ವಾಲ್ಮೀಕಿ ಹಗರಣ: ಶರಣ್‌ಪ್ರಕಾಶ್‌, ದದ್ದಲ್‌ ರಾಜೀನಾಮೆಗೆ ಬಿಜೆಪಿ ಪಟ್ಟು

KannadaprabhaNewsNetwork | Updated : Jun 09 2024, 06:09 AM IST

ಸಾರಾಂಶ

  ಬಸನಗೌಡ ದದ್ದಲ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್‌ ಅವರ ರಾಜೀನಾಮೆ ಪಡೆಯಬೇಕು ಮತ್ತು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕ ಎನ್‌.ರವಿಕುಮಾರ್‌ ಆಗ್ರಹಿಸಿದ್ದಾರೆ.

  ಬೆಂಗಳೂರು :  ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದದ್ದಲ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್‌ ಅವರ ರಾಜೀನಾಮೆ ಪಡೆಯಬೇಕು ಮತ್ತು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕ ಎನ್‌.ರವಿಕುಮಾರ್‌ ಆಗ್ರಹಿಸಿದ್ದಾರೆ.

ಶನಿವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಒಂದಾದ ನಂತರ ಒಂದು ಸಾಕ್ಷ್ಯಾಧಾರಗಳು ಸಿಗುತ್ತಿವೆ. ಇದು ದಲಿತರ ಹಣ ಲೂಟಿಯ ಬ್ರಹ್ಮಾಂಡ ಭ್ರಷ್ಟಾಚಾರವಾಗಿದೆ. ಬೇರೆ ಬೇರೆ ಇಲಾಖೆಗಳಲ್ಲೂ ಭ್ರಷ್ಟಾಚಾರ ಹಗರಣ ನಡೆದಿರುವ ಮಾಹಿತಿ ಲಭ್ಯವಾಗುತ್ತಿದ್ದು, ಅವುಗಳ ಸಾಕ್ಷ್ಯಾಧಾರ ಸಂಗ್ರಹದ ಪ್ರಯತ್ನ ನಡೆದಿದೆ ಎಂದು ಹೇಳಿದರು. ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಪತ್ರದಲ್ಲಿ ಸಚಿವರ ಮೌಖಿಕ ಸೂಚನೆ ಮೇರೆಗೆ ಹಣದ ವರ್ಗಾವಣೆಯಾಗಿದೆ ಎಂದು ಉಲ್ಲೇಖಿಸಿದ್ದರು.

ಇದೀಗ ಲೆಕ್ಕಾಧಿಕಾರಿ ಪರಶುರಾಮ್ ಅವರು ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ಸಭೆ ಕುರಿತು ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭ್ರಷ್ಟರ ರಕ್ಷಣಾ ಖಾತೆಯ ಮುಖ್ಯಮಂತ್ರಿಯಾಗಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ನಡೆಸಿದ ಸಭೆಯ ಫೂಟೇಜ್ ರಕ್ಷಿಸಬೇಕು ಎಂದು ಒತ್ತಾಯಿಸಿದರು.

ರಾಹುಲ್ ಗಾಂಧಿ ಉತ್ತರ ಏನು:ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಶೇ.40 ಕಮಿಷನ್ ಇತ್ತು ಎಂಬ ಆರೋಪವನ್ನು ಅವರು ಸಾಬೀತು ಪಡಿಸಬೇಕು. ಕಾಂಗ್ರೆಸ್‌ ಸರ್ಕಾರದಲ್ಲಿ 187 ಕೋಟಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ರಾಹುಲ್ ಗಾಂಧಿ ಏನು ಹೇಳುತ್ತಾರೆ? ದಲಿತರ ಹಣ ಲೂಟಿ ಬಗ್ಗೆ ಏನು ಹೇಳುತ್ತಾರೆ? 11 ಸಾವಿರ ಕೋಟಿಗೂ ಹೆಚ್ಚು ಹಣ ಬೇರೆ ಇಲಾಖೆಗೆ ವರ್ಗಾವಣೆ ಮಾಡಿದ್ದರ ಕುರಿತು ಅವರು ಉತ್ತರ ಏನು? ರಾಜ್ಯದಿಂದ ರಾಹುಲ್‌ಗಾಂಧಿ, ಸುರ್ಜೇವಾಲಾ ಅವರಿಗೂ ಪಾಲು ಹೋಗಿದೆ ಎಂದು ಆರೋಪಿಸಿದರು.

ಒಬ್ಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನೊಬ್ಬರು ಸಾಕ್ಷ್ಯಾಧಾರ ಕುರಿತು ಆತಂಕ ಸೂಚಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರಿಗಳ ಸಾವಿಗೆ ಏನೇನೂ ಬೆಲೆ ಇಲ್ಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಹಗರಣವು ಸಂಘಟಿತ ಅಪರಾಧವಾಗಿದ್ದು, ಇದೊಂದು ಅಂತರಾಜ್ಯ ಮಟ್ಟದ ಅಪರಾಧ ಹಗರಣ. ತೆಲಂಗಾಣಕ್ಕೆ ಹಣ ಕಳುಹಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಅವರ ರಾಜೀನಾಮೆ ಅಗತ್ಯ ಎಂದರು.

Share this article