ನಾಳೆಯಿಂದ ವಾಲ್ಮೀಕಿ ಜಾತ್ರೆ: ದೇವೇಂದ್ರಪ್ಪ ಮಾಹಿತಿ

KannadaprabhaNewsNetwork | Published : Feb 6, 2025 11:47 PM

ಸಾರಾಂಶ

ಹರಿಹರದ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಮತ್ತು 9ರಂದು ನಡೆಯಲಿರುವ ವಾಲ್ಮೀಕಿ ಜಾತ್ರೆಯ ವೈಚಾರಿಕ ಹಬ್ಬಕ್ಕೆ ಜನತೆ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಂದು ವಾಲ್ಮೀಕಿ ಜಾತ್ರೆ ಅಧ್ಯಕ್ಷ ಹಾಗೂ ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.

- ಹರಿಹರ ತಾಲೂಕು ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಆಯೋಜನೆ - - - ಕನ್ನಡಪ್ರಭ ವಾರ್ತೆ ಜಗಳೂರು

ಹರಿಹರದ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಮತ್ತು 9ರಂದು ನಡೆಯಲಿರುವ ವಾಲ್ಮೀಕಿ ಜಾತ್ರೆಯ ವೈಚಾರಿಕ ಹಬ್ಬಕ್ಕೆ ಜನತೆ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಂದು ವಾಲ್ಮೀಕಿ ಜಾತ್ರೆ ಅಧ್ಯಕ್ಷ ಹಾಗೂ ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಲಿ.ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿ ಅವರ 18ನೇ ವರ್ಷದ ಪುಣ್ಯಾರಾಧನೆ ಹಾಗೂ ಶ್ರೀ ಡಾ.ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ 17ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ವಾಲ್ಮೀಕಿ ಜಾತ್ರೆ ವಿಜೃಂಭಣೆಯಿಂದ ನೆರವೇರಲಿದೆ ಎಂದರು.

ವಾಲ್ಮೀಕಿ ಜಾತ್ರೆಗೆ ಸಮುದಾಯದ ಹಿರಿಯರು, ಮಠದ ಧರ್ಮದರ್ಶಿಗಳು, ನನ್ನನ್ನು ಸರ್ವಾನುಮತದಿಂದ ಅಧ್ಯಕ್ಷನನ್ನಾಗಿ ಆಯ್ಕೆಮಾಡಿರುವುದಕ್ಕೆ ಅಭಿನಂದನೆಗಳು. ಜಾತ್ರೆಯಲ್ಲಿ ರಿಮೋಟ್ ನಿಯಂತ್ರಿತ ರಥೋತ್ಸವ, ಮಹರ್ಷಿ ವಾಲ್ಮೀಕಿ ಜೀವನಾಧಾರಿತ ಫಲಪುಷ್ಪ ಪ್ರದರ್ಶನ ಮೇಳ, ಮಹರ್ಷಿ ವಾಲ್ಮೀಕಿನ ಭಾವಚಿತ್ರ ಭವ್ಯ ಮೆರವಣಿಗೆ ಸರ್ವಧರ್ಮ ಸಾಮೂಹಿಕ ವಿವಾಹ, ಉದ್ಯೋಗ ಮೇಳ, ವಿವಿಧ ಗೋಷ್ಠಿಗಳು, ಸಮುದಾಯದ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ನಡೆಸಲಾಗುತ್ತದೆ. ವಾಲ್ಮೀಕಿ ಸಮುದಾಯದ ನಿವೃತ್ತ ಮುಖ್ಯ ಪೊಲೀಸ್ ಅಧೀಕ್ಷಕ ಹರ್ತಿಕೋಟೆ ವೀರೇಂದ್ರ ಸಿಂಹಗೆ ಪ್ರಸ್ತುತ ಸಾಲಿನ ವಾಲ್ಮೀಕಿ ರತ್ನ ಪ್ರಶಸ್ತಿ, ಮಾಜಿ ಸಂಸದ ಚಲನಚಿತ್ರ ನಾಯಕನಟ ಶಶಿಕುಮಾರ್ ಅವರಿಗೆ ''''''''ಮದಕರಿ ನಾಯಕ ಪ್ರಶಸ್ತಿ'''''''' ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

