ಜೋಶಿ-ಲಾಡ್‌ ನಡುವೆ ವಾಕ್ಸಮರ

KannadaprabhaNewsNetwork | Published : Apr 7, 2024 1:45 AM

ಸಾರಾಂಶ

ನಿಗದಿಯಲ್ಲಿ ನಡೆದ ಪ್ರಚಾರ ಭಾಷಣದಲ್ಲಿ ಪ್ರಹ್ಲಾದ ಜೋಶಿ ಸಚಿವ ಲಾಡ್‌ ವಿರುದ್ಧ ಗುಡುಗಿದ್ದರು. ಅದಕ್ಕೆ ಪ್ರತಿಯಾಗಿ ಸಚಿವ ಸಂತೋಷ ಲಾಡ್‌ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಪ್ರಹ್ಲಾದ ಜೋಶಿ ವಿರುದ್ಧ ಮಾತಿನ ಬಾಣಗಳನ್ನು ಬಿಟ್ಟಿದ್ದಾರೆ.

ಧಾರವಾಡ:

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್‌ ಮಧ್ಯೆ ಪರಸ್ಪರ ವಾಕ್ಸಮರ ನಡೆಯುತ್ತಿದೆ. ಪ್ರಚಾರ ಸಭೆ ಹಾಗೂ ಮಾಧ್ಯಮಗಳ ಮೂಲಕ ಇಬ್ಬರೂ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

ಶುಕ್ರವಾರ ರಾತ್ರಿ ಸಮೀಪದ ನಿಗದಿಯಲ್ಲಿ ನಡೆದ ಪ್ರಚಾರ ಭಾಷಣದಲ್ಲಿ ಪ್ರಹ್ಲಾದ ಜೋಶಿ ಸಚಿವ ಲಾಡ್‌ ವಿರುದ್ಧ ಗುಡುಗಿದ್ದರು. ಅದಕ್ಕೆ ಪ್ರತಿಯಾಗಿ ಸಚಿವ ಸಂತೋಷ ಲಾಡ್‌ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಪ್ರಹ್ಲಾದ ಜೋಶಿ ವಿರುದ್ಧ ಮಾತಿನ ಬಾಣಗಳನ್ನು ಬಿಟ್ಟಿದ್ದಾರೆ.

ಜೋಶಿ ಹೇಳಿದ್ದಿಷ್ಟು..

ನಿಮ್ಮ ಮಕ್ಕಳು ರಾಹುಲ್ ಗಾಂಧಿ ತರಹ ಆಗಬೇಕಾ ಅಥವಾ ನರೇಂದ್ರ ಮೋದಿ ತರಹ ಆಗಬೇಕಾ? ಪ್ರಮಾಣ ಮಾಡಿ ಹೇಳಿ ನೋಡೋಣಾ? ಎಂದು ಪ್ರಹ್ಲಾದ ಜೋಶಿ ಅವರು ಲಾಡ್‌ ಅವರನ್ನು ಪ್ರಶ್ನಿಸಿದ್ದಾರೆ.

