ವೈಕುಂಠ ಏಕಾದಶಿ: ವೆಂಕಟೇಶ್ವರನಿಗೆ ವಿಶೇಷ ಅಲಂಕಾರ, ಪೂಜೆ

KannadaprabhaNewsNetwork | Published : Dec 24, 2023 1:45 AM

ಸಾರಾಂಶ

ವೈಕುಂಠ ಏಕಾದಶಿ ಹಿನ್ನೆಲೆ ರಾಯಚೂರಿನ ವಿವಿಧೆಡೆ ವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು, ಹೋಬಳಿ ಹಾಗೂ ಗ್ರಾಮೀಣ ಭಾಗದಲ್ಲಿ ವೈಕುಂಠ ಏಕಾದಶಿಯನ್ನು ಅತ್ಯಂತ ಶ್ರದ್ಧಾ-ಭಕ್ತಿಯೊಂದಿಗೆ ಸಂಭ್ರಮದಿಂದ ಶನಿವಾರ ಆಚರಿಸಲಾಯಿತು.

ಜಿಲ್ಲೆಯಲ್ಲಿರುವ ಎಲ್ಲ ವೆಂಕಟೇಶ್ವರ, ಗೋವಿಂದ, ಶ್ರೀನಿವಾಸ ಹಾಗೂ ತಿಮ್ಮಪ್ಪನ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ನಿಮಿತ್ತ ಗುಡಿ-ಗೋಪುರ ಹಾಗೂ ದೇವರ ಮೂರ್ತಿಯ ಪುಷ್ಪ, ದೀಪಾಲಂಕಾರ ಮಾಡಲಾಗಿತ್ತು, ಶನಿವಾರ ಬೆಳಗ್ಗೆಯಿಂದಲೆಯೇ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ-ಪುನಸ್ಕಾರಗಳು ಜರುಗಿದವು.

ವೈಕುಂಠ ಏಕಾದಶಿಯ ವಿಶೇಷಗಳಲ್ಲೊಂದಾದ ವೈಕುಂಠ ದ್ವಾರದ ಮುಖಾಂತರ ದೇವರ ದರ್ಶನ ಪಡೆದ ಭಕ್ತರು ತಿಮ್ಮಪ್ಪನ ಕೃಪೆಗೆ ಪಾತ್ರರಾದರು.

ಮಂತ್ರಾಲಯ ಗ್ರಾಮದಲ್ಲಿರುವ ಶ್ರೀನಿವಾಸ ದೇವರ ದೇವಸ್ಥಾನಕ್ಕೆ ರಾಯರ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನೂತನವಾಗಿ ನಿರ್ಮಿಸಿದ ವೈಕುಂಠ ದ್ವಾರ ಉದ್ಘಾಟನೆಯನ್ನು ನೆರವೇರಿಸಿದರು. ವಿವಿಧ ಮಹಿಳಾ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ವೈಕುಂಠ ಏಕಾದಶಿ ನಿಮಿತ್ತ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ವಿಷ್ಣು ತೀರ್ಥಾಚಾರ್ಯ ಪರಂಪರೆಯ ಭಾವಿಸಮೀರ ವಾದಿರಾಜ ಮಠದ ಪೀಠಾಧಿಪತಿ ವಿಶ್ವವಲ್ಲಭ ತೀರ್ಥರು ಅಮೃತ ಹಸ್ತದಿಂದ ಶ್ರೀನಿವಾಸ ದೇವರಿಗೆ ಲಕ್ಷ ಪುಷ್ಪಾರ್ಚನೆಯನ್ನು ನಡೆಸಿಕೊಟ್ಟರು. ಉಡುಪಿಯ ಪೇಜಾವರ ಮಠಾಧೀಶರಾದ ವಿಶ್ವೇಶ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಪ್ರತಿಷ್ಠಾಪನೆಗೊಂಡ ಶ್ರೀ ಕೃಷ್ಣ್ಣ ದೇವಾಲಯಕ್ಕೆ ಭೇಟಿ ನೀಡಿ, ಕೃಷ್ಣನಿಗೆ ಮಹಾಮಂಗಳಾರತಿಯನ್ನು ಸಲ್ಲಿಸಿದರು. ನಂತರ ಅನುಗ್ರಹ ಸಂದೇಶವನ್ನು ನೀಡಿದರು.

ಸ್ಥಳೀಯ ಬ್ರೇಸ್ತವಾರಪೇಟೆ ಉಪ್ಪಾರವಾಡಿ ಶ್ರೀಲಕ್ಷ್ಮೀವೆಂಕಟೇಶ್ವರ ದೇವಸ್ಥಾನ, ಕೋದಂಡ ರಾಮದೇವರ ದೇವಸ್ಥಾನ, ಬೋಳಮಾನದೊಡ್ಡಿ ತಿಮ್ಮಪ್ಪ ಸ್ವಾಮಿ ಗುಡಿ,ನಗರೇಶ್ವರ ದೇವಸ್ಥಾನ, ಎನ್‌ಜಿಒ ಬಡಾವಣೆಯಲ್ಲಿರುವ ಶ್ರೀವೆಂಕಟೇಶ್ವರ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ನಿಮಿತ್ತ ಹಲವಾರು ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜೃಂಭಣೆಯಿಂದ ನಡೆದವು.

Share this article