ವಚನಗಳು ವೇದಗಳ ಸರಳಾನುವಾದ: ಕಿರಣಕುಮಾರ ವಿವೇಕವಂಶಿ

KannadaprabhaNewsNetwork |  
Published : Apr 11, 2026, 02:30 AM IST
ಕಾರ್ಯಕ್ರಮದಲ್ಲಿ ಕಿರಣಕುಮಾರ ವಿವೇಕವಂಶಿ ಮಾತನಾಡಿದರು. | Kannada Prabha

ಸಾರಾಂಶ

ಭಾರತವು ಯಾವುದೋ ಒಂದು ಕಾಲದಲ್ಲಿ ಅನುಭವಿಸಿದ ಬೌದ್ಧಿಕ ಮತ್ತು ಭೌತಿಕ ದಾಳಿಗಳ ಪರಿಣಾಮಗಳನ್ನು ಇಂದಿಗೂ ಅನುಭವಿಸುತ್ತಿದೆ. ಇದು ನಮ್ಮ ಸ್ಮೃತಿಯ ಮೇಲಿನ ದಾಳಿ. ಈ ಸ್ಮೃತಿಯನ್ನು ಮರಳಿ ಪಡೆಯುವುದಕ್ಕಾಗಿ ನಮ್ಮತನದ ಭಾರತೀಯ ಜ್ಞಾನ ಪರಂಪರೆ ಅಗತ್ಯ.