ದಿನ ಬೆಳಗಾದರೆ ಲಾಡ್‌ ಅವರು ಮೋದಿ ಅವರನ್ನು ಬೈಯುತ್ತಿದ್ದಾರೆ. ಮೋದಿ ಹಾಗೂ ನನ್ನನ್ನು ನಿತ್ಯ ಬೈದರೆ ಮಾತ್ರ ಮಂತ್ರಿ ಸ್ಥಾನದಲ್ಲಿಡುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿರಬೇಕು. ಎಲ್ಲಿಯ ಸಂತೋಷ ಲಾಡ್? ಎಲ್ಲಿಯ ನರೇಂದ್ರ ಮೋದಿ? ಎಂದ ಜೋಶಿ ಅವರು, ನಮ್ಮದು ಅಬ್ ಕೀ ಬಾರ್ ಚಾ‌ರ್‌ ಸೋ ಫಾರ್ ಆಗಲಿದೆ ಎಂಬುದು ಸ್ಪಷ್ಟ. ಚುನಾವಣೆ ನಂತರ ನಾವು ಗೆಲವು ಸಾಧಿಸಿದ ನಂತರ ಸಂಸದರೆಲ್ಲರೂ ಸೇರಿ ಅಧಿಕೃತ ಪ್ರಧಾನಿಯನ್ನು ಆಯ್ಕೆ ಮಾಡುತ್ತೇವೆ. ಕಾಂಗ್ರೆಸ್ ಹೊರತುಪಡಿಸಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಲಿದ್ದಾರೆ ಎಂಬ ಹೆಮ್ಮೆ ನಮಗಿದೆ. ನಾವು ಮೋದಿ ಪರವಾಗಿಯೇ ಮತ ಹಾಕಿ ಅವರನ್ನು ಮತ್ತೆ ಪ್ರಧಾನಿ ಮಾಡುತ್ತೇವೆ. ಆದರೆ, ಕಾಂಗ್ರೆಸ್ ಮುಖ್ಯಸ್ಥ ಯಾರು? ಎಂದು ಜೋಶಿ ಪ್ರಶ್ನಿಸಿದ್ದಾರೆ.

ನಿಮ್ಮ ಲೀಡರ್‌ ಯಾರು?

ಲಾಡ್‌ ಅವರೇ, ತಾವು ಜಿಗಿ-ಜಿಗಿದು ಮಾತನಾಡುತ್ತಿದ್ದೀರಿ. ನಿಮ್ಮ ಲೀಡರ್ ಯಾರು ಹೇಳಿ? ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ನಾಯಕ. ನಿಮ್ಮ ಯೋಗ್ಯತೆಗೆ ದೇಶದಲ್ಲಿ 40 ಸ್ಥಾನ ಗೆಲ್ಲಲು ಆಗೋದಿಲ್ಲ. ಅಣ್ಣಾ ಹಜಾರೆ ಗಾಂಧಿ ವಾದಿ, ಮದ್ಯದ ವಿರೋಧಿ. ಆದರೆ, ಅವರ ಅನುಯಾಯಿ ಮದ್ಯ ಜಾಸ್ತಿ ಮಾರಲು ಹೋಗಿ ಜೈಲು ಸೇರಿದ್ದಾರೆ. ಅರವಿಂದ ಕೇಜ್ರಿವಾಲ್ ಪಂಜಾಬದಲ್ಲಿ ನಿಮ್ಮ ಜತೆ ಬರುವುದಿಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ-ಡಿಕೆಶಿ ಮಧ್ಯೆ ತಾಳಮೇಳವೇ ಇಲ್ಲ. ಬೇಂದ್ರೆ ಅವರು ಹೇಳಿದಂತೆ ತಾಳ, ತಂತಿ ‌ಇಲ್ಲದೇ ಕುಣಿಯೋಕೆ ಹೊರಟಿದ್ದಾರೆ ಎಂದು ಜೋಶಿ ಟೀಕಿಸಿದ್ದಾರೆ.

ಕಾಂಗ್ರೆಸ್‌ ಆಡಳಿತದಲ್ಲಿ ಚಿನ್ನವನ್ನು ಒತ್ತೆ ಇಡುವ ಹಂತಕ್ಕೆ ದೇಶವನ್ನು ತಂದಿದಿಟ್ಟಿತ್ತು. ದೇಶದ ಐದು ದುರ್ಬಲ ರಾಷ್ಟ್ರಗಳಲ್ಲಿ ಭಾರತವೂ ಇತ್ತು. ಆದರೆ, ಕಳೆದ ಹತ್ತು ವರ್ಷದಲ್ಲಿ ಆರ್ಥಿಕತೆ ಬೆಳೆಸಿದ್ದೇವೆ. ಜಗತ್ತಿನ ಐದು ಆರ್ಥಿಕ ಸದೃಢ ರಾಷ್ಟ್ರಗಳಲ್ಲಿ ಭಾರತ ಸೇರಿದೆ. ಈಗ ಜಗತ್ತಿನಲ್ಲಿ ಭಾರತ 5ನೇ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ. ಮೋದಿಯ ಮೊದಲ ಐದು ವರ್ಷಗಳು ಕಾಂಗ್ರೆಸ್ ಹೊಲಸನ್ನು ಸ್ವಚ್ಛಗೊಳಿಸಲು ಸಮಯ ಹಿಡಿದಿದೆ. ಬರುವ 10-15 ವರ್ಷದಲ್ಲಿ ಸಂಪೂರ್ಣ ಬಡತನ ನಿರ್ಮೂಲನೆ ಮಾಡುತ್ತೇವೆ. ರಾಮನನ್ನು ಬಹಿಷ್ಕಾರ ಹಾಕಿದ ಪಕ್ಷಕ್ಕೆ ಮತ ಹಾಕ್ತೀರಾ? ಎಂದು ಜೋಶಿ ಜನರನ್ನು ಪ್ರಶ್ನಿಸಿದ್ದರು. ಲಾಡ್‌ ಪ್ರತಿಕ್ರಿಯೆ..

