರೂ ಸ್ವಾಮೀಜಿ ಬೆನ್ನಿಗೆ ನಿಲ್ಲೋಣ ಎಂದು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.