ಕನ್ನಡಪ್ರಭ ವಾರ್ತೆ ಪಾಂಡವಪುರ
ಪದವಿ ಶಿಕ್ಷಣದೊಂದಿಗೆ ಮೌಲ್ಯಯುತ ಕೋರ್ಸ್‌ಗಳು ಇಂದಿನ ಸ್ಪರ್ಧಾತ್ಮಕ ಔದ್ಯೋಗಿಕ ಜಗತ್ತಿಗೆ ಅತಿಮುಖ್ಯವಾಗಿವೆ ಎಂದು ಎಸ್‌ಟಿಜಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ನಿವೇದಿತ ನಾಗೇಶ್ ಹೇಳಿದರು.ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗ ಮತ್ತು ತರಬೇತಿ ಮತ್ತು ಉದ್ಯೋಗ ಕೋಶ, ಆಂತರೀಕ ಗುಣಮಟ್ಟಕೋಶ ಮತ್ತು ಟ್ಯಾಲಿ ಅಕಾಡೆಮಿ ಮುಂಬೈ ಸಹಯೋಗದೊಂದಿಗೆ ನಡೆದ ಶೈಕ್ಷಣಿಕ ಸಾಲಿನ ಮೌಲ್ಯಯುತ ಕೋರ್ಸ್, ಟ್ಯಾಲಿ ಪ್ರೈಮ್ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟ್ಯಾಲಿ ಪ್ರೈಮ್ ಕೋರ್ಸ್ ವಾಣಿಜ್ಯ ಮತ್ತು ನಿರ್ವಾಹಣಾ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾಗಿರುವ ಕೌಶಲ್ಯ ಮತ್ತು ಜ್ಞಾನದೊಂದಿಗೆ ಮುಂದಿನ ಔದ್ಯೋಗಿಕ ಜಗತ್ತಿಗೆ ಸಜ್ಜುಗೊಳಿಸುತ್ತದೆ ಎಂದರು.ಇಂದಿನ ಉದ್ಯಮಗಳ ಅವಶ್ಯಕತೆಗೆ ತಕ್ಕಂತಹ ಕೌಶಲ್ಯ ಮತ್ತು ಜ್ಞಾನವು ದೊರಕಿದೆ. ಔದ್ಯೋಗಿಕ ಕ್ಷೇತ್ರದೊಂದಿಗೆ ಶಿಕ್ಷಣ ಕ್ಷೇತ್ರದ ಅಂತರ ಕಡಿಮೆ ಮಾಡುವಲ್ಲಿ ಈ ರೀತಿಯ ಮೌಲ್ಯಯುತ ಕೋರ್ಸ್‌ಗಲು ಪ್ರಮುಖ ಪ್ರಾತ್ರವಹಿಸುತ್ತಿವೆ ಎಂದರು.
ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಮಾತನಾಡಿ, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಏಳಿಗೆಗಾಗಿ ಸಂಸ್ಥೆ ಅಧ್ಯಕ್ಷರಾದ ಸಿ.ಎಸ್.ಪುಟ್ಟರಾಜು, ಸಿಇಒ ಸಿ.ಪಿ.ಶಿವರಾಜು ಅವರು ಮತ್ತಷ್ಟು ಮೌಲ್ಯಯುತ ಕೋರ್ಸ್‌ಗಳನ್ನು ಪರಿಚಹಿಸಿ ಕಾರ್‍ಯಗತಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.ತರಬೇತಿ ಕಾರ್‍ಯಕ್ರಮವು ಪಠ್ಯಕ್ರಮದ ಪುಷ್ಠಿಕರಣದ ಅಂಗವಾಗಿದ್ದು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಸಹಾಯವಾಗಲಿದೆ. ಹಾಗಾಗಿ ವಿದ್ಯಾರ್ಥಿಗಳು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಇದೇ ವೇಳೆ ಟ್ಯಾಲಿ ಪ್ರೈಮ್ ಕೋರ್ಸ್ ಅನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ತರಬೇತಿ ಮತ್ತು ಉದ್ಯೋಗ ಕೋಶದ ಅಧಿಕಾರಿಗಳಾದ ಎಚ್.ಚರಣ್ ರಾಜ್, ವಾಣಿಜ್ಯ ವಿಭಾಗ ಸಹಾಯಕ ಪ್ರಾಧ್ಯಾಪಕರಾದ ಕೃತಿಕ ಮತ್ತು ಜಿ.ಇ.ಸುನಿಲ್, ಎಚ್.ಆರ್.ರಾಜೇಶ್ ಸೇರಿದಂತೆ ಹಲವರು ಇದ್ದರು.