ಇದಕ್ಕೆ ಪ್ರತಿಯಾಗಿ ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರತಿಕ್ರಿಯೆ ನೀಡಿದ್ದು, ನಾಲ್ಕು ಬಾರಿ, ಎರಡು ದಶಕಗಳ ಕಾಲ ಸಂಸದರಾಗಿ, ಕೇಂದ್ರ ಸಚಿವರಾಗಿ ಜೋಶಿ ಅವರು ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು? ಮೋದಿ ಹಾಗೂ ತಮ್ಮನ್ನು ಬೈಯಲು ಮುಖ್ಯಮಂತ್ರಿಗಳು ಇಟ್ಟಿದ್ದಾರೆ ಎಂದಿದ್ದು, ಹಾಗಾದರೆ ತಮ್ಮನ್ನು ಮೋದಿ ಸುಳ್ಳು ಹೇಳಲು ಇಟ್ಟಿದ್ದಾರೆಯೇ? ಎಂದು ಲಾಡ್‌ ಪ್ರಶ್ನಿಸಿದರು.

ವಿಶ್ವದಲ್ಲಿ ಸುಳ್ಳು ಹೇಳುವ ಪಕ್ಷ ಬಿಜೆಪಿ. ಅದರಲ್ಲಿ ಮೊದಲ ಸ್ಥಾನ ಪ್ರಹ್ಲಾದ ಜೋಶಿ ಅವರಿಗೆ ಸಲ್ಲಬೇಕು. ಪದೇ ಪದೇ ಜೋಶಿಯವರೇ ಸುಳ್ಳು ಹೇಳಬೇಡಿ. ಅಭಿವೃದ್ಧಿ ವಿಷಯದಲ್ಲಿ ಬನ್ನಿ ಮಾತನಾಡೋಣ. ನೀವು ಹಿರಿಯ ನಾಯಕರು. ನಿಮ್ಮ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ ಎಂದಿರುವ ಲಾಡ್‌, ಸಾಮಾನ್ಯ ವಸ್ತುಗಳ ದರ ಏರಿಕೆಯಾಗಿದೆ. ಅದರ ಬಗ್ಗೆ ನಾವು ಯಾರನ್ನು ಪ್ರಶ್ನಿಸಬೇಕು? ರೂಪಾಯಿ ಮೌಲ್ಯ ಕುಸಿದಿದೆ. ಇದರ ಬಗ್ಗೆ ಉತ್ತರ ಕೊಡುವವರು ಯಾರು? ಎಂದು ಪ್ರಶ್ನಿಸಿದರು.

