ಸಾಂಸ್ಕೃತಿಕ ನಗರಿಯಲ್ಲಿ ವೈಕುಂಠ ಏಕಾದಶಿ ಆಚರಣೆ

KannadaprabhaNewsNetwork |  
Published : Jan 11, 2025, 12:47 AM IST
12 | Kannada Prabha

ಸಾರಾಂಶ

ವಿಷ್ಣು ತನ್ನ ಅವತಾರ ಸಮಾಪ್ತಿಗೊಳಿಸಿ ವೈಕುಂಠಕ್ಕೆ ಹೋಗುವ ದಿನವನ್ನು ವೈಕುಂಠ ಏಕಾದಶಿಯಾಗಿ ಆಚರಿಸಲಾಗುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರು

ಸಾಂಸ್ಕೃತಿಕ ನಗರಿಯಲ್ಲಿ ವೈಕುಂಠ ಏಕಾದಶಿಯನ್ನು ಶುಕ್ರವಾರ ಭಕ್ತಾದಿಗಳು ಭಕ್ತಿಭಾವದಿಂದ ಆಚರಿಸಿದರು. ನಗರದ ವಿವಿಧ ದೇವಸ್ಥಾನಗಳಲ್ಲಿ ಭಕ್ತಾದಿಗಳ ದಂಡು ನೆರೆದಿತ್ತು.

ವೈಕುಂಠ ಏಕಾದಶಿ ಪ್ರಯುಕ್ತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ಭಕ್ತರು ದೇವಾಲಯಕ್ಕೆ ತೆರಳಿ ವೈಕುಂಠ ದ್ವಾರ ಪ್ರವೇಶಿಸಿ, ಪೂಜೆ ಸಲ್ಲಿಸುವ ಮೂಲಕ ಭಕ್ತಿಭಾವ ಮೆರೆದರು.

ವಿಷ್ಣು ತನ್ನ ಅವತಾರ ಸಮಾಪ್ತಿಗೊಳಿಸಿ ವೈಕುಂಠಕ್ಕೆ ಹೋಗುವ ದಿನವನ್ನು ವೈಕುಂಠ ಏಕಾದಶಿಯಾಗಿ ಆಚರಿಸಲಾಗುತ್ತದೆ. ವೈಕುಂಠ ಏಕಾದಶಿಯಂದು ನಾರಾಯಣನ ದರ್ಶನ ಪಡೆದು, ವೈಕುಂಠ ದ್ವಾರದ ಮೂಲಕ ಹೊರಬಂದರೆ ಸ್ವರ್ಗ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಆಸ್ತಿಕರದು.

ನಗರದ ಒಂಟಿಕೊಪ್ಪಲಿನ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನ, ಇಸ್ಕಾನ್ ದೇವಸ್ಥಾನ, ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ನಗರದ ವಿವಿಧ ದೇವಸ್ಥಾವಗಳಲ್ಲಿ ಹೂಗಳಿಂದ ಸ್ವರ್ಗದ ಬಾಗಿಲು ನಿರ್ಮಿಸಲಾಗಿತ್ತು. ಭಕ್ತರು ಸ್ವರ್ಗದ ಬಾಗಿಲ ಮೂಲಕ ದೇವರ ದರ್ಶನ ಪಡೆದರು.

ಒಂಟಿಕೊಪ್ಪಲಿನ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ವಿವಿಧ ಪೂಜಾ ನಡೆದವು. ಮಹಾ ಮಂಗಳಾರತಿ, ಉತ್ಸವ ಮೂರ್ತಿ ಮೆರವಣಿಗೆ ಮೂಲಕ ಸ್ವರ್ಗದ ಬಾಗಿ ತೆರೆಯಲಾಯಿತು. ದೇವರಿಗೆ ವಿಶೇಷ ಅಲಂಕಾರ ಮಾಡಿ ಭಕ್ತರಿಗೆ ಮುಂಜಾನೆ 5.30 ರಿಂದಲೇ ಪ್ರವೇಶಾವಕಾಶ ಕಲ್ಪಿಸಲಾಯಿತು. ಸಾವಿರಾರು ಭಕ್ತರು ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಬೆಳಗ್ಗೆಯಿಂದ ರಾತ್ರಿವರೆಗೂ ಪ್ರಸಾದ ವಿತರಿಸಲಾಯಿತು.

ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ವೈಕುಂಠ ದ್ವಾರ ಪ್ರವೇಶ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ವಿಶೇಷ ಅಲಂಕಾರದೊಂದಿಗೆ ಯೋಗಾನರಸಿಂಹಸ್ವಾಮಿ ಕಂಗೊಳಿಸಿತು. ದೇವಸ್ಥಾನ ಸಂಸ್ಥಾಪಕ ಪ್ರೊ. ಭಾಷ್ಯಂಸ್ವಾಮಿ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.

ಜಯನಗರದ ಇಸ್ಕಾನ್ ದೇವಸ್ಥಾನದಲ್ಲಿ ನಿರ್ಮಿಸಿದ್ದ ವಿಶಿಷ್ಟವಾದ ವೈಕುಂಠ ದ್ವಾರವನ್ನು ಮುಂಜಾನೆಯೇ ತೆರೆಯಲಾಯಿತು. ಬಳಿಕ ವಿಶೇಷ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಿಕೊಡಲಾಯಿತು. ದೇವಸ್ಥಾನದಲ್ಲಿ ನಿರ್ಮಿಸಿದ್ದ ವಿಶಿಷ್ಟ ವೈಕುಂಠ ದ್ವಾರದ ಮೂಲಕ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಬೆಳಗ್ಗೆ 6.30ಕ್ಕೆ ವೈಕುಂಠ ದ್ವಾರ ಪೂಜೆ ಮಾಡಲಾಯಿತು. ಬಳಿಕ ಶೃಂಗಾರ ಆರತಿ ನಡೆಯಿತು. ನಂತರ ಕೃಷ್ಣ-ಬಲರಾಮರ ಪಲ್ಲಕ್ಕಿ ಉತ್ಸವ ನಡೆಯಿತು. ಭಕ್ತರಿಗೆ 7.30 ರಿಂದ ರಾತ್ರಿ 10 ಗಂಟೆಯವರೆಗೆ ವೈಕುಂಠ ದ್ವಾರ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಜೊತೆಗೆ ವಿವಿಧ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಕಲ್ಯಾಣಗಿರಿ ಡಾ. ರಾಜ್ ಕುಮಾರ್ ರಸ್ತೆಯಲ್ಲಿರುವ ಕಲ್ಯಾಣ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು.

ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿಗೆ ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. ದೇವಾಲಯದಲ್ಲಿ ನಿರ್ಮಿಸಿದ್ದ ವಿಶೇಷ ಉತ್ತರ ದ್ವಾರದ ಮೂಲಕ ಸಹಸ್ರಾರು ಭಕ್ತರು ಸ್ವಾಮಿಯ ದರ್ಶನ ಪಡೆದರು.

ಅಲ್ಲದೆ, ವಿವಿಧೆಡೆ ವೈಕುಂಠ ಏಕಾದಶಿ ಆಚರಿಸಲಾಯಿತು. ಮುಂಜಾನೆಯಿಂದಲೇ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಪೊಲೀಸರು ಭದ್ರತೆ ಕೈಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!