ಬಳ್ಳಾರಿ: ವಾಲ್ಮೀಕಿ ಜಯಂತಿಯ ಬ್ಯಾನರ್‌ಗಳನ್ನು ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೈರ್ಮಲ್ಯ ವಿಭಾಗದ ಮೇಸ್ತ್ರಿ ಎ.ಶ್ರೀನಿವಾಸಲು ಎಂಬವರನ್ನು ಪಾಲಿಕೆ ಆಯುಕ್ತರು ಅಮಾನತುಗೊಳಿಸಿದ್ದಾರೆ.
ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ನಗರದ ವಿವಿಧ ವೃತ್ತಗಳಲ್ಲಿ ಹಾಕಲಾಗಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಆರೋಪಿಸಿ ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಪಾಲಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.
ಇಲ್ಲಿನ ಸಂಗಮ ವೃತ್ತ ಹಾಗೂ ಮಹಾನಗರ ಪಾಲಿಕೆ ಎದುರು ಜಮಾವಣೆಗೊಂಡ ವಾಲ್ಮೀಕಿ ಸಮಾಜದ ಮುಖಂಡರು ಬ್ಯಾನರ್ ತೆರವಿಗೆ ಆಕ್ರೋಶ ವ್ಯಕ್ತಪಡಿಸಿದರು.ಜಯಂತಿ ಅಂಗವಾಗಿ ಮಹಾನಗರ ಪಾಲಿಕೆಯ ಅನುಮತಿ ಪಡೆದು ನಗರದ ವಿವಿಧೆಡೆ ಅಳವಡಿಸಲಾಗಿದ್ದ 38 ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ. ಬೇರೆ ಜಯಂತಿಗಳಲ್ಲಿ ಹಾಕಿದ ಬ್ಯಾನರ್‌ಗಳನ್ನು ತೆರವುಗೊಳಿಸದ ಪಾಲಿಕೆ ಅಧಿಕಾರಿಗಳು, ವಾಲ್ಮೀಕಿ ಜಯಂತಿಯ ಬ್ಯಾನರ್‌ಗಳನ್ನು ಮಾತ್ರ ತೆರವುಗೊಳಿಸುವುದರ ಉದ್ದೇಶವೇನು ? ಬ್ಯಾನರ್ ಕಿತ್ತು ರಸ್ತೆಗೆ ಎಸೆದಿದ್ದಾರೆ. ಇದು ಮಹರ್ಷಿ ವಾಲ್ಮೀಕಿ ಹಾಗೂ ಇಡೀ ವಾಲ್ಮೀಕಿ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ಕಿಡಿಕಾರಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್, ಆಯುಕ್ತ ಪಿ.ಎಸ್.ಮಂಜುನಾಥ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಅವರು ಮನವೊಲಿಸಿದರಲ್ಲದೆ, ಬ್ಯಾನರ್ ತೆರವುಗೊಳಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು. ಹೋರಾಟವನ್ನು ಕೈ ಬಿಟ್ಟು ಸಹಕರಿಸಿ ಎಂದು ಮನವಿ ಮಾಡಿದರು.ಬಳಿಕ ಎಸ್ಪಿ ಕಚೇರಿಗೆ ತೆರಳಿದ ಸಮಾಜದ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಚರ್ಚಿಸಿದರು. ತೆರವುಗೊಳಿಸಿರುವ ಎಲ್ಲ ಬ್ಯಾನರ್‌ಗಳನ್ನು ಮತ್ತೆ ಅಳವಡಿಸಲು ಕ್ರಮ ವಹಿಸುತ್ತೇವೆ. ಸಮಾಜದ ಮುಖಂಡರ ಬೇಡಿಕೆಯಂತೆಯೇ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಎಸ್ಪಿ ಶೋಭಾರಾಣಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷ ತಿಮ್ಮಪ್ಪ ಜೋಳದರಾಶಿ, ಜಿಲ್ಲಾ ಪ್ರಮುಖ ಮುಖಂಡರಾದ ಬಿ.ಆರ್.ಎಲ್. ಸೀನಾ, ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ, ಹಿರಿಯ ವಕೀಲ ಪಿ.ಜಯರಾಮ್, ಜನಾರ್ದನ ನಾಯಕ, ಬಿ.ರುದ್ರಪ್ಪ, ಎನ್.ದುರುಗಪ್ಪ, ಯರಗುಡಿ ಮುದಿ ಮಲ್ಲಯ್ಯ, ಸತ್ಯನಾರಾಯಣ, ಕಾಯಿಪಲ್ಯೆ ಬಸವರಾಜ್, ರೂಪನಗುಡಿ ಗೋವಿಂದಪ್ಪ, ಮೆಡಿಕಲ್ ಮಲ್ಲಿಕಾರ್ಜುನ, ಪಾಲಿಕೆ ಸದಸ್ಯ ಹನುಮಂತಪ್ಪ, ರೂಪನಗುಡಿ ವೆಂಕಟೇಶ್, ವಿ.ಕೆ.ಬಸಪ್ಪ, ಚಂದ್ರಶೇಖರ ಜೋಳದರಾಶಿ, ಬಸರಕೋಡು ಗಾದಿಲಿಂಗಪ್ಪ, ಹುಲಿಗೇಶ್, ಹವಾಂಭಾವಿ ಲೋಕೇಶ್, ಚನ್ನಕೇಶವ, ಸಂಗನಕಲ್ಲು ವಿಜಯಕುಮಾರ್ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.