ಭಟ್ಕಳ: ವಾಲ್ಮಿಕಿ ಮಹರ್ಷಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ರಾಮಾಯಣದಿಂದ ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.
ತಾಲೂಕು ಆಡಳಿತ ಮತ್ತು ವಿವಿಧ ಇಲಾಖೆಗಳಿಂದ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಾನವ ಜೀವನದಲ್ಲಿ ಯಾವುದೇ ರೀತಿಯ ಬದಲಾವಣೆ ಹೊಂದಬಹುದು ಎನ್ನುವುದಕ್ಕೆ ವಾಲ್ಮೀಕಿ ಮಹರ್ಷಿ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಗೊತ್ತಿದ್ದೊ, ಗೊತ್ತಿಲ್ಲದೆಯೋ ತಪ್ಪು ಮಾಡಿದ ವಾಲ್ಮೀಕಿಯವರು ತಮ್ಮ ತಪ್ಪಿನ ಅರಿವಾಗಿ ಬದಲಾವಣೆಯತ್ತ ಮುಖ ಮಾಡಿದ್ದರಿಂದ ಅವರನ್ನು ಪೂಜಿಸುವುದಕ್ಕೆ ಸಾಧ್ಯವಾಗಿದೆ ಎಂದರು.ಮುಂದಿನ ಜನಾಂಗಕ್ಕೆ ಒಂದು ಉತ್ತಮ ಸಂದೇಶ ನೀಡಿದ ಅವರ ಕಾರ್ಯವನ್ನು ಸ್ಮರಿಸುವ ಸಲುವಾಗಿ ಸರ್ಕಾರ ಪ್ರತಿವರ್ಷ ವಾಲ್ಮೀಕಿ ಜಯಂತಿಯನ್ನು ಆಚರಿಸುವ ಮೂಲಕ ಅವರ ಸಂದೇಶವನ್ನು ಜನತೆಗೆ ಸಾರುವ ಕಾರ್ಯ ಮಾಡುತ್ತಿದೆ. ವಾಲ್ಮೀಕಿ ನಿಗಮವನ್ನು ಸ್ಥಾಪಿಸಿ ಪರಿಶಿಷ್ಟ ಪಂಗಡದವರ ಏಳಿಗೆಗಾಗಿ, ಮೂಲ ಸೌಕರ್ಯ ಒದಗಿಸುವುದಕ್ಕಾಗಿ ಸರ್ಕಾರ ಕ್ರಮ ಕೈಗೊಂಡಿದೆ ಎಂದರು.
ಸತ್ಯಸಾಯಿ ಸೇವಾ ಸಂಸ್ಥೆಯ ಜಿಲ್ಲಾ ಸಂಚಾಲಕ ಭಾಸ್ಕರ ನಾಯ್ಕ ಉಪನ್ಯಾಸ ನೀಡಿದರು. ತಹಸೀಲ್ದಾರ್ ಅಶೋಕ ಎನ್. ಭಟ್ಟ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತೆ ಡಾ. ನಯನಾ ಎಂ., ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ ನಾಯಕ, ಜಾಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜಪ್ಪ ಎನ್., ಗೊಂಡ ಸಮಾಜದ ಅಧ್ಯಕ್ಷ ನಾರಾಯಣ ಎಂ. ಗೊಂಡ, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ವೆಂಕಟೇಶ ಗೊಂಡ, ಮಾರುಕೇರಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಎಂ. ಗೊಂಡ, ಬೆಳಕೆ ಗ್ರಾಪಂ ಅಧ್ಯಕ್ಷ ಜಗದೀಶ ನಾಯ್ಕ, ನಾಮನಿರ್ದೇಶಿತ ಸದಸ್ಯ ಮಾದೇವ ಬಾಕಡ್ ಉಪಸ್ಥಿತರಿದ್ದರು. ಎಸ್ಎಸ್ಎಲ್‌ಸಿ ಪರೀಕ್ಷೆ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿನಿಯರಾದ ಸಂಜನಾ, ದೀಪಾಲಿ ಧನ್ಯ, ಜೀವಿತ, ವಿನುತ ಪ್ರಾರ್ಥಿಸಿ, ನಾಡಗೀತೆಯನ್ನು ಹಾಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ಹೆಗಡೆ ಸ್ವಾಗತಿಸಿದರು. ಶಿಕ್ಷಕ ಸುರೇಶ ಆಚಾರ್ಯ ನಿರ್ವಹಿಸಿದರು. ಪುರಸಭಾ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ವಂದಿಸಿದರು.