ಎಲೆಕ್ಟ್ರೋಲ್ ಬಾಂಡ್ ಬಗ್ಗೆ ಉತ್ತರ ಕೊಡುವವರಾರು? ಇತಿಹಾಸದ ಮಾಹಿತಿವುಳ್ಳ ಉತ್ತಮ ವಾಗ್ಮಿಗಳು ನೀವು. ದೇಶದ ಸಮಸ್ಯೆಗಳ ಬಗ್ಗೆ ಏತಕ್ಕೆ ಉತ್ತರ ಕೊಡುವುದಿಲ್ಲ. ಬಿಎಸ್‌ಎನ್ನೆಲ್‌ ಏತಕ್ಕೆ 4ಜಿ ಲೈಸೆನ್ಸ್ ಕೊಡಲಿಲ್ಲ. 4ಜಿ ಬಂದಾಗ ಜಿಯೋ ನಂ.1 ಆಗಿದೆ. ಬಿ‌ಎಸ್‌ಎನ್ಎಲ್‌. ನಂ. 1 ಆಗಲಿಲ್ಲ ಏಕೆ? ನಾನು ಏನೇ ಮಾಡಿದರೂ ದೊಡ್ಡದಾಗಿ ಮಾಡುವೆ ಎಂದು ಮೋದಿ ಹೇಳುತ್ತಾರೆ. ಬಿಎಸ್‌ನ್ನೆಲ್‌ ಏನಾಯ್ತು? ರಫೇಲ್ ಏನಾಯ್ತು? ಅನಿಲ ಅಂಬಾನಿ ಕಂಪನಿ ಒಂದು ಸೈಕಲ್ ತಯಾರಿಸಿಲ್ಲ. ಅದು ಒಂದೇಟಿಗೆ ಹೆಲಿಕ್ಯಾಪ್ಟರ್ ತಯಾರಿಸಬಹುದಾ? ಇದೆಲ್ಲದರ ಬಗ್ಗೆ ತಾವೇಕೆ ಮಾತನಾಡುವುದಿಲ್ಲ. ಮೋದಿ ಅವರನ್ನು ಟೀಕಿಸುತ್ತೇನೆ ಅಂತೀರಲ್ಲ. ಇಂತಹ ಪ್ರಶ್ನೆಗಳನ್ನು ಕೇಳಬಾರದೇ? ಕಳೆದ 10 ವರ್ಷದಲ್ಲಿ ₹ 1.20 ಲಕ್ಷ ಕೋಟಿ ಸಾಲ ಜಾಸ್ತಿಯಾಗಿದೆ. ಇದರ ಬಗ್ಗೆ ಜೋಶಿ ಉತ್ತರ ಕೊಡಲಿ ಎಂದರು.

ಲಾಡ್ ಮಕ್ಕಳು ಏನಾಗಬೇಕೆಂಬ ಜೋಶಿ ಪ್ರಶ್ನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಲಾಡ್‌, ನನ್ನ ಮಕ್ಕಳು ರಾಹುಲ್ ಗಾಂಧಿ ತರಹ ಆಗಬೇಕು. ಇದನ್ನು ನಾನು ಹೆಮ್ಮೆಯಿಂದ ಹೇಳುತ್ತೇನೆ. ಮೋದಿಯಂತೆ ಸುಳ್ಳು ಹೇಳುವವರಾಗಬಾರದು. ಮೋದಿ ಪ್ರಬುದ್ಧರಾಗಿದ್ದರೆ ಒಂದು ಸುದ್ದಿಗೋಷ್ಠಿ ಮಾಡಲಿ. ರಾಹುಲ್ ಗಾಂಧಿ ಟಿವಿ ಸಂದರ್ಶನಕ್ಕೆ ಸದಾ ಕಾಲ ಲಭ್ಯ ಇದ್ದಾರೆ. ಮೋದಿ ಏಕೆ ಸಂದರ್ಶನಕ್ಕೆ ಬರುವುದಿಲ್ಲ? ಹಿಂದೂ-ಮುಸ್ಲಿಂ, ಪಾಕಿಸ್ತಾನ ಬಿಟ್ಟರೆ ಬೇರೆ ಮಾತನಾಡುವುದಿಲ್ಲ. ನರೇಂದ್ರ ಮೋದಿ ಸಾವಿರಾರೂ ಸುಳ್ಳು ಹೇಳಿದ್ದಾರೆ. ಈ ಬಗ್ಗೆ ನಾನು ಚರ್ಚೆಗೆ ಸಿದ್ಧ. ಜೋಶಿ ಚರ್ಚೆಗೆ ಬರ್ತಾರಾ? ಎಂದರು.

Share this article