ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಕಲ್ಪಿಸುವಂತೆ ಕೇಂದ್ರಕ್ಕೆ ಒತ್ತಾಯಿಸಲು ಪ್ರಧಾನ ಮಂತ್ರಿಗಳ ಬಳಿ ರಾಜ್ಯದ ಎಲ್ಲಾ ಪಕ್ಷಗಳ ಜನ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗವನ್ನು ಕೊಂಡೊಯ್ಯುವ ಕೆಲಸ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಂದ ಆಗಬೇಕು ಎಂದರು.
ಬೆಳಗಾವಿ ಅಧಿವೇಶನದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಶೇ.7 ಮೀಸಲಾತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆದರೆ, ಅದು ಕೇವಲ ಸಭಾ ನಡಾವಳಿಗಳಲ್ಲಿ ಮಾಡಿದರಷ್ಟೇ ಸಾಲದು. ಶೇ.7 ಮೀಸಲಾತಿಯನ್ನು ಶಿಫಾರಸ್ಸು ಮಾಡಿ, ಕೇಂದ್ರಕ್ಕೆ ಕಳಿಸಬೇಕು. ಕೇಂದ್ರದ ಮೇಲೆ ಒತ್ತಡ ಹೇರಿ, ನಮ್ಮ ಸಮುದಾಯಕ್ಕೆ ಶೇ.7 ಮೀಸಲಾತಿ ಕಲ್ಪಿಸಿ ಕೊಡುವ ಕೆಲಸ ಸರ್ಕಾರ ಮಾಡಲಿ ಎಂದು ತಿಳಿಸಿದರು.ಆಯಾ ಸಮಾಜಗಳು ಬೇಡಿಕೆ ಇಡುವ ಮುಂಚೆಯೇ ಕೇಂದ್ರ, ರಾಜ್ಯ ಸರ್ಕಾರಗಳು ಅಂತಹ ಸಮುದಾಯಗಳ ಸ್ಥಿತಿಗತಿಯನ್ನು ಅರಿತು, ಮೀಸಲಾತಿ ಕಲ್ಪಿಸಬೇಕು. ಮೀಸಲಾತಿಯಡಿ ಯಾರೇ ಬರಿ, ಕೇಂದ್ರ-ರಾಜ್ಯ ಸರ್ಕಾರಗಳು ಯಾವುದೇ ಕಾರಣಕ್ಕೂ ಚೆಲ್ಲಾಟವಾಡಬಾರದು. ಸಂವಿಧಾನದ ಮೀಸಲಾತಿ ಎಲ್ಲರಿಗೂ ಹಕ್ಕು. ಅದು ಭಿಕ್ಷೆಯಲ್ಲ. ಹಾಗಾಗಿ ಸರ್ಕಾರಗಳು ಸಂವಿಧಾನದ ಮೀಸಲಾತಿಗೆ ತಕ್ಕಂತೆ ಸೌಲಭ್ಯ ಕಲ್ಪಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಸಭೆ ಕರೆಯಲಾಗಿದೆ. ಸಭೆಯಲ್ಲಿ ನಾಯಕ ಸಮಾಜಕ್ಕೆ ಶೇ.7 ಮೀಸಲಾತಿ, ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ಬೇರೆ ಕೆಲಸ, ಕಾರ್ಯಕ್ಕೆ ವರ್ಗಾವಣೆ ಮಾಡದಂತೆ, ಭ್ರಷ್ಟಾಚಾರ ಮಾಡಿದ ಯಾರೇ ಆಗಿದ್ದರೂ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ, ಕುಲಶಾಸ್ತ್ರೀಯ ಅಧ್ಯಯನದಂತೆ ಜಾತಿಗಳ ಸೇರ್ಪಡೆ ಸೇರಿದಂತೆ ಅನೇಕ ಮುಖ್ಯ ವಿಚಾರಗಳ ಬಗ್ಗೆ ಚರ್ಚಿಸಿ, ಸಮಾಜದ ನಿರ್ಧಾರ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಸುಳ್ಳು ಪ್ರಮಾಣಪತ್ರ, ಕಠಿಣ ಕ್ರಮಕ್ಕೆ ಒತ್ತಾಯ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಎಸ್‌ಟಿ ಸಮುದಾಯಗಳಿಗೆ ಕೈಗಾರಿಕೆ ಸ್ಥಾಪಿಸಲು ಕನಿಷ್ಟ 10 ಎಕರೆ ಭೂಮಿಯನ್ನು ಕೆಐಡಿಬಿ ಸ್ವಾಧೀನ ಪಡಿಸಿಕೊಂಡು, ಹಂಚಿಕೆ ಮಾಡಬೇಕು. ಕೈಗಾರಿಕೆಗಳನ್ನು ನಡೆಸಲು ಅಗತ್ಯ ಆರ್ಥಿಕ ನೆರವು, ಸಹಾಯವನ್ನು ಸರ್ಕಾರ ಒದಗಿಸಬೇಕು ಎಂದರು.