ಕನ್ನಡಪ್ರಭ ವಾರ್ತೆ ಇಂಡಿಸಾರಿಗೆ ಇಲಾಖೆಯಲ್ಲಿ ಹಲವಾರು ತೊಂದರೆಗಳ ಮಧ್ಯ, ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೇವೆ ನೀಡಿ ಇತರರಿಗೆ ಸ್ಫೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನೌಕರರು ತಮ್ಮ ನಿವೃತ್ತಿ ಜೀವನವನ್ನು ಸಮಾಜಮುಖಿ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಸ್ವಾರ್ಥಕ ಮಾಡಿಕೊಳ್ಳಬೇಕು ಎಂದು ಈಶಾನ್ಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗೀಯ ಸಂಚಾರಿ ನಿಯಂತ್ರಣಾಧಿಕಾರಿ ಡಿ.ಎ.ಬಿರಾದಾರ ಶುಭ ಹಾರೈಸಿ, ಸಲಹೆ ನೀಡಿದರು.
ಪಟ್ಟಣದ ಸಾರಿಗೆ ಘಟಕದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಚಾಲಕ, ನಿರ್ವಾಹಕ, ಸಾರಿಗೆ ನಿಯಂತ್ರಕ, ಮೆಕ್ಯಾನಿಕಲ್ ಹಾಗೂ ಕೆಎಂಪಿಎಲ್ ಬೋಧಕ ಸೇವಾ ನಿವೃತ್ತಿಯ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಸಾರ್ವಜನಿಕ ವಲಯದಲ್ಲಿ ಉತ್ತಮ ಸೇವೆ ಸಲ್ಲಿಸಿ, ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಿ, ಸಂಸ್ಥೆಗೆ ಲಾಭತರುವ ಕೆಲಸ ಮಾಡಿ ಈಗ ನಿವೃತ್ತಿ ಹೊಂದುತ್ತಿರುವ ಎಲ್ಲ ಸಿಬ್ಬಂದಿಗೆ ಅಭಿನಂದಿಸುವೆ. ಜೊತೆಗೆ ತಮ್ಮ ನಿವೃತ್ತಿ ಜೀವನ ಸುಖಕರವಾಗಿ ಸಾಗಲಿ ಎಂದು ಹಾರೈಸಿದರು.
ಇಂಡಿ ಘಟಕ ವ್ಯವಸ್ಥಾಪಕ ಬಿರಾದಾರ ಮಾತನಾಡಿ, ಇಡೀ ವೃತ್ತಿ ಜೀವನದಲ್ಲಿ ಒಂದು ಕೂಡ ಅಪಘಾತ ಮಾಡದ ಚಾಲಕ ನಿಂಗಪ್ಪ ಕವಲಗಿ ಅವರ ಸೇವೆ ಸಂಸ್ಥೆಗೆ ಸಹಾಯವಾಗಿದೆ ಎಂದು ಶ್ಲಾಘಿಸಿದ ಅವರು, ವೃತ್ತಿ ಜೀವನದಲ್ಲಿ ರಜೆ ಇದ್ದರೂ ಅದನ್ನು ಬಳಕೆ ಮಾಡಿಕೊಳ್ಳದೆ ರಜೆ ರಹಿತವಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ನಮ್ಮ ಸಂಸ್ಥೆಗೆ ನಿವೃತ್ತಿ ಹೊಂದಿದ ಎಲ್ಲ ಸಿಬ್ಬಂದಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.ನಿವೃತ್ತಿ ಹೊಂದಿದ ಸಿಬ್ಬಂದಿಗೆ ಇಲಾಖೆಯ ಅಧಿಕಾರಿಗಳು ವಿಶೇಷ ರೀತಿಯಲ್ಲಿ ಸನ್ಮಾನಿಸಿ ಬೀಳ್ಕೊಟ್ಟರು. ಇದೇ ವೇಳೆ ನಿವೃತ್ತಿ ಹೊಂದಿದ ಸಿಬ್ಬಂದಿ ಬಂಧು ಬಳಗದವರು ಆತ್ಮೀಯವಾಗಿ ಬಂದು ಹೂಗುಚ್ಚ, ಶಾಲು ಹದಿಸಿ ಸನ್ಮಾನಿಸಿದರು. ಕೆಎಸ್‌ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಯುನಿಯನ್ ವಿಜಯಪುರ ಹಾಗೂ ಇಂಡಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.