ಗದಗ: ವೇದಗಳಲ್ಲಿನ ಸಂಗತಿಗಳನ್ನು ಕನ್ನಡದಲ್ಲಿ ತಿಳಿಸುವ ಕೆಲಸವನ್ನು ವಚನಕಾರರು ಮಾಡಿದ್ದಾರೆ ಎಂದು ಪ್ರಜ್ಞಾ ಪ್ರವಾಹ ಕೂಟದ ಪ್ರಾಂತ್ಯ ಪ್ರಚಾರಕ ಕಿರಣಕುಮಾರ ವಿವೇಕವಂಶಿ ತಿಳಿಸಿದರು.ನಗರದ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಐಕ್ಯುಎಸಿ ಸಹಯೋಗದಲ್ಲಿ ಭಾರತೀಯ ಜ್ಞಾನ ಪರಂಪರೆ ಕುರಿತಾಗಿ ಆಯೋಜಿಸಿದ್ದ ಒಂದು ದಿನದ ಬಹುಶಿಸ್ತೀಯ ರಾಷ್ಟ್ರೀಯ ವಿಚಾರಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತವು ಯಾವುದೋ ಒಂದು ಕಾಲದಲ್ಲಿ ಅನುಭವಿಸಿದ ಬೌದ್ಧಿಕ ಮತ್ತು ಭೌತಿಕ ದಾಳಿಗಳ ಪರಿಣಾಮಗಳನ್ನು ಇಂದಿಗೂ ಅನುಭವಿಸುತ್ತಿದೆ. ಇದು ನಮ್ಮ ಸ್ಮೃತಿಯ ಮೇಲಿನ ದಾಳಿ. ಈ ಸ್ಮೃತಿಯನ್ನು ಮರಳಿ ಪಡೆಯುವುದಕ್ಕಾಗಿ ನಮ್ಮತನದ ಭಾರತೀಯ ಜ್ಞಾನ ಪರಂಪರೆ ಅಗತ್ಯವೆಂದರು.ಪ್ರೊ. ಸಿದ್ದಲಿಂಗ ಸಜ್ಜನಶೆಟ್ಟರ್ ಮಾತನಾಡಿ, ಕನ್ನಡ ಜನಪದ ಸಾಹಿತ್ಯವು ಭಾರತೀಯ ಜ್ಞಾನ ಪದ್ಧತಿಯ ಒಂದು ಅವಿಭಾಜ್ಯ ಅಂಗವಾಗಿದೆ. ಶಿಷ್ಟ ಸಾಹಿತ್ಯವು ಲಿಖಿತ ರೂಪದಲ್ಲಿ ಜ್ಞಾನವನ್ನು ಸಂರಕ್ಷಿಸಿದರೆ, ಜನಪದ ಸಾಹಿತ್ಯವು ಮೌಖಿಕ ಪರಂಪರೆಯ ಮೂಲಕ ತಲೆಮಾರುಗಳಿಂದ ಜ್ಞಾನವನ್ನು ಹಸ್ತಾಂತರಿಸುತ್ತಾ ಬಂದಿದೆ. ಪಂಡಿತರ ಮನ್ನಣೆ ಬಯಸದೇ ಲೋಕಮಾನ್ಯವಾಗಿ ಇಂದಿಗೂ ಬದುಕಿದ ಸಜೀವ ಸಾಹಿತ್ಯವೆಂದರೆ ಜನಪದ ಸಾಹಿತ್ಯ ಎಂದರು.ಪ್ರಾಂಶುಪಾಲ ಡಾ. ಎ.ಕೆ. ಮಠ ಮಾತನಾಡಿ, ಜಗತ್ತಿನ ಬಗ್ಗೆ ಭಾರತೀಯರು ಕಟ್ಟಿಕೊಂಡ ಪರಿಕಲ್ಪನೆ ಅದ್ಭುತವಾದದ್ದು. ಭಾರತೀಯ ಜ್ಞಾನ ಪರಂಪರೆಯನ್ನು ನಾವು ಒಂದಲ್ಲ ಒಂದು ರೀತಿಯಲ್ಲಿ ಮಕ್ಕಳಿಗೆ ಬೋಧಿಸುತ್ತಾ ಬಂದಿದ್ದೇವೆ. ಬದಲಾದ ಶೈಕ್ಷಣಿಕ ನೀತಿಯಲ್ಲಿ ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರಕಿದ್ದು, ಇದರ ಬಗ್ಗೆ ಹೆಚ್ಚು ಯೋಚಿಸುವಂತಾಗಿದೆ ಎಂದರು.ವಿಚಾರಸಂಕಿರಣದಲ್ಲಿ ಪ್ರಾಚೀನ ಭಾರತದ ವೇದಗ್ರಂಥ, ತತ್ವಶಾಸ್ತ್ರಗಳ ವ್ಯಾಪ್ತಿ ಮತ್ತು ಪ್ರಾಮುಖ್ಯತೆ, ಸಾಂಪ್ರದಾಯಿಕ ಜ್ಞಾನ ಮತ್ತು ಪಾಶ್ಚಿಮಾತ್ಯ ಜ್ಞಾನದ ಅವಲೋಕನ, ಪ್ರಾಚೀನ ಭಾರತದ ಭಾಷಾ ಶಾಸ್ತ್ರ ಸಂಖ್ಯೆ ಮತ್ತು ಮಾಪನ, ಕಲೆ, ಕರಕುಶಲತೆ ಮತ್ತು ವ್ಯಾಪಾರ, ಪ್ರಾಚೀನ ಭಾರತದ ಗಣಿತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಭೌತಶಾಸ್ತ್ರಗಳ ಪರಿಚಯ ಮತ್ತು ಅವಲೋಕನ, ಪ್ರಾಚೀನ ಭಾರತದ ಖಗೋಳ ಶಾಸ್ತ್ರ, ಜೋತಿಷ್ಯ ಶಾಸ್ತ್ರ ಹಾಗೂ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಪ್ರಾಚೀನ ಭಾರತದ ನಗರ ಯೋಜನೆಗಳು ಮತ್ತು ವಾಸ್ತುಶಿಲ್ಪ, ಕೃಷಿ, ಸಾರ್ವಜನಿಕ ಆಡಳಿತ ವ್ಯವಸ್ಥೆ, ಪ್ರಾಚೀನ ಭಾರತದ ಆರೋಗ್ಯ, ಸ್ವಾಸ್ಥ್ಯ ಮತ್ತು ಮನೋವಿಜ್ಞಾನ, ಔಷಧ ಪದ್ಧತಿ ಹಾಗೂ ಸುಸ್ಥಿರ ಅಭಿವೃದ್ಧಿಯ ಗುರಿಗಳು ಮುಂತಾದ ವಿಷಯಗಳ ಕುರಿತಾದ ಪ್ರಬಂಧಗಳು ಮಂಡಿಸಲಾಯಿತು.ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣದ ಲೇಖನಗಳ ಸಂಕಲನ ಸುಜ್ಞಾನಂ ಕೃತಿ ಬಿಡುಗಡೆಗೊಳಿಸಲಾಯಿತು. ಈ ವೇಳೆ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಸ್ನೇಹಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ. ವೀಣಾ ಈ. ಸ್ವಾಗತಿಸಿದರು. ಪ್ರೊ. ಹರ್ಷ ನಿಲೂಗಲ್ ಪರಿಚಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೂಲಿಕಾರರ ಮಗಳು ಪಿಯುಸಿಯಲ್ಲಿ ಜಿಲ್ಲೆಗೆ ಮೂರನೇ ಟಾಪರ್
ಕದ್ರಿ ಕಂಬಳ ಜಂಕ್ಷನ್‌ ರಸ್ತೆ 1 ಕೋಟಿ ರು.ಗಳಲ್ಲಿ ಕಾಂಕ್ರಿಟ್‌ಗೆ ಶಿಲಾನ್ಯಾಸ