ಕೊಟ್ಟೂರು: ದೊಡ್ಡ ಮಳೆ ಸುರಿದಾಗಲೆಲ್ಲ ತಾಲೂಕಿನ ಮಲ್ಲನಾಯಕನಹಳ್ಳಿಯ ವಡ್ರ ಹಳ್ಳ ತುಂಬಿ ಕೊಟ್ಟೂರು-ಕೂಡ್ಲಿಗಿ ಮುಖ್ಯ ರಸ್ತೆ ಮೇಲೆ ವ್ಯಾಪಕವಾಗಿ ಹರಿದು ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ. ಇದರ ಪರಿಹಾರಕ್ಕೆ ಸೇತುವೆ ನಿರ್ಮಿಸುವ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಕೂಡಲೇ ಮುಂದಾಗಬೇಕೆಂದು ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ ನಾಯ್ಕ ಸೂಚಿಸಿದರು.
ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಶುಕ್ರವಾರದಿಂದ ಹಿಂಪಡೆಯಲಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ವೇಗದ ಸ್ಪರ್ಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವೆ. ಮುಂಬರುವ ದಿನಗಳಲ್ಲಿ ಪಟ್ಟಣದಲ್ಲಿ ಆಡಳಿತ ಸೌಧ ನಿರ್ಮಾಣ, ನೂತನ ಬಸ್ ನಿಲ್ದಾಣ, ಮತ್ತಿತರ ಕಾಮಗಾರಿಗಳ ಚಾಲನೆಗೆ ಭೂಮಿ ಪೂಜೆ ನೆರವೇರಿಸಲು ಮುಂದಾಗಲಿದ್ದೇನೆ ಎಂದರು.
ನೂತನ ಬಸ್ ನಿಲ್ದಾಣ ನಿರ್ಮಿಸುವ ಹಾಲಿ ಜಾಗ ಚಿಕ್ಕದಾಗಿದ್ದರೂ ಪಟ್ಟಣದ ಮಧ್ಯವರ್ತಿಯಲ್ಲಿದೆ. ವೃದ್ಧರು ಸೇರಿದಂತೆ ಮತ್ತಿತರರಿಗೆ ಸಮೀಪವಾಗಿರುವ ಕಾರಣಕ್ಕಾಗಿ ಆಧುನಿಕ ಸೌಲಭ್ಯವುಳ್ಳ ₹3.50 ಕೋಟಿ ಅನುದಾನದ ಬಸ್ ನಿಲ್ದಾಣ ನಿರ್ಮಿಸಲು ಈಗಾಗಲೇ ಟೆಂಡರ್ ಕರೆದಿದೆ. ಪಟ್ಟಣದ ಹೊರ ವಲಯದಲ್ಲಿ ಬಸ್ ಡಿಪೋ, ಮತ್ತೊಂದು ದೊಡ್ಡ ನಿಲ್ದಾಣ ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿದರು.ಲೋಕೋಪಯೋಗಿ ಇಲಾಖೆ ಎಇಇ ವೆಂಕಟರಮಣ, ಜೆಇ ದೊಡ್ಡಮನಿ ಕೊಟ್ರೇಶ್, ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್, ಮಹಾಂತೇಶ್, ಜೆಡಿಎಸ್ ಕ್ಷೇತ್ರ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಇದ್ದರು.