2ನೇ ದಿನದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಎಲ್ಲ ಪಕ್ಷಗಳ ಶಾಸಕರು, ಸಂಸದರು, ಮುಖಂಡರನ್ನು ಶ್ರೀಗಳು ಖುದ್ದು ಆಹ್ವಾನಿಸಿದ್ದಾರೆ ಎಂದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನಸಂಖ್ಯೆ ಭಾಗವಹಿಸಲಿದ್ದಾರೆ. ಭಕ್ತಸಮೂಹಕ್ಕೆ ಸಾರಿಗೆ, ಆರೋಗ್ಯ, ಮೂಲಸೌಕರ್ಯ ಕಲ್ಪಿಸಲು ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಸಂವಿಧಾನಬದ್ದ ಹಕ್ಕುಗಳನ್ನು ಪಡೆಯಲು ಸಂಘಟಿತ ಹೋರಾಟ ರೂಪಿಸಲಾಗುವುದು. ವಾಲ್ಮೀಕಿ ಸಮುದಾಯ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮುಖ್ಯವಾಹಿನಿಗೆ ಬರಬೇಕಿದೆ. ಮುಂಬರುವ ದಿನಗಳಲ್ಲಿ ತರಳಬಾಳು ಹುಣ್ಣಿಮೆ ಮಾದರಿಯಲ್ಲಿ ವಾಲ್ಮೀಕಿ ಜಾತ್ರೆಯನ್ನು ರಾಜ್ಯದ ವಿವಿಧೆಡೆ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ವಾಲ್ಮೀಕಿ ಜಾತ್ರಾ ಮಹೋತ್ಸವದ ಸಂಚಾಲಕ ಶ್ರೀನಿವಾಸ್ ದಾಸಕರಿಯಪ್ಪ ಮಾತನಾಡಿ, ವಾಲ್ಮೀಕಿ ಜಾತ್ರೆ ಜನಜಾಗೃತಿಗಾಗಿ ನಡೆಸಲಾಗುತ್ತಿದ್ದು, ಕಳೆದ 5 ವರ್ಷಗಳಿಂದ ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳ ನೇತೃತ್ವದ ನಿರಂತರ ಹೊರಾಟದ ಫಲವಾಗಿ ಶೇ.3ರಿಂದ ಶೇ.7.5ಕ್ಕೆ ಎಸ್‌ಟಿ ಮೀಸಲಾತಿ ಹೆಚ್ಚಳವಾಗಿದೆ. ಇದರಿಂದ ಕಟ್ಟಕಡೆಯ ಕೂಲಿಕಾರ್ಮಿಕರ ಮಕ್ಕಳಿಗೂ ವೈದ್ಯಕೀಯ ಕೋರ್ಸ್ ಸೌಲಭ್ಯ ಲಭ್ಯವಾಗುತ್ತಿದೆ. ಜಗಳೂರು ತಾಲೂಕಿನ ಶಾಸಕ ಬಿ.ದೇವೇಂದ್ರಪ್ಪ ಅವರು ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.

ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಡಯ್ಯ, ವಕೀಲ ಸಂಘದ ತಾಲೂಕು ಅಧ್ಯಕ್ಷ ಬಸವರಾಜ್ ಮರೇನಹಳ್ಳಿ, ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಎಲ್. ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಲಿಂಗಣ್ಣನಹಳ್ಳಿ ಕೃಷ್ಣಮೂರ್ತಿ, ಸಣ್ಣಸೂರಜ್ಜ, ಸಾಹಿತಿ ಎನ್.ಟಿ. ಎರ್ರಿಸ್ವಾಮಿ, ಪುರುಷೋತ್ತಮ ನಾಯ್ಕ, ಬಿ.ಮಹೇಶ್ವರಪ್ಪ, ಗಿಡ್ಡನಕಟ್ಟೆ ಕಾಂತರಾಜ್, ಪಲ್ಲಾಗಟ್ಟೆ ಶೇಖರಪ್ಪ, ಬಿ.ಲೋಕೇಶ್, ರೇವಣ್ಣ, ಮರೇನಹಳ್ಳಿ, ನಾಗರಾಜ್ ಸೇರಿದಂತೆ ಇದ್ದರು.

- - - -5ಜೆ.ಎಲ್.ಆರ್.ಚಿತ್ರ1:

ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಾಲ್ಮೀಕಿ ಜಾತ್ರೆ ಅಂಗವಾಗಿ ಪೂರ್ವಭಾವಿ ಸಭೆಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು.

Share this article