ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯ ನಾಯಕ ಸಮುದಾಯದ 10 ವರ್ಷಗಳ ಬೇಡಿಕೆಯಾಗಿದ್ದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಶ್ರೀ ವಾಲ್ಮೀಕಿ ಪುತ್ಥಳಿ ನಿರ್ಮಾಣದ ಜೊತೆಗೆ ಶ್ರೀ ಭಗೀರಥ ಹಾಗೂ ಶ್ರೀ ಕನಕದಾಸರ ಪ್ರತಿಮೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿರುವುದಕ್ಕೆ ನಾಯಕ ಸಮುದಾಯ ಸರ್ಕಾರವನ್ನು ಅಭಿನಂದಿಸುತ್ತದೆ ಎಂದು ತಾಲೂಕು ನಾಯಕ ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ಪು.ಶ್ರೀನಿವಾಸನಾಯಕ ಹಾಗೂ ಕೇಂದ್ರ ಬರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಅ.೧೭ರಲ್ಲಿ ನಡೆದ ಸರ್ಕಾರಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಸಮುದಾಯ ಬಹಿಷ್ಕಾರ ಮಾಡಿ, ಪ್ರತ್ಯೇಕ ವಾಲ್ಮೀಕಿ ಜಯಂತಿ ಆಚರಣೆ ಮಾಡಿ, ಜಿಲ್ಲಾಡಳಿತ ಭವನದ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಸರ್ಕಾರ ಹಾಗೂ ಜಿಲ್ಲಾಡಳಿತ ಗಮನ ಸೆಳೆದು ೨ತಿಂಗಳ ಗಡುವಿನಲ್ಲಿ ಪುತ್ಥಳಿ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದೇವೆ. ನಮ್ಮ ಸಮುದಾಯದ ಒಗ್ಗಟ್ಟು ಪ್ರದರ್ಶನ ಹಾಗೂ ವಾಲ್ಮೀಕಿ ಪ್ರತಿಮೆ ನಿರ್ಮಾಣವಾಗಬೇಕೆಂಬ ನಮ್ಮ ಸಂಕಲ್ಪವನ್ನು ಸರ್ಕಾರ ಈಡೇರಿಸಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದ ಸದಸ್ಯರು ಜಿಲ್ಲೆಯ ಶಾಸಕರು ಹಾಗೂ ಸಂಸದರು ಜಿಲ್ಲಾಡಳಿತ ಭವನದಲ್ಲಿ ಮುಂಭಾಗ ಸೂಕ್ತ ಸ್ಥಳದಲ್ಲಿ ವಾಲ್ಮೀಕಿ ಸೇರಿದಂತೆ ಮೂವರು ಮಹಾಪುರುಷರ ಪ್ರತಿಮೆ ಸ್ಥಾಪಿಸಲು ನಿರ್ಣಯ ಮಾಡಿದೆ. ಪ್ರತಿಮೆ ನಿರ್ಮಾಣಕ್ಕೆ ತಲಾ ೫೦ ಲಕ್ಷ ರು. ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೇ ಸೂಕ್ತ ಮೂವರು ಮಹಾಪುರುಷರ ಪುತ್ಥಳಿಗಳು ನಿರ್ಮಾಣಕ್ಕೆ ಜಾಗ ನಿಗದಿಗೊಳಿಸಬೇಕು. ಎಲ್ಲಾ ಸಮುದಾಯದ ಮುಖಂಡರ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಂಡು ಪುತ್ಥಳಿ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ನಮ್ಮೆಲ್ಲರ ಪ್ರಯತ್ನಕ್ಕೆ ಫಲ ದೊರೆತಿದೆ. ಸದ್ಯದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಮೂವರು ಮಹಾಪುರುಷರ ಪುತ್ಥಳಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಪು.ಶ್ರೀನಿವಾಸ ನಾಯಕ ತಿಳಿಸಿದರು.10 ವರ್ಷಗಳ ನಿರಂತರ ಹೋರಾಟಕ್ಕೆ ಬೆಂಬಲವಾಗಿ ನಿಂತ ಜಿಲ್ಲೆಯ ಸಮಸ್ತ ನಾಯಕ ಸಮುದಾಯದ ಬಂಧುಗಳಿಗೆ ಹಾಗೂ ಸಹಕಾರ ನೀಡಿದ ಇತರೇ ಸಮುದಾಯವರಿಗೆ ನಾಯಕರ ಸಮಾಜ ಅಭಿನಂದನೆ ಸಲ್ಲುತ್ತದೆ. ಜೊತೆಗೆ ಈ ಮೂವರು ಪುತ್ಥಳಿಯನ್ನು ಜಿಲ್ಲಾಡಳಿತ ಬೇಗ ನಿರ್ಮಾಣ ಮಾಡಿ ಲೋಕಾರ್ಪಣೆಗೊಳಿಸಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಅಧ್ಯಕ್ಷ ಸುರೇಶ್, ಮಾಜಿ ಸದಸ್ಯ ಚೆಂಗುಮಣಿ, ಮುಖಂಡರಾದ ಕಂಡಕ್ಟರ್ ಸೋಮನಾಯಕ, ಸಿಂಗನಪುರ ಮಾದೇಶ್ ಇದ್ದರು.