ಸಡಗರ ಸಂಭ್ರಮದ ವೈಕುಂಠ ಏಕಾದಶಿ

KannadaprabhaNewsNetwork | Published : Dec 24, 2023 1:45 AM

ಸಾರಾಂಶ

ಇಲ್ಲಿಯ ರಾಯಪುರದ ಇಸ್ಕಾನ್‌ ಮಂದಿರದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಶನಿವಾರ ವೈಕುಂಠ ಏಕಾದಶಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಇಲ್ಲಿಯ ರಾಯಪುರದ ಇಸ್ಕಾನ್‌ ಮಂದಿರದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಶನಿವಾರ ವೈಕುಂಠ ಏಕಾದಶಿ ಆಚರಿಸಲಾಯಿತು.

ಬೆಳಗ್ಗೆ 4.30ಕ್ಕೆ ಶ್ರೀಕೃಷ್ಣ ಬಲರಾಮರಿಗೆ ಮಹಾ ಮಂಗಳಾರತಿ ಅರ್ಪಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಲ್ಲದೇ, ವೈಕುಂಠ ಏಕಾದಶಿ ಅಂಗವಾಗಿ ವಿಶೇಷವಾಗಿ ವೈಕುಂಠ ನಾರಾಯಣನ ಮಾದರಿಯಲ್ಲಿ ಮಂದಿರವನ್ನು ಅಲಂಕಾರಗೊಳಿಸಿದ ಶ್ರೀ ಕೃಷ್ಣನ ದರ್ಶನ ಪಡೆದರು. ದರ್ಶನಕ್ಕೆ ಬಂದ ಭಕ್ತರು, ಭಜನೆ ಹಾಗೂ ಕಿರ್ತನೆಗಳನ್ನು ಹಾಡುವ ಮೂಲಕ ಶ್ರೀ ಕೃಷ್ಣನನ್ನು ಸ್ಮರಿಸಿದರು.

ಏಕಾದಶಿ ನಿಮಿತ್ತ ಮಂದಿರ ಪ್ರವೇಶ ಸ್ಥಳದಲ್ಲಿ 15 ಅಡಿ ಎತ್ತರ ಹಾಗೂ 11ಅಡಿ ಅಗಲದ ಸ್ವರ್ಣ ವರ್ಣದ ಭವ್ಯವಾದ ವೈಕುಂಠ ದ್ವಾರ ಸ್ಥಾಪಿಸಲಾಗಿತ್ತು. ಇಸ್ಕಾನ್‌ ಹುಬ್ಬಳ್ಳಿ-ಧಾರವಾಡದ ಅಧ್ಯಕ್ಷ ರಾಜೀವ ಲೋಚನ ದಾಸ, ಸ್ವರ್ಣ ಗ್ರೂಪ್‌ ಚೇರಮನ್‌ ಡಾ. ಸಿಎಚ್‌.ವಿಎಸ್‌ವಿ. ಪ್ರಸಾದ, ಶ್ರೀನಿವಾಸ ಹಾಗೂ ಸತೀಶ್‌ ಶೆಟ್ಟಿ, ಗೋವಿಂದರಾಜ ಪೆರುಮಾಳ ಸಮ್ಮುಖದಲ್ಲಿ ದ್ವಾರವನ್ನು ತೆರೆಯಲಾಯಿತು. ಭಕ್ತರು ಈ ವೈಕುಂಠ ದ್ವಾರದ ಮೂಲಕ ಸಾಗಿ ಭಗವಂತನ ದರ್ಶನ ಪಡೆದರು.

ತಿರುಪತಿಯ ಬಾಲಾಜಿಯನ್ನು ಹೋಲುವಂತೆ ಮೂರ್ತಿಯನ್ನು ಆಭರಣ ಮತ್ತು ವರ್ಣರಂಜಿತ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಭಗವಂತನ ಒಂದು ಲಕ್ಷ ನಾಮಗಳ ಜಪ ಸೇವೆ ಇಡೀ ದಿನ ನೆರವೇರಿತು. ವಿಶೇಷ ಮಂಟಪದ ಮುಂದೆ ಸುಂದರವಾಗಿ ಅಲಂಕಾರದೊಂದಿಗೆ ಸ್ಥಾಪಿತಗೊಂಡ ಕಲಶಗಳಿಗೆ ಭಕ್ತರು ಪುಷ್ಪಾರ್ಚನೆ ಮಾಡಿದರು. ವಿಶ್ವ ಶಾಂತಿಗಾಗಿ, ಮಹೋನ್ನತವಾದ ವೆಂಕಟೇಶ್ವರನ ಹೋಮವನ್ನು ಮಾಡಲಾಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಅದ್ದೂರಿಯಾಗಿ ನಡೆದವು.

ಬಾಕ್ಸ್‌..

ವೈಕುಂಠ ಏಕಾದಶಿ ಅಂಗವಾಗಿ ಇಲ್ಲಿಯ ಅರವಿಂದನಗರ, ನೃಪತುಂಗ ಬೆಟ್ಟ, ಗೌಳಿಗಲ್ಲಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು. ಅಲ್ಲದೇ, ದೇವಸ್ಥಾನಗಳನ್ನು ವಿಶೇಷವಾಗಿ ಅಲಂಕಾರ ಮಾಡುವ ಜತೆಗೆ ವೈಕುಂಠ ಮಾದರಿಯಲ್ಲಿ ದೇವಸ್ಥಾನವನ್ನು ಸಿಂಗರಿಸುವುದು ಗಮನ ಸೆಳೆಯಿತು. ಅದರಂತೆ ಬೆಳಗ್ಗೆಯಿಂದ ಸಂಜೆಯವರೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು, ವಿಶೇಷವಾಗಿ ಅಲಂಕೃತಗೊಂಡ ವೆಂಕಟೇಶ್ವರನಿಗೆ ಪೂಜೆ ಸಲ್ಲಿಸಿದರು.

Share this article