ಕನ್ನಡಪ್ರಭ ವಾರ್ತೆ ಭದ್ರಾವತಿ
ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ, ಮುಜರಾಯಿ ಇಲಾಖೆಗೆ ಒಳಪಟ್ಟಿರುವ ವಂಕೀಪುರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ೪.೩೦ಕ್ಕೆ ಪ್ರಾಕಾರ ಉತ್ಸವ, ಪರಮಪದ ಮಹಾದ್ವಾರದ ಪೂಜೆ, ಶ್ರೀ ವೈಕುಂಠನಾಥನ ದರ್ಶನ ನಂತರ ಶ್ರೀ ಗೋದಾದೇವಿ ಅಮ್ಮನವರ ಉತ್ಸವದೊಂದಿಗೆ ವಿವಿಧ ಭಜನಾ ಮಂಡಳಿಯವರಿಂದ ನಗರ ಸಂಕೀರ್ತನೆ ಹಾಗೂ ಶ್ರೀ ಕೃಷ್ಣ ಗೆಳೆಯರ ಬಳಗದಿಂದ ಚಂಡೇವಾದ್ಯ ನಡೆಯಿತು.
ಮಧ್ಯಾಹ್ನ ಸುಡು ಬಿಸಿಲಿನಲ್ಲೂ ಭಕ್ತರು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದ್ದು, ಮತ್ತೊಂದೆಡೆ ಪಾಸ್ ಮೂಲಕ ವಿಶೇಷ ದರ್ಶನದ ವ್ಯವಸ್ಥೆಗೂ ಅವಕಾಶ ಕಲ್ಪಿಸಲಾಗಿತ್ತು. ಆದರೆ ಭಕ್ತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದ ಕಾರಣ ಪೊಲೀಸರು ಸರತಿಸಾಲು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು.ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಎಸ್. ರಂಗನಾಥಶರ್ಮ ಹಾಗೂ ಸಹಾಯಕ ಅರ್ಚಕ ಎಸ್. ಶ್ರೀನಿವಾಸನ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ. ರಮಾಕಾಂತ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಶ್ರೀ ತಿರುಮಲ ವೆಂಕಟೇಶ್ವರಸ್ವಾಮಿ ದೇವಸ್ಥಾನ: ನಗರಸಭೆ ವಾಡ್ ನಂ.೨ರ ವ್ಯಾಪ್ತಿಯ ಬಿ.ಎಚ್ ರಸ್ತೆ, ಲೋಯರ್ ಹುತ್ತಾ ಶ್ರೀ ತಿರುಮಲ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ವೈಭವಯುತವಾಗಿ ವೈಕುಂಠ ಏಕಾದಶಿ ಜರುಗಿತು.
ದೇವಸ್ಥಾನ ಆಡಳಿತ ಮಂಡಳಿಯಿಂದ ಭಕ್ತರಿಗೆ ಲಡ್ಡು ಹಾಗೂ ಹಾಲು ಪ್ರಸಾದ ವಿತರಣೆ ವ್ಯವಸ್ಥೆ ಕೈಗೊಳ್ಳಲಾಗಿತ್ತು. ವೈಕುಂಠ ಏಕಾದಶಿ ಹಿನ್ನಲೆಯಲ್ಲಿ ಕೈಗೊಳ್ಳಲಾಗಿದ್ದ ವೈಭವಯುತ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು.