ಹುಬ್ಬಳ್ಳಿ:
ವ್ಯಾಲೆಂಟೈನ್ಸ್ ಡೇ ಹಿನ್ನೆಲೆಯಲ್ಲಿ ನಗರದ ಕೆಲ ಉದ್ಯಾನವನಗಳು ಬಂದ್ ಆಗಿದ್ದರೆ, ಕೆಲ ಉದ್ಯಾನವನ ಜೋಡಿಗಳಿಗೆ ನಿರಾಸೆಯನ್ನುಂಟು ಮಾಡಿತು.ಶುಕ್ರವಾರ ಪ್ರೇಮಿಗಳ ದಿನಾಚರಣೆ ಇದ್ದರೂ, ಇಲ್ಲಿಯ ಇಂದಿರಾ ಗಾಜಿನ ಮನೆ ಉದ್ಯಾನದಲ್ಲಿ ಜೋಡಿಗಳು ಇರಲಿಲ್ಲ. ಆದರೆ, ಕುಟುಂಬ ಅಥವಾ ಒಬ್ಬೊಬ್ಬರಿಗೆ ಹೋದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ, ಉಣಕಲ್ ಕೆರೆ ಉದ್ಯಾನ, ನೃಪತುಂಬ ಬೆಟ್ಟ, ತೋಳನಕರೆ ಉದ್ಯಾನ ಸೇರಿದಂತೆ ನಗರದ ಬಹುತೇಕ ಉದ್ಯಾನಗಳು ಬೀಗ ತೆರೆದಿರಲಿಲ್ಲ. ಇದರಿಂದ ಜೋಡಿಗಳು ಇಲ್ಲದೇ ಬೀಕೋ ಎನ್ನುತ್ತಿದ್ದವು. ಹೀಗಾಗಿ ಬಹುತೇಕ ಪ್ರೇಮಿಗಳು ಉದ್ಯಾನದತ್ತ ಸುಳಿಯಲಿಲ್ಲ. ಕೆಲ ಕಾಲೇಜು ವಿದ್ಯಾರ್ಥಿಗಳು ತಮ್ಮದೇ ಕಾಲೇಜು ಕ್ಯಾಂಟಿನ್ ಹಾಗೂ ಸುತ್ತ ಮುತ್ತಲಿನ ಹೊಟೇಲ್‌ನಲ್ಲಿ ಕುಳಿತು ವ್ಯಾಲೆಂಟೈನ್ಸ್ ಡೇ ಆಚರಣೆ ಮಾಡಿದರು. ಕೆಲವರು ಗ್ರೀಟಿಂಗ್‌ಗಳನ್ನು ನೀಡಿ ಪ್ರೇಮ ನಿವೇದನೆ ಮಾಡುವ ದೃಶ್ಯ ಅಲ್ಲಲ್ಲಿ ಕಂಡು ಬಂದಿತು.
ಪೊಲೀಸ್ ಬಿಗಿ ಪಹರೆ:ಇನ್ನೊಂದೆಡೆ ವ್ಯಾಲೆಂಟೈನ್ಸ್ ಡೇ ಹಿನ್ನೆಲೆಯಲ್ಲಿ ಉದ್ಯಾನಗಳ ಬಳಿ ಪೊಲೀಸ್ ಪಹರೆ ಹಾಕಲಾಗಿತ್ತು. ಇದರಿಂದ ಬೆದರಿದ ಜೋಡಿಗಳು, ಉದ್ಯಾನಗಳತ್ತ ಸುಳಿಯದೇ ನಗರದ ಹೊರವಲಯದತ್ತ ಪ್ರಯಾಣ ಬೆಳೆಸಿದ ಪ್ರಸಂಗಗಳು ಸಾಮಾನ್ಯವಾಗಿದ್ದವು. ಇನ್ನು ಕೆಲವೆಡೆ ಉದ್ಯಾನ ತೆರೆದಿದ್ದರೂ, ಕುಟುಂಬಸ್ಥರು, ಮಹಿಳೆಯರು ಮತ್ತು ಮಕ್ಕಳ ಪ್ರವೇಶಕ್ಕೆ ಮಾತ್ರ ಸೀಮಿತವಾಗಿತ್ತು ಎಂಬುದು ವಿಶೇಷ.
ಈ ಹಿಂದೆ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಪಾಶ್ಚಿಮಾತ್ಯ ಸಂಸ್ಕೃತಿಯಾದ ವ್ಯಾಲೆಂಟೈನ್ಸ್ ಡೇ ವಿರೋಧಿಸಿ ಉದ್ಯಾನಗಳಿಗೆ ನುಗ್ಗಿ ಜೋಡಿಗಳಿಗೆ ಕಿರಿಕಿರಿ ಜತೆಗೆ ದಾಂಗುಡಿ ಮಾಡುತ್ತಿದ್ದರು. ಈ ವಿಚಾರಗಳಿಂದಾಗಿ ಕಳೆದ ನಾಲ್ಕೈದು ವರ್ಷಗಳಿಂದ ಮುಂಜಾಗ್ರತಾ ಕ್ರಮವಾಗಿ ಉದ್ಯಾನಗಳನ್ನು ಬಂದ್ ಮಾಡುವ ಜತೆಗೆ ಬಿಗಿ ಪೊಲೀಸ್ ಪಹರೆ ಹಾಕುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಉದ್ಯಾನವನ ಸಿಬ್ಬಂದಿಯೊಬ್ಬರು.