ಕಣಿವೆ: ಶ್ರದ್ಧಾಭಕ್ತಿಯ ರಾಮಲಿಂಗೇಶ್ವರ ರಥೋತ್ಸವ

KannadaprabhaNewsNetwork |  
Published : Mar 28, 2026, 02:30 AM IST
ರಥೋತ್ಸವ ಸಂದರ್ಭ | Kannada Prabha

ಸಾರಾಂಶ

ಉತ್ತರ ಕೊಡಗಿನ ಪ್ರಮುಖ ಪುಣ್ಯ ಕ್ಷೇತ್ರವಾಗಿರುವ ಕುಶಾಲನಗರ ತಾಲೂಕಿನ ಕಣಿವೆಯ ಶ್ರೀರಾಮಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮ ರಥೋತ್ಸವ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಕುಶಾಲನಗರ: ಉತ್ತರ ಕೊಡಗಿನ ಪ್ರಮುಖ ಪುಣ್ಯ ಕ್ಷೇತ್ರವಾಗಿರುವ ಕುಶಾಲನಗರ ತಾಲೂಕಿನ ಕಣಿವೆಯ ಶ್ರೀರಾಮಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮ ರಥೋತ್ಸವ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.ರಾಮಲಿಂಗೇಶ್ವರ, ಅಗಸ್ತೇಶ್ವರ, ಗುಹೇಶ್ವರ, ಹರಿಹರೇಶ್ವರ ಲಕ್ಷ್ಮಣೇಶ್ವರ ಹಾಗು ಬಸವೇಶ್ವರ ಪಂಚ ಲಿಂಗಗಳ ಸನ್ನಿಧಿಯಲ್ಲಿ ಪೂರ್ವಾಭಿಮುಖವಾಗಿ ಹರಿದಿರುವ ಕಾವೇರಿ ನದಿಯ ದಂಡೆಯಲ್ಲಿ ಅಪಾರ ಭಕ್ತ ಸಮೂಹ ರಥೋತ್ಸವಕ್ಕೆ ಸಾಕ್ಷಿಯಾಯಿತು.

ಶ್ರೀ ರಾಮನು ಮರಳಿನಿಂದ ಪ್ರತಿಷ್ಠಾಪಿಸಿದನೆಂಬ ಇತಿಹಾಸ ಹಾಗೂ ಪ್ರತೀತಿ ಇರುವ ಸನ್ನಿಧಿಯಲ್ಲಿ ಬೆಂಗಳೂರಿನ ವೇದಬ್ರಹ್ಮ ನರಹರಿಶರ್ಮಾ ಹಾಗೂ ಕಣಿವೆ ರಾಮಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ ನೇತೃತ್ವದ ಪುರೋಹಿತರ ತಂಡ ಧಾರ್ಮಿಕ ವಿಧಿಗಳನ್ನು ಪೂರೈಸಿದರು.ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಇದಕ್ಕೂ ಮುನ್ನ ಪದ್ದತಿಯಂತೆ ನೆರೆಯ ಹೆಬ್ಬಾಲೆ ಗ್ರಾಮಸ್ಥರು ಅಂಚೆಯ ಮೂಲಕ ಕಾಶಿಯಿಂದ ತರಿಸಿದ್ದ ಪವಿತ್ರ ಗಂಗಾ ಜಲವನ್ನು ಅಲಂಕೃತ ಮಂಟಪದಲ್ಲಿಟ್ಟು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕಣಿವೆಯ ಶ್ರೀಕ್ಷೇತ್ರಕ್ಕೆ ತಂದು ದೇವರಿಗೆ ಪ್ರೋಕ್ಷಣೆಗೈದ ಬಳಿಕ ರಾಮಲಿಂಗೇಶ್ವರ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಇರಿಸಿ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು.

ನಂತರ ಸಂಜೆ ರಥವನ್ನು ಸ್ವಸ್ಥಾನಕ್ಕೆ ಎಳೆದು ತರಲಾಯಿತು.ರಥ ಸಾಗುವ ಮಾರ್ಗದುದ್ದಕ್ಕೂ ಭಕ್ತಾದಿಗಳಿಗೆ ಸ್ಥಳೀಯ ನಿವಾಸಿ ಗಳು ತಮ್ಮ ಮನೆಗಳ ಮುಂದೆ ಮಜ್ಜಿಗೆ, ಪಾನಕ, ಕೋಸಂಬರಿಗಳನ್ನು ನೀಡುವ ಮೂಲಕ ಭಕ್ತಿ ಭಾವ ಮೆರೆಯುತ್ತಿದ್ದುದು ಕಂಡು ಬಂತು. ಚೆಂಡೆ ವಾದ್ಯ, ವೀರಗಾಸೆ ನೃತ್ಯ ಹಾಗೂ ಮಂಗಳ ವಾದ್ಯ ರಥೋತ್ಸವದಲ್ಲಿ ವಿಶೇಷ ಮೆರುಗು ನೀಡಿದವು.ರಥೋತ್ಸವದ ಅಂಗವಾಗಿ ಕಣಿವೆಯ ಮುಖ್ಯ ರಸ್ತೆಯಲ್ಲಿ 3 ದಿನಗಳ ಕಾಲ ವಿವಿಧ ಮಳಿಗೆಗಳನ್ನೊಳಗೊಂಡ ಜಾತ್ರೆ ಆಯೋಜನೆಗೊಂಡಿದೆ.ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ರಾಮಚಂದ್ರ. ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್ ಕ್ರೈಂ ಎಸ್ಐ ಸ್ವಾಮಿ ಮತ್ತು ಸಿಬ್ಬಂದಿ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು.

ಕುಶಾಲನಗರ ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯದರ್ಶಿ ಕೆ.ಎಸ್.ಮಾಧವ, ಸಹಕಾರ್ಯದರ್ಶಿ ಕೆ ಎಲ್ ಮಹೇಶ್ ಕುಮಾರ್, ಉಪಾಧ್ಯಕ್ಷ ಕೆ ಕೆ ಮಂಜುನಾಥ ಸ್ವಾಮಿ, ಗೌರವ ಅಧ್ಯಕ್ಷ ಇ ಎಸ್ ಗಣೇಶ್, ನಿರ್ದೇಶಕರಾದ ಆರ್.ಆರ್. ಮಧು, ಕೆ.ಎಲ್.ಮಹೇಶಕುಮಾರ್, ಕೆ.ಎಂ.ರಾಕೇಶ್, ಟಿ.ಎಂ.ಕಾರ್ತಿಕ್, ಕೆ.ಸಿ.ನಂಜುಂಡಸ್ವಾಮಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರಿ ನಿರ್ಧಾರದಲ್ಲಿ ಸ್ಪಷ್ಟತೆ ಅಗತ್ಯ: ಡಾ.ಕುರಿಯನ್‌
ಬನ್ನಂಜೆ ಬ್ರಹ್ಮಕಲಶೋತ್ಸವ: ಚಪ್ಪರ ಮುಹೂರ್ತ ಸಂಪನ